Advertisement

ಚೆನ್ನಾವರ ಶಾಲೆಗೆ ಸತತ ಮೂರನೇ ಬಾರಿಗೆ ಪರಿಸರ ಮಿತ್ರ ಪ್ರಶಸ್ತಿ

04:47 PM Mar 05, 2018 | Team Udayavani |

ಸವಣೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್‌ ಕೊಡಮಾಡುವ ಪರಿಸರ ಮಿತ್ರ ಪ್ರಶಸ್ತಿ ಶಾಲೆ ಸವಣೂರು ಗ್ರಾ.ಪಂ. ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ. ಶಾಲೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟದ ಈ ಪ್ರಶಸ್ತಿ ಶಾಲೆಗೆ ಲಭಿಸುತ್ತಿರುವುದು ಇದು ಸತತ ಮೂರನೇ ಬಾರಿ.

Advertisement

ಬಂಟ್ವಾಳ ತಾ| ಆಡಳಿತ ಹಾಗೂ ಇತರ ಸಂಘ -ಸಂಸ್ಥೆಗಳ ಅಶ್ರಯದಲ್ಲಿ ಬಂಟ್ವಾಳದಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಗುರು ಶಾಂತಾ ಕುಮಾರಿ ಎನ್‌., ಸಹಶಿಕ್ಷಕಿ ಶ್ವೇತಾ, ಎಸ್‌ಡಿ ಎಂಸಿ ಉಪಾಧ್ಯಕ್ಷೆ ಯಶೋದಾ ರೈ ಹಾಗೂ ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು.

ಈ ಶಾಲೆಯಲ್ಲಿ ಕೊಳವೆ ಬಾವಿಗೆ ಜಲ ಮರುಪೂರಣ ಘಟಕ, ಮಳೆ ನೀರು ಕೊಯ್ಲು ಘಟಕ, ಆಲಂಕಾರಿಕ, ಹಣ್ಣಿನ ಗಿಡ ಬೆಳೆಸುವುದು, ತರಕಾರಿ ತೋಟ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಆವರಣದಲ್ಲಿ ನಿರಂತರ ಸ್ವಚ್ಛತೆ, ಕಸದ ತೊಟ್ಟಿ ಅಳವಡಿಕೆ ಮೊದಲಾದ ಪರಿಸರ ಸಂರಕ್ಷಣೆ ಪೂರಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ಮಾದರಿ ಶಾಲೆಯಾಗಿಸಲು ಪ್ರಯತ್ನ
ಶಾಲೆಯಲ್ಲಿ ಪರಿಸರ ಪೂರಕ ಚಟುವಟಿಕೆ ಸತತ ಮೂರನೇ ಬಾರಿಗೆ ನಮ್ಮ ಶಾಲೆ ಆಯ್ಕೆಯಾಗಿದ್ದು, ಸಂತಸ ತಂದಿದೆ. ಕ್ರಿಯಾಶೀಲ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ, ಸಿಆರ್‌ಪಿ ಹಾಗೂ ಊರವರ ಸಹಕಾರದಲ್ಲಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಪ್ರಶಸ್ತಿ ನಮ್ಮ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. 
– ಶಾಂತಾ ಕುಮಾರಿ ಎನ್‌.
ಮುಖ್ಯಗುರು ಚೆನ್ನಾವರ ಕಿ.ಪ್ರಾ. ಶಾಲೆ.

Advertisement

Udayavani is now on Telegram. Click here to join our channel and stay updated with the latest news.

Next