ನವದೆಹಲಿ: ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗಿರಲಿಲ್ಲ. ಈಗ ಚನ್ನಪಟ್ಟಣ ಬಗ್ಗೆ ಮಮತೆ ಬಂದಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದೆಹಲಿಯಲ್ಲಿ ಬೃಹತ್ ಕೈಗಾರಿಕೆ ಸಚಿವಾಲಯ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಪರ್ಧಿಸಲಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಇಲ್ಲಿಯವರೆಗೆ ಚನ್ನಪಟ್ಟಣ ಅಭಿವೃದ್ಧಿ ಮಾಡಬೇಡಿ ಎಂದು ಡಿಕೆ ಶಿವಕುಮಾರ್ರನ್ನು ತಡೆದಿದ್ದು ಯಾರು? ಸಂಸದರಾಗಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕೊಡುಗೆ ಏನು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ನಮ್ಮ ಕಡೆಯಿಂದ ಅಭ್ಯರ್ಥಿ ಯಾರು ಎಂದು ಕಾಲ ನಿರ್ಧರಿಸುತ್ತದೆ ಎಂದು ಹೇಳಿದರು.
ಆರೋಗ್ಯಕ್ಕೆ ಯೋಗ ಸಹಾಯಕ:
ಯೋಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. 2014ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಕಾಯಿಲೆಗಳಿಂದ ಸ್ವಲ್ಪ ಮುಕ್ತಿ ನೀಡುತ್ತದೆ. ಆರೋಗ್ಯವಂತವಾಗಿರಲು ನಿತ್ಯ ಯೋಗ ಅಳವಡಿಸಿಕೊಳ್ಳಬೇಕು. ಕಾಶ್ಮೀರದಲ್ಲಿ ಮೋದಿ ಯೋಗ ಮಾಡುತ್ತಿರುವುದು ಒಳ್ಳೆಯ ಸಂದೇಶ ಎಂದು ಕುಮಾರಸ್ವಾಮಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕಡಿಮೆ ಸೀಟು ಬರಲು ಇವಿಎಂ ಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಕರ್ನಾಟಕದ ಲೋಕಸಭಾ ಫಲಿತಾಂಶಕ್ಕೆ ಇವಿಎಂ ಕಾರಣವಾದರೆ, 2023ರ ವಿಧಾನಸಭೆ ವಿಧಾನ ಸಭೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರ ಗೆದ್ದಿತ್ತಲ್ಲ, ಆಗ ಇವಿಎಂ ದೋಷವಿತ್ತಾ? ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.