Advertisement

ರಾಜಧಾನಿಯಲ್ಲೂ ಚೆನ್ನಮ್ಮ ಪಡೆ

12:15 PM Apr 08, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ನಗರ ಪೊಲೀಸರು ಇಲ್ಲೂ ಬೆಳಗಾವಿ ಮಾದರಿಯ “ಚೆನ್ನಮ್ಮ ಮಹಿಳಾ ಪಡೆ’ ರಚಿಸಲು ಯೋಜನೆ ರೂಪಿಸಿದ್ದಾರೆ.

Advertisement

ಮಹಿಳೆಯರು, ಯುವತಿಯರಿಗೆ ಬೀದಿ ಕಾಮಣ್ಣರಿಂದ ರಕ್ಷಣೆ ನೀಡಲು ಹಾಗೂ ಬೆಂಗಳೂರಿನಲ್ಲಿ ಮಹಿಳಾ ಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ನಗರ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳನ್ನು ಪಟ್ಟಿ ಮಾಡಿರುವ ಅಧಿಕಾರಿಗಳು, ಸೇಫ್ ಸಿಟಿ ಯೋಜನೆಯಡಿ ಈ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಚುಡಾಯಿಸುವುದು, ಕಿರುಕುಳ, ಮಕ್ಕಳ ಮೇಲಿನ ದೌರ್ಜನ್ಯ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ, ವಾಟ್ಸ್‌ ಆ್ಯಪ್‌ಗ್ಳಲ್ಲಿ ಅಶ್ಲೀಲ ಸಂದೇಶ ರವಾನೆ, ಹೀಗೆ ಹಲವು ರೀತಿಯಲ್ಲಿ ಕಿರುಕುಳ ನೀಡುವ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸರಿಗೆ ದೂರು ನೀಡದೆ ಸುಮ್ಮನಾಗುತ್ತಾರೆ.

ಅಂತಹ ಪ್ರಕರಣಗಳ ಕುರಿತು ನಿಗಾ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಸಂತ್ರಸ್ತರಿಗೆ ರಕ್ಷಣೆ ನೀಡುವುದು ಚೆನ್ನಮ್ಮ ಪಡೆಯ ಉದ್ದೇಶ. ಆ ಹಿನ್ನೆಲೆಯಲ್ಲಿ ಪಡೆ ರಚನೆಗೆ ಅಗತ್ಯ ಸೌಲಭ್ಯ, ಮಾನವ ಸಂಪನ್ಮೂಲ, ವಿಶೇಷ ಆ್ಯಪ್‌, ಪ್ರಚಾರ, ಪ್ರಕರಣಗಳ ನಿರಂತರ ಪ್ರಗತಿ ಪರಿಶೀಲನೆಗಾಗಿ ವಿಶೇಷ ನಿಯೋಜಿತ ತಂಡ ರಚನೆಗೆ ಅಗತ್ಯ ಅನುದಾನ ನೀಡುವಂತೆ ಕೋರಿದೆ.

ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಪ್ರಸ್ತಾವವನ್ನು ಬಿಬಿಎಂಪಿ ಸಹಯೋಗದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಸ್ತಾವದಲ್ಲಿ ಮಹಿಳಾ ಸುರಕ್ಷತೆಗೆ ನಗರದಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಲಾಗಿದೆ. 

Advertisement

5,500 ಸಿಸಿಟಿವಿ ಕ್ಯಾಮೆರಾ ಅಗತ್ಯ: ಪೊಲೀಸ್‌ ಇಲಾಖೆಯಿಂದ ಅಪರಾಧ ಪ್ರಕರಣಗಳ ಮೇಲೆ ನಿಗಾ ವಹಿಸಲು ನಗರದ 1,100 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಇನ್ನು 5500 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಉದ್ದೇಶಿಸಿದೆ. ಅತ್ಯಾಧುನಿಕ ತಂತ್ರಜ್ಞಾನದ ಬುಲೆಟ್‌, ಪಿಟಿಜಡ್‌, ಎಎನ್‌ಪಿಆರ್‌, ಎಫ್ಆರ್‌ ಕ್ಯಾಮೆರಾ ಅಳವಡಿಕೆ ಹಾಗೂ ಕೇಂದ್ರೀಕೃತ ನಿಯಂತ್ರಣ ಕೊಠಡಿ ರಚಿಸುವ ಕುರಿತು ಉಲ್ಲೇಖೀಸಲಾಗಿದೆ. 

ಪ್ರತಿ ಠಾಣೆಗೂ ಸಮಾಲೋಚಕರು ಬೇಕು: ದೌರ್ಜನ್ಯ ಅಥವಾ ಕಿರುಕುಳಕ್ಕೆ ಒಳಗಾಗಿರುವ ಸಂತ್ರಸ್ತ ಮಹಿಳೆಯರು ಅಥವಾ ಮಕ್ಕಳೊಂದಿಗೆ ಆಪ್ತ ಸಮಾಲೋಚನೆಗಾಗಿ ಪ್ರತಿ ಠಾಣೆಯಲ್ಲಿ ತಜ್ಞ ಸಮಾಲೋಚಕರ ನೇಮಕ ಅಗತ್ಯವಿದೆ.

ಮಹಿಳೆಯರ ಮೇಲಿನ ದೂರುಗಳಿಗೆ ಸ್ಪಂದಿಸಲು ಸದ್ಯ 12 ನಿಮಿಷಗಳಾಗುತ್ತಿದ್ದು, ಶೀಘ್ರ ಅವರ ದೂರಿಗೆ ಸ್ಪಂದಿಸಲು ಹೆಚ್ಚಿನ ವಾಹನಗಳ ಅಗತ್ಯವಿದೆ. ಸದ್ಯ ಇಲಾಖೆಯ ಬಳಿ 272 ಹೊಯ್ಸಳ ಹಾಗೂ 108 ಪಿಂಕ್‌ ಹೊಯ್ಸಳಗಳು ಲಭ್ಯವಿದ್ದು, ಹೆಚ್ಚುವರಿಯಾಗಿ 300 ಕಾರು ಹಾಗೂ 1000 ದ್ವಿಚಕ್ರ ವಾಹನ ಬೇಕಾಗುತ್ತದೆ ಎಂದು ವಿವರಿಸಲಾಗಿದೆ.

ಕೇಂದ್ರೀಕೃತ ಮಹಿಳಾ ಸಹಾಯ ಕೇಂದ್ರದ ವಿಶೇಷತೆ 
-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಗತಿ ಪರಿಶೀಲನೆ
-ವೈದ್ಯಕೀಯ ಸೌಲಭ್ಯ
-ಆಪ್ತ ಸಮಾಲೋಚನಾ ಕೊಠಡಿ
-ಮೊಬೈಲ್‌ ಮೂಲಕ ಸಮಾಲೋಚನೆ ವ್ಯವಸ್ಥೆ
-ಹೇಳಿಕೆ ದಾಖಲೀಕರಣ ಕೊಠಡಿ
-ನ್ಯಾಯಾಲಯದೊಂದಿಗೆ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ

ಮಹಿಳಾ ಸುರಕ್ಷತೆಗೆ ಉದ್ದೇಶಿತ ಯೋಜನೆ 
-ವಿಧಿ ವಿಜ್ಞಾನ ಕಿಟ್‌
-10 ಮಹಿಳೆಯರಿಗೆ ಸುರಕ್ಷಾ ಮಿತ್ರ ಬ್ಯಾಂಡ್‌
-ಮೊಬೈಲ್‌ ಕಮಾಂಡ್‌ ಸೆಂಟರ್‌
-ಪ್ರಾಯೋಗಿಕವಾಗಿ 50 ಸ್ಥಳಗಳಲ್ಲಿ ಸುರಕ್ಷತೆಗೆ ಒತ್ತು ನೀಡುವುದು
-ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು
-ಕೇಂದ್ರೀಕೃತ ಸಹಾಯ ಕೇಂದ್ರ

ಅಂಕಿಗಳಲ್ಲಿ ಸ್ತ್ರೀ ದೌರ್ಜನ್ಯ
ವರ್ಷ    ಪ್ರಕರಣಗಳು

-2015    2370
-2016    2345
-2017    2623

ಪ್ರಮುಖ ಅಂಶಗಳು
-60 ಸಾವಿರ: ನಗರದಲ್ಲಿ ಪ್ರತಿ ವರ್ಷ ಸರಾಸರಿ ದಾಖಲಾಗುವ ಪ್ರಕರಣ
-2013: ಪ್ರತಿ ಒಂದು ಲಕ್ಷ ಜನರಿಗೆ ನಗರದಲ್ಲಿರುವ ಪೊಲೀಸರ ಸಂಖ್ಯೆ
-ಶೇ.8.5: ಒಟ್ಟು ಪೊಲೀಸರಲ್ಲಿರುವ ಮಹಿಳಾ ಪೊಲೀಸ್‌ ಸಿಬ್ಬಂದಿ ಪ್ರಮಾಣ 

3 ವರ್ಷಗಳಲ್ಲಿ ಹೆಚ್ಚು ಎಫ್ಐಆರ್‌ ದಾಖಲಾದ 5 ಠಾಣೆಗಳು
ಠಾಣೆ    ದಾಖಲಾದ ಎಫ್ಐಆರ್‌    ಡಯಲ್‌ 100ಗೆ ಬಂದ ದೂರು

-ರಾಜಗೋಪಾಲನಗರ    243    421
-ಪೀಣ್ಯ    219    472
-ಮಡಿವಾಳ    159    290
-ಮೈಕೋ ಬಡಾವಣೆ    158    284
-ಬಾಣಸವಾಡಿ    151    532

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next