ಸುರತ್ಕಲ್ಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯು ಚೆನ್ನೈಯಲ್ಲಿ ಶಾಂಭವಿ ವಿಜಯ ಹಾಗೂ ದಕ್ಷ ಯಜ್ಞ ಪ್ರಸಂಗಗಳನ್ನು ತಾಳ ಮದ್ದಳೆಯಾಗಿ ಪ್ರದರ್ಶಿಸಿ ಅಲ್ಲಿನ ಕನ್ನಡಿಗರ ಮನ ಗೆದ್ದಿದೆ. ಮಂಡಳಿಯ 251ನೇ ಕಾರ್ಯಕ್ರಮವಾಗಿ ಶಾಂಭವಿ ವಿಜಯ ಪ್ರಸಂಗ ನಡೆಯಿತು.
ಮಹಿಷಾಸುರನ ವಧೆಯ ಬಳಿಕ ಶ್ರೀ ದೇವಿಯು ಕದಂಬ ವನದಲ್ಲಿ ಕನಕ ಉಯ್ನಾಲೆಯಲ್ಲಿ ಕುಳಿತು ಕದಂಬ ಕೌಶಿಕೆಯಾಗಿ ಲೋಕ ಕಂಟಕನಾಗಿ ಮೆರೆಯುತ್ತಿರುವ ಶುಂಭಾಸುರನನ್ನು ತನ್ನ ಮೋಹಕ ರೂಪಿನಿಂದ ತಾನಿದ್ದೆಡೆಗೆ ಬರುವಂತಾಗಿಸಿ ನಿಗ್ರಹಿಸಿದುದೇ ಈ ದೇವಿ ಮಹಾತೆ¾ಯ ಅಂತ್ಯಭಾಗದ ಕಥಾವಸ್ತು. ಮಂಡಳಿಯ ಅಧ್ಯಕ್ಷೆ ಸುಲೋಚನಾ ವಿ.ರಾವ್ ಶ್ರೀ ದೇವಿಯಾಗಿ ಸ್ವರ ಗಾಂಭೀರ್ಯದಿಂದ ಭವ್ಯವಾಗಿ ನಿರ್ವಹಿಸಿದರು. ಶುಂಭಾಸುರನಾಗಿ ಲಲಿತ ಭಟ್ ಅಬ್ಬರದ ನುಡಿಗಳಿಂದ, ರಕ್ತ ಬೀಜನಾಗಿ ದೀಪ್ತಿ ಭಟ್ ಉನ್ನತ ಮಟ್ಟದ ವಿಷಯ ಮಂಡನೆ ಸಮರ್ಥನೆಗಳೊಂದಿಗೆ, ಸುಗ್ರೀವನಾಗಿ ಜಯಂತಿ ಎಸ್. ಹೊಳ್ಳ ಭಕ್ತಿರಸದ ಹೊನಲನ್ನು ಹರಿಸಿದರೆ, ದೇವೇಂದ್ರನಾಗಿ ಕಲಾವತಿ ಪಾತ್ರ ವಹಿಸಿದರು.
ದಕ್ಷಯಜ್ಞ ಪ್ರಸಂಗವು ಶಿವನ ಮಡದಿಯಾದ ಸತಿಯು ತನ್ನ ತಂದೆ ದಕ್ಷ ಪ್ರಜಾಪತಿ ದ್ವೇಷದಿಂದ ಮಾಡುವ ಯಜ್ಞಕ್ಕೆ ಹೇಳಿಕೆಯಿಲ್ಲದಿದ್ದರೂ, ತವರು ಮನೆಯ ಮೇಲಿನ ಮೋಹದಿಂದ ತೆರಳಿ, ಅಲ್ಲಿ ಅವಮಾನಿಸಲ್ಪಟ್ಟಾಗ ದಕ್ಷನಿಂದಾದ ಈ ದೇಹವೇ ಬೇಡವೆಂದು ಯೋಗಾಗ್ನಿಯಿಂದ ದಹಿಸಿಕೊಂಡ ಕತೆ. ವಿಷಯ ತಿಳಿದು ಕ್ರೋಧಗೊಂಡ ಶಿವನಿಂದ ಉದ್ಭವಿಸಿದ ವೀರಭದ್ರ ಯಾಗವನ್ನು ಧ್ವಂಸಗೊಳಿಸಿ ದಕ್ಷನನ್ನು ಕೊಲ್ಲುತ್ತಾನೆ. ಕೊನೆಗೆ ವಿಷ್ಣುವಿನ ಪ್ರವೇಶದಿಂದ ಯಾಗ ಪೂರ್ಣಗೊಳ್ಳುತ್ತದೆ. ಪ್ರಧಾನ ಪಾತ್ರವಾದ ದಾಕ್ಷಾಯಿಣಿಯಾಗಿ ಸುಲೋಚನಾ ವಿ.ರಾವ್ ಭಾವನಾತ್ಮಕವಾಗಿ ಆತಂಕಗಳನ್ನು ಚಿತ್ರಿಸಿದರೆ ಉತ್ತರಾರ್ಧದಲ್ಲಿ ತಂದೆಯಿಂದ ಅವಮಾನಿತಳಾದಾಗ ಕೋಪದ ಸನ್ನಿವೇಶ ಚಿತ್ರಣ ಪ್ರೇಕ್ಷಕರು ನಿಬ್ಬೆರಗಾಗುವಂತಾಗಿಸಿತು. ದಕ್ಷನಾಗಿ ಜಯಂತಿ ಹೊಳ್ಳ ಏರು ಧ್ವನಿಯ ವ್ಯಂಗ್ಯ ಮಿಶ್ರಿತ ನಿಂದನೆಯಿಂದ ರಂಜಿಸಿದರೆ, ಲಲಿತಾ ಭಟ್ ಈಶ್ವರನಾಗಿ ರುದ್ರರೂಪಿಯಾಗಿಯೇ ನಿರ್ವಹಿಸಿದರು. ವೀರಭದ್ರನಾಗಿ ದೀಪ್ತಿ ಭಟ್ ಅಬ್ಬರದಿಂದ ಮೆರೆದರೆ, ದೇವೇಂದ್ರನಾಗಿ ಕಲಾವತಿ ಸಮರ್ಥವಾಗಿ ತನ್ನ ಪೋಷಕ ಪಾತ್ರವನ್ನು ನಿರ್ವಹಿಸಿದರು.
ವಿಜಯಕುಮಾರ್ ಕುಂಬ್ಳೆ ಭಾಗವತರಾಗಿ, ಅವಿನಾಶ ಬೈಪಡಿತ್ತಾಯ ಮದ್ದಳೆಯಲ್ಲಿ ಹಾಗೂ ವೇಣುಗೋಪಾಲ ಪಡ್ರೆ ಚಂಡೆಯಲ್ಲಿ ಸಹಕರಿಸಿದರು.
ಯಕ್ಷಪ್ರಿಯ