Advertisement

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವು

11:32 PM Apr 12, 2022 | Team Udayavani |

ಮುಂಬೈ: ಆರಂಭಿಕ ರಾಬಿನ್‌ ಉತ್ತಪ್ಪ ಮತ್ತು ಶಿವಂ ದುಬೆ ಅವರ ಭರ್ಜರಿ ಆಟ ಫ‌ಲ ನೀಡಿದೆ. ಮಂಗಳವಾರ ರಾತ್ರಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿದೆ.

Advertisement

ಅಲ್ಲಿಗೆ ಚೆನ್ನೈನ ಸತತ 4 ಪಂದ್ಯಗಳ ಸೋಲಿನ ಸರಪಳಿ ಅಂತ್ಯವಾಯಿತು. ಬೆಂಗಳೂರು 5 ಪಂದ್ಯಗಳಲ್ಲಿ 2ನೇ ಸೋಲನುಭವಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟಿಗೆ 216 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು.

ಇದು ಈ ಐಪಿಎಲ್‌ನ ಅತ್ಯಧಿಕ ಮೊತ್ತವೂ ಆಗಿದೆ. ಇದನ್ನು ಬೆನ್ನತ್ತಿದ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 193 ರನ್‌ ಗಳಿಸಿತು. ಆರ್‌ಸಿಬಿ ಪರ ಶಹಬಾಝ್ ಅಹ್ಮದ್‌ (41 ರನ್‌, 27 ಎಸೆತ), ಸುಯಶ್‌ ಪ್ರಭುದೇಸಾಯಿ (34 ರನ್‌, 18 ಎಸೆತ), ದಿನೇಶ್‌ ಕಾರ್ತಿಕ್‌ (34 ರನ್‌, 14 ಎಸೆತ) ಉತ್ತಮ ಬ್ಯಾಟಿಂಗ್‌ ನಡೆಸಿದರು. ಆದರೆ ಇದು ಗೆಲುವಿಗೆ ಸಾಕಾಗಲಿಲ್ಲ. ಚೆನ್ನೈ ಪರ ಮಹೀಶ್‌ ತೀಕ್ಷಣ 33 ರನ್‌ ನೀಡಿ 4, ಜಡೇಜ 39 ರನ್‌ ನೀಡಿ 3 ವಿಕೆಟ್‌ ಪಡೆದು ಬೆಂಗಳೂರನ್ನು ಪೂರ್ಣವಾಗಿ ನಿಯಂತ್ರಿಸಿದರು.

ಉತ್ತಪ್ಪ-ದುಬೆ ಭರ್ಜರಿ ಆಟ: ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಪರ ರಾಬಿನ್‌ ಉತ್ತಪ್ಪ ಮತ್ತು ಶಿವಂ ದುಬೆ ಅವರು ಆರ್‌ಸಿಬಿ ದಾಳಿಯನ್ನು ದಂಡಿಸಿದರು. ಆಕಾಶ್‌ದೀಪ್‌, ಹಸರಂಗ, ಮ್ಯಾಕ್ಸ್‌ವೆಲ್‌ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದು ಪ್ರೇಕ್ಷಕರನ್ನು ರಂಜಿಸಿದರು. ಮೂರನೇ ವಿಕೆಟಿಗೆ 165 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಇವರಿಬ್ಬರು ಚೆನ್ನೈ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಸಿರಾಜ್‌ ಅವರ 17ನೇ ಮತ್ತು ಆಕಾಶ್‌ದೀಪ್‌ ಅವರ 18ನೇ ಓವರಿನಲ್ಲಿ ಅವರಿಬ್ಬರು ಬ್ಯಾಟಿಂಗ್‌ ವೈಭವ ಮೆರೆದರು.

Advertisement

19ನೇ ಓವರಿನಲ್ಲಿ ತಂಡವು ಸತತ ಎರಡು ಎಸೆತಗಳಲ್ಲಿ ಉತ್ತಪ್ಪ ಮತ್ತು ಜಡೇಜ ಅವರ ವಿಕೆಟನ್ನು ಕಳೆದುಕೊಂಡಿತು. ಶತಕದ ಕಡೆಗೆ ಮುನ್ನುಗ್ಗುತ್ತಿದ್ದ ಉತ್ತಪ್ಪ 88 ರನ್‌ ಗಳಿಸಿ ಹಸರಂಗ ಅವರಿಗೆ ವಿಕೆಟ್‌ ಒಪ್ಪಿಸಿದರು. ಇದು ಅವರ ಐಪಿಎಲ್‌ನ ಗರಿಷ್ಠ ಮೊತ್ತವೂ ಆಗಿದೆ. 50 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 9 ಸಿಕ್ಸರ್‌ ಬಾರಿಸಿದರು. ಮುಂದಿನ ಎಸೆತದಲ್ಲಿ ನಾಯಕ ಜಡೇಜ ಔಟಾದರು.

ಉತ್ತಪ್ಪ ಅವರಿಗೆ ಉತ್ತಮ ಬೆಂಬಲ ನೀಡಿದ ಶಿವಂ ದುಬೆ ಶತಕ ದಾಖಲಿಸುವ ಅವಕಾಶ ಪಡೆದಿದ್ದರು. ಆದರೆ ಅದಕ್ಕೆ ಹೇಝಲ್‌ವುಡ್‌ ಅವಕಾಶ ನೀಡಲಿಲ್ಲ. ಅಂತಿಮವಾಗಿ ದುಬೆ 95 ರನ್‌ ಗಳಿಸಿ ಅಜೇಯರಾಗಿ ಉಳಿದರು. 46 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 8 ಸಿಕ್ಸರ್‌ ಸಿಡಿಸಿದ್ದರು.

ಚೆನ್ನೈನ ಆರಂಭ ಉತ್ತಮವಾಗಿರಲಿಲ್ಲ. ಇನಿಂಗ್ಸ್‌ ಆರಂಭಿಸಿದ ರಾಬಿನ್‌ ಉತ್ತಪ್ಪ ಮತ್ತು ಋತುರಾಜ್‌ ಗಾಯಕ್ವಾಡ್‌ ಮೊದಲ ವಿಕೆಟಿಗೆ 19 ರನ್‌ ಪೇರಿಸಲಷ್ಟೇ ಶಕ್ತರಾದರು. ಗಾಯಕ್ವಾಡ್‌ ವಿಕೆಟನ್ನು ಹೇಝಲ್‌ವುಡ್‌ ಹಾರಿಸಲು ಯಶಸ್ವಿಯಾದರು. ಆಬಳಿಕ ಬೆಂಗಳೂರಿನ ಉತ್ತಮ ಫೀಲ್ಡಿಂಗ್‌ನಿಂದಾಗಿ ಮೋಯಿನ್‌ ಅಲಿ ರನೌಟಾದರು.

ಉತ್ತಪ್ಪ ಮತ್ತು ಶಿವಂ ದುಬೆ ಭರ್ಜರಿಯಾಗಿ ಆಡುವ ಮೂಲಕ ಚೆನ್ನೈ ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು. ಆರ್‌ಸಿಬಿ ದಾಳಿಯನ್ನು ತೀವ್ರವಾಗಿ ದಂಡಿಸಿದ ಅವರಿಬ್ಬರು ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಮೂರನೇ ವಿಕೆಟಿಗೆ 165 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ ಕಿಂಗ್ಸ್‌ 20 ಓವರ್‌, 216/4 (ಶಿವಂ ದುಬೆ 95, ರಾಬಿನ್‌ ಉತ್ತಪ್ಪ 88, ವನಿಂದು ಹಸರಂಗ 35ಕ್ಕೆ 2). ಬೆಂಗಳೂರು 20 ಓವರ್‌, 193/9 (ಶಹಬಾಝ್ ಅಹ್ಮದ್‌ 41, ದಿನೇಶ್‌ ಕಾರ್ತಿಕ್‌ 34, ಮಹೀಶ್‌ ತೀಕ್ಷಣ 33ಕ್ಕೆ 4, ರವೀಂದ್ರ ಜಡೇಜ 39ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next