Advertisement

ಚೆನ್ನೈ ಭವಿಷ್ಯ ಮುಂಬೈ ಕೈಯಲ್ಲಿ: ಸೇಡಿಗೆ ಮುಂಬೈ ಕಾತರ, ಚೆನ್ನೈ ಸೋತರೆ ಬಹುತೇಕ ಔಟ್

04:02 PM Oct 23, 2020 | keerthan |

ಶಾರ್ಜಾ: ಈ ಬಾರಿಯ ಐಪಿಎಲ್‌ ಉದ್ಘಾಟನಾ ಪಂದ್ಯವನ್ನಾಡಿದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರನ್ನರ್ ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮರು ಪಂದ್ಯಕ್ಕೆ ಸಜ್ಜಾಗಿವೆ. ಶುಕ್ರವಾರದ 41ನೇ ಐಪಿಎಲ್‌ ಪಂದ್ಯದಲ್ಲಿ ಇವು ಮುಖಾಮುಖೀಯಾಗಲಿವೆ.

Advertisement

ಮೊದಲ ಪಂದ್ಯದಲ್ಲಿ ಮುಂಬೈಯನ್ನು 5 ವಿಕೆಟ್‌ ಗಳಿಂದ ಮಣಿಸಿ ಗೆಲುವಿನ ಅಭಿಯಾನ ಆರಂಭಿಸಿದ ಚೆನ್ನೈ ಅನಂತರ ಕುಸಿಯುತ್ತಲೇ ಹೋಗಿ ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ಅಂಟಿಕೊಂಡಿದೆ. ಧೋನಿ ಬಳಗಕ್ಕೆ ಹಿಂದೆಂದೂ ಇಂಥ ದಯನೀಯ ಸ್ಥಿತಿ ಎದುರಾಗಿರಲಿಲ್ಲ. ಇನ್ನೊಂದೆಡೆ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡ ಮುಂಬೈ ತೃತೀಯ ಸ್ಥಾನಿಯಾಗಿದ್ದು, ಪ್ಲೇ ಆಫ್ ಬಾಗಿಲಲಿ ನಿಂತಿದೆ,

ಸೋತರೆ ಕತೆ ಮುಗಿದಂತೆ!

ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಮತ್ತೆ ಮುಂಬೈಯನ್ನು ಮಣಿಸಿ ಹೋರಾಟವನ್ನು ಜಾರಿಯಲ್ಲಿರಿಸೀತೇ ಎಂಬುದು ಧೋನಿ ಅಭಿಮಾನಿಗಳ ನಿರೀಕ್ಷೆ. ಸೋತರೆ ಚೆನ್ನೈ ಕತೆ ಮುಗಿದಂತೆ. ಹೀಗಾಗಿ ಚೆನ್ನೈ ಭವಿಷ್ಯವೀಗ ಮುಂಬೈ ಕೈಯಲ್ಲಿದೆ ಎನ್ನಲಡ್ಡಿಯಿಲ್ಲ. ಚೆನ್ನೈ ತಂಡದಲ್ಲಿ ಕಣ್ಣಿಗೆ ರಾಚುವಂಥ ಅನೇಕ ಸಮಸ್ಯೆಗಳಿವೆ. ಒಂದೇ ಸಾಲಲ್ಲಿ ಹೇಳುವುದಾದರೆ, ಯಾರಲ್ಲೂ ಟಿ20 ಜೋಶ್‌ ಕಾಣಿಸುತ್ತಿಲ್ಲ. ಬ್ಯಾಟಿಂಗ್‌-ಬೌಲಿಂಗ್‌ ಎರಡೂ ಕೈಕೊಡುತ್ತಿದೆ. ಬ್ರಾವೊ ಇದ್ದರೂ ಚೆನ್ನೈ ಗೆಲ್ಲುತ್ತಿತ್ತು ಎಂದು ಹೇಳುವ ಧೈರ್ಯ ಕೂಡ ಇಲ್ಲ. ಅಷ್ಟರ ಮಟ್ಟಿಗೆ ತಂಡ ನಿತ್ರಾಣಗೊಂಡಿದೆ.

ಧೋನಿಗೆ ಹಲವು ಸವಾಲು

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಧೋನಿ ಈ ಐಪಿಎಲ್‌ನ ಕೇಂದ್ರಬಿಂದು ಆಗಿದ್ದರು. ಆದರೆ ಧೋನಿ ಪ್ರದರ್ಶನ, ಅವರ ಹೇಳಿಕೆ, ತಂಡದ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಮಚ್ಚುಗೆಗಿಂತ ಟೀಕೆಗಳೇ ವ್ಯಕ್ತವಾಗುತ್ತಿವೆ. ಕಳೆದ ಸೋಲಿನ ಬಳಿಕ ಮಾತನಾಡಿದ ಧೋನಿ, ತಂಡದ ಯುವ ಆಟಗಾರರಲ್ಲಿ “ಸ್ಪಾರ್ಕ್‌’ ಇಲ್ಲ ಎಂದಿದ್ದರು. ಇದಕ್ಕೆ ಅಭಿಮಾನಿಗಳು, ಮಾಜಿಗಳಿಂದ ತೀವ್ರ ಆಕ್ರೋಶ ಹೊರಹೊಮ್ಮಿತ್ತು. ಯುವಕರಿಗೆ ಅವಕಾಶನ್ನೇ ನೀಡದೆ ಈ ರೀತಿ ಹೇಳುವುದು ಸರಿಯಲ್ಲ ಎಂದಿದ್ದರು. ಹೀಗಾಗಿ ಧೋನಿ ಈ ಪಂದ್ಯವನ್ನು ಗೆದ್ದು ಟೀಕಾಕಾರರ ಬಾಯಿ ಮುಚ್ಚಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಮುಂಬೈ ಸಮರ್ಥ ಪಡೆ

ಇನ್ನೊಂದೆಡೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಮುಂಬೈ ಬಲಿಷ್ಠವಾಗಿ ಗೋಚರಿಸುತ್ತಿದೆ. ತಂಡ ಎಷ್ಟೇ ಸಂಕಟದ ಸ್ಥಿತಿಯಲ್ಲಿದ್ದರೂ ಯಾರಾದರೂ ಸಿಡಿದು ನಿಂತು ಆಸರೆಯಾಗಬಲ್ಲರು. ಇತರ ತಂಡಗಳಂತೆ ಕೇವಲ ಒಬ್ಬಿಬ್ಬರು ಆಟಗಾರರನ್ನೇ ನಂಬಿ ಕುಳಿತುಕೊಳ್ಳುವ ಸ್ಥಿತಿ ಇಲ್ಲ. ಇದೇ ಮುಂಬೈ ತಂಡದ ವೈಶಿಷ್ಟ್ಯ.

Advertisement

Udayavani is now on Telegram. Click here to join our channel and stay updated with the latest news.

Next