Advertisement

IPL ಇಂದು ಗಾಯಕ್ವಾಡ್‌-ಗಿಲ್‌ ಮುಖಾಮುಖಿ; ಗೆದ್ದ ತಂಡಗಳ ನಡುವಿನ ಕದನ

11:57 PM Mar 25, 2024 | Team Udayavani |

ಚೆನ್ನೈ: ಇದು ಋತುರಾಜ್‌ ಗಾಯಕ್ವಾಡ್‌ ಮತ್ತು ಶುಭಮನ್‌ ಗಿಲ್‌ ನಡುವಿನ ಐಪಿಎಲ್‌ ಸಮರ. ಇಬ್ಬರೂ ಐಪಿಎಲ್‌ನ ಹೊಸ ನಾಯಕರು. ಇಬ್ಬರೂ ಆರಂಭಿಕ ಪಂದ್ಯದಲ್ಲಿ ಗೆಲುವಿನ ರುಚಿ ಅನುಭವಿಸಿದ್ದಾರೆ. ಸತತ 2ನೇ ಜಯ ದಾಖಲಿಸಲಿರುವ ತಂಡ ಯಾವುದು ಎಂಬುದು ಮಂಗಳವಾರದ ಕುತೂಹಲ.

Advertisement

ಚೆನ್ನೈ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಮಣಿಸಿದರೆ, ಗುಜರಾತ್‌ 6 ರನ್ನುಗಳಿಂದ ಮುಂಬೈಗೆ ಆಘಾತವಿಕ್ಕಿತ್ತು. ಇದರಲ್ಲಿ ಚೆನ್ನೈ ತಂಡದ್ದು ವೀರೋಚಿತ ಗೆಲುವು. ತವರಿನಂಗಳದಲ್ಲಿ ತಾನು ಹೆಚ್ಚು ಬಲಿಷ್ಠ ಎಂಬುದನ್ನು ಗಾಯಕ್ವಾಡ್‌ ನಾಯಕತ್ವದಲ್ಲೂ ಸಿಎಸ್‌ಕೆ ಸಾಬೀತುಪಡಿಸಿದೆ. ಇನ್ನೊಂದೆಡೆ ಮುಂಬೈ ವಿರುದ್ಧ ಸೋಲುವ ಹಂತದಲ್ಲಿದ್ದ ಗುಜರಾತ್‌ ನಂಬಲಾಗದ ಜಯ ಸಾಧಿಸಿದ ಖುಷಿಯಲ್ಲಿದೆ. ಡೆತ್‌ ಓವರ್‌ಗಳಲ್ಲಿ ಮುಂಬೈಯ 6 ವಿಕೆಟ್‌ ಹಾರಿಸಿದ್ದು ಗುಜರಾತ್‌ ತಿರುಗೇಟಿಗೆ ಅತ್ಯುತ್ತಮ ನಿದರ್ಶನ.

ಧೋನಿ ಮಾರ್ಗದರ್ಶನ
ಚೆನ್ನೈಗೆ ಧೋನಿ ನಾಯಕತ್ವ ಇಲ್ಲದೇ ಹೋದರೂ ಅವರು ತಂಡದಲ್ಲೇ ಇರುವ ಕಾರಣ ಹೊಸಬರಿಗೆ ಸದಾ ಮಾರ್ಗದರ್ಶನ ಲಭ್ಯ. ಗಾಯಕ್ವಾಡ್‌ ಪಾಲಿಗೆ ನಿಜಕ್ಕೂ ಇದೊಂದು ಪ್ಲಸ್‌ ಪಾಯಿಂಟ್‌.

ಚೆನ್ನೈಗೆ ಬ್ಯಾಟಿಂಗ್‌ ವಿಭಾಗದ ಚಿಂತೆ ಅಷ್ಟಾಗಿ ಇಲ್ಲ ಎಂದೇ ಹೇಳಬೇಕು. ಅಜಿಂಕ್ಯ ರಹಾನೆ ಕೂಡ ಆರ್‌ಸಿಬಿ ವಿರುದ್ಧ ಮಿಂಚಿದ್ದಾರೆ. ಕೊನೆಯಲ್ಲಿ ಬ್ಯಾಟ್‌ ಹಿಡಿದು ಬರುವ ತುಷಾರ್‌ ದೇಶಪಾಂಡೆ ಕೂಡ ಬ್ಯಾಟ್‌ ಬೀಸಬಲ್ಲರು. ಆದರೆ ಬೌಲಿಂಗ್‌ನಲ್ಲಿ ತುಷಾರ್‌ ಹೆಚ್ಚು ಘಾತಕವಾಗಿ ಪರಿಣಮಿಸಬೇಕಿದೆ. ಆರ್‌ಸಿಬಿ ವಿರುದ್ಧ ಬಾಂಗ್ಲಾದ ಮುಸ್ತಫಿಜುರ್‌ ರೆಹಮಾನ್‌ ಭರ್ಜರಿ ಯಶಸ್ಸು ಸಾಧಿಸಿರುವುದು ಚೆನ್ನೈ ಪಾಲಿಗೊಂದು “ಬೂಸ್ಟ್‌’ ಆಗಿ ಪರಿಣಮಿಸಿದೆ. ಇದೀಗ ಲಂಕೆಯ ಪೇಸರ್‌ ಮತೀಶ ಪತಿರಣ ಕೂಡ ಫಿಟ್‌ ಆಗಿದ್ದಾರೆ. ಇವರಿಗಾಗಿ ಮಹೀಶ್‌ ತೀಕ್ಷಣ ಜಾಗ ಬಿಡಬೇಕಾದೀತು.

ರಚಿನ್‌ ರವೀಂದ್ರ ಸೇರ್ಪಡೆಯಿಂದ ಚೆನ್ನೈ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗವೆರಡೂ ಬಲಿಷ್ಠ ಗೊಂಡಿದೆ. ಆರ್‌ಸಿಬಿ ವಿರುದ್ಧ ಕೇವಲ 15 ಎಸೆತಗಳಿಂದ 37 ರನ್‌ ಬಾರಿಸಿದ ಸಾಹಸ ಇವರದಾಗಿತ್ತು. ಹಾಗೆಯೇ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ ಕಡಿವಾಣ ಹಾಕಿದ್ದರು. ಕೆಳ ಕ್ರಮಾಂಕದಲ್ಲಿ ಮಿಚೆಲ್‌ ಮತ್ತು ದುಬೆ ಅವರಂಥ ಹಾರ್ಡ್‌ ಹಿಟ್ಟಿಂಗ್‌ ಹಾಗೂ ಮ್ಯಾಚ್‌ ವಿನ್ನರ್ ಆಟಗಾರರನ್ನು ಹೊಂದಿರುವುದು ಚೆನ್ನೈ ಪಾಲಿನ ಅದೃಷ್ಟವೇ ಸರಿ.

Advertisement

ಆರ್‌ಸಿಬಿ ವಿರುದ್ಧ ಧೋನಿಗೆ ಬ್ಯಾಟಿಂಗ್‌ ಅವಕಾಶ ಸಿಕ್ಕಿರಲಿಲ್ಲ. ಇವರ ಆಟ ಕಾಣಲು ಅಭಿಮಾನಿಗಳು ಕಾತರಗೊಂಡಿದ್ದಾರೆ. ಧೋನಿ ಅವರದು 8ನೇ ಕ್ರಮಾಂಕ ಎಂಬುದು ತಂಡದ ಬ್ಯಾಟಿಂಗ್‌ ಆಳವನ್ನು ಸಾರುತ್ತದೆ.

ಹಾರ್ಡ್‌ ಹಿಟ್ಟರ್‌ಗಳಿಲ್ಲದ ಗುಜರಾತ್‌
ಚೆನ್ನೈ ಬ್ಯಾಟಿಂಗ್‌ಗೆ ಹೋಲಿಸಿದರೆ ಗುಜರಾತ್‌ ಸಾಮರ್ಥ್ಯ ಕಡಿಮೆ ಎಂದೇ ಹೇಳಬೇಕು. ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ಗಳ ಕೊರತೆ ಗಿಲ್‌ ಬಳಗವನ್ನು ಕಾಡುತ್ತಿದೆ. ಕೆಳ ಕ್ರಮಾಂಕದಲ್ಲಿ ಡೇವಿಡ್‌ ಮಿಲ್ಲರ್‌ ಇದ್ದರೂ ಅವರ ಚಾರ್ಮ್ ಈಗ ಕಾಣುತ್ತಿಲ್ಲ. ಚೆನ್ನೈಯಲ್ಲೇ ಹುಟ್ಟಿದ ಸಾಯಿ ಸುದರ್ಶನ್‌, ರಾಹುಲ್‌ ತೆವಾಟಿಯ ಮೇಲೆ ಹೆಚ್ಚಿನ ಭಾರ ಬೀಳುವ ಸಾಧ್ಯತೆ ಇದೆ.

ಗುಜರಾತ್‌ ಬೌಲಿಂಗ್‌ ವಿಭಾಗ ಘಾತಕ ಎಂಬುದ ರಲ್ಲಿ ಎರಡು ಮಾತಿಲ್ಲ. ಹಳಬರಾದ ಉಮೇಶ್‌ ಯಾದವ್‌, ಮೋಹಿತ್‌ ಶರ್ಮ ಕೂಡ ಮ್ಯಾಜಿಕ್‌ ಮಾಡಿದ್ದರು. ಶಮಿ ಗೈರು ಕಾಡದಂತೆ ಬೌಲಿಂಗ್‌ ದಾಳಿ ಸಂಘಟಿಸು ವಲ್ಲಿ ಗುಜರಾತ್‌ ಬೌಲರ್ ಬಹುತೇಕ ಯಶಸ್ಸು ಸಾಧಿಸಿದ್ದರು.

ಸಂಭಾವ್ಯ ತಂಡಗಳು
ಚೆನ್ನೈ: ಋತುರಾಜ್‌ ಗಾಯಕ್ವಾಡ್‌ (ನಾಯಕ), ರಚಿನ್‌ ರವೀಂದ್ರ, ಅಜಿಂಕ್ಯ ರಹಾನೆ, ಡ್ಯಾರಿಲ್‌ ಮಿಚೆಲ್‌, ರವೀಂದ್ರ ಜಡೇಜ, ಶಮೀರ್‌ ರಿಝಿ, ಎಂ.ಎಸ್‌. ಧೋನಿ, ದೀಪಕ್‌ ಚಹರ್‌, ಮಹೀಶ ತೀಕ್ಷಣ/ಮತೀಶ ಪತಿರಣ, ಮುಸ್ತಫಿಜುರ್‌ ರೆಹಮಾನ್‌, ತುಷಾರ್‌ ದೇಶಪಾಂಡೆ.
ಗುಜರಾತ್‌: ಶುಭಮನ್‌ ಗಿಲ್‌ (ನಾಯಕ), ವೃದ್ಧಿಮಾನ್‌ ಸಾಹಾ, ಸಾಯಿ ಸುದರ್ಶನ್‌, ವಿಜಯ್‌ ಶಂಕರ್‌, ಡೇವಿಡ್‌ ಮಿಲ್ಲರ್‌, ಅಜ್ಮತುಲ್ಲ ಒಮರ್‌ಜಾಯ್‌, ರಾಹುಲ್‌ ತೆವಾಟಿಯ, ರಶೀದ್‌ ಖಾನ್‌, ಉಮೇಶ್‌ ಯಾದವ್‌, ಆರ್‌. ಸಾಯಿ ಕಿಶೋರ್‌, ಸ್ಪೆನ್ಸರ್‌ ಜಾನ್ಸನ್‌.

 

Advertisement

Udayavani is now on Telegram. Click here to join our channel and stay updated with the latest news.

Next