ದುಬೈ: ಮೂರು ಬಾರಿಯ ಚಾಂಪಿಯನ್, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಕೂಟದಿಂದ ಅಧಿಕೃತವಾಗಿ ಹೊರಬಿದ್ದಿದೆ. ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆಲುವು ಕಾಣುವ ಮೂಲಕ ಸಿಎಸ್ ಕೆ ಗೆ ಪ್ಲೇ ಆಫ್ ತಲುಪುವ ಎಲ್ಲಾ ಬಾಗಿಲು ಮುಚ್ಚಿದಂತಾಗಿದೆ.
ಇದುವರೆಗಿನ ಎಲ್ಲಾ ಐಪಿಎಲ್ ಆವೃತ್ತಿಯಲ್ಲೂ ಪ್ಲೇ ಆಫ್ ಪ್ರವೇಶಿಸಿದ್ದ ಸಿಎಸ್ ಕೆ ಇದೇ ಮೊದಲ ಬಾರಿಗೆ ಲೀಗ್ ಹಂತದಲ್ಲಿ ಹೊರಬೀಳುತ್ತಿದೆ. ಅದರಲ್ಲೂ ಕೂಟದಿಂದ ಹೊರಬಿದ್ದ ಸಿಎಸ್ ಕೆ ಮೊದಲ ತಂಡವಾಗಿದೆ.
ರವಿವಾರ ನಡೆದ ಮೊದಲ ಪಂದ್ಯದಲ್ಲಿ ಧೋನಿ ಪಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಟು ವಿಕೆಟ್ ಗಳ ಜಯ ಸಾಧಿಸಿತ್ತು. ಆದರೆ ರಾತ್ರಿಯ ಪಂದ್ಯದಲ್ಲಿ ಮುಂಬೈ ವಿರುದ್ದ ರಾಜಸ್ಥಾನ್ ರಾಯಲ್ಸ್ ಗೆದ್ದ ಕಾರಣ ಪಾಯಿಂಟ್ಸ್, ರನ್ ರೇಟ್ ಲೆಕ್ಕಾಚಾರದಲ್ಲಿ ಸಿಎಸ್ ಕೆ ತಂಡದ ಪ್ಲೇಆಫ್ ಕನಸು ಕಮರಿದೆ.
ಇದನ್ನೂ ಓದಿ:ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ
ಸಿಎಸ್ ಕೆ ಈ ಕೂಟದಲ್ಲಿ 12 ಪಂದ್ಯವಾಡಿದ್ದು, ಅದರಲ್ಲಿ ಗೆಲುವು ಸಾಧಿಸಿದ್ದು ನಾಲ್ಕರಲ್ಲಿ ಮಾತ್ರ. ಉಳಿದಂತೆ ಎಂಟು ಪಂದ್ಯ ಸೋತಿರುವ ಧೋನಿ ಬಳಗ ಎಂಟು ಅಂಕಗಳಿಂದ ಎಂಟನೇ ಸ್ಥಾನದಲ್ಲಿದೆ. ಉಳಿದ ಎರಡೂ ಪಂದ್ಯಗಳನ್ನು ಗೆದ್ದರೂ ಸಿಎಸ್ ಕೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಸಾಧ್ಯವಿಲ್ಲ.