Advertisement

ಕಠಿನ ಪ್ರಯತ್ನ ನಡೆಸುವ ಅಗತ್ಯವಿದೆ: ಫ್ಲೆಮಿಂಗ್‌

06:10 AM Apr 30, 2018 | Team Udayavani |

ಪುಣೆ: ಚೆನ್ನೈ ಸೂಪರ್‌ ಕಿಂಗ್ಸ್‌ 2018ರ ಋತುವಿನಲ್ಲಿ ತವರಿನ ಪಿಚ್‌ನಲ್ಲಿ ಆಡುವ ಅವಕಾಶದಿಂದ ವಂಚಿತವಾಗಿದೆ. ಕಾವೇರಿ ಪ್ರಕರಣದಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಚೆನ್ನೈಯ ಎಲ್ಲ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡಿವೆ. ಹಾಗಾಗಿ ಪುಣೆಯ ಪಿಚ್‌ಗೆ ನಾವು ಹೊಂದಿಕೊಳ್ಳಲು ಕಠಿನ ಪ್ರಯತ್ನ ನಡೆಸುವ ಅಗತ್ಯವಿದೆ ಎಂದು ಚೆನ್ನೈ ತಂಡದ ಮುಖ್ಯ ಕೋಚ್‌ ಸ್ಟೀಫ‌ನ್‌ ಫ್ಲೆಮಿಂಗ್‌ ಹೇಳಿದ್ದಾರೆ.

Advertisement

ಪುಣೆಯಲ್ಲಿ ಶನಿವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈಗೆ 8 ವಿಕೆಟ್‌ಗಳಿಂದ ಸೋತ ಬಳಿಕ ಫ್ಲೆಮಿಂಗ್‌ ಈ ಪ್ರತಿಕ್ರಿಯೆ ನೀಡಿದರು. ಇಲ್ಲಿನ ಪಿಚ್‌ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ತಿಳಿಯುವುದು ಅತ್ಯಗತ್ಯವಾಗಿದೆ. ಅದಕ್ಕೆ ಕೆಲವು ಸಮಯ ಬೇಕಾಗಬಹುದು. ಇದು ಚೆನ್ನೈ ಅಲ್ಲ. ನಾವು ಚೆನ್ನೈ ಪಿಚ್‌ಗೆ ಹೊಂದಿಕೊಳ್ಳುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದೆವು. ಆದರೆ ಈಗ ಪುಣೆ ಪಿಚ್‌ ಅರಿತು ನಮ್ಮ ಆಟದ ಯೋಜನೆ ರೂಪಿಸಬೇಕಾಗಿದೆ ಎಂದು ಫ್ಲೆಮಿಂಗ್‌ ತಿಳಿಸಿದರು. ಎರಡು ವರ್ಷದ ನಿಷೇಧದ ಬಳಿಕ ಐಪಿಎಲ್‌ ಕುಟುಂಬಕ್ಕೆ ಮರಳಿದ್ದ ಚೆನ್ನೈ ತಂಡ ಚೆನ್ನೈಯಲ್ಲಿ ಕೇವಲ ಒಂದು ಪಂದ್ಯ ಆಡಿದ ಬಳಿಕ ತವರಿನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿತ್ತು.

ತವರಿನ ಲಾಭಕ್ಕಾಗಿ ಹೆಚ್ಚುವರಿ ಪ್ರಯತ್ನ
ತವರಿನ ಲಾಭ ಪಡೆಯಬೇಕಾದರೆ ನಾವು ಹೆಚ್ಚುವರಿ ಕಠಿನ ಪ್ರಯತ್ನ ನಡೆಸಬೇಕಾಗಿದೆ. ಈ ಪಂದ್ಯದ ಮೂಲಕ ನಾವು ಕೆಲವು ವಿಷಯಗಳನ್ನು ಕಲಿತಿದ್ದೇವೆ. ಸರಿಯಾದ ಕಾಂಬಿನೇಶನ್‌ ಪಡೆಯಲು ನಾವು ಪ್ರಯತ್ನ ನಡೆಸಬೇಕಾಗಿದೆ. ನಾವು ಗೆಲುವಿಗಾಗಿ ಹೋರಾಡಿದ್ದೇವೆ. ಇನ್ನೂ 10 ಅಥವಾ 15 ರನ್‌ ಹೆಚ್ಚು ಗಳಿಸಿದ್ದರೆ ಗೆಲ್ಲುವ ಸಾಧ್ಯತೆಯಿತ್ತು ಎಂದು ಫ್ಲೆಮಿಂಗ್‌ ಹೇಳಿದರು. 190 ರನ್‌ ಗಳಿಸಿದ್ದರೆ ಗೆಲ್ಲುವ ಅವಕಾಶವಿತ್ತು. ಮುಂಬೈ ಉತ್ತಮವಾಗಿ ಬೌಲಿಂಗ್‌ ಮಾಡಿದ್ದರಿಂದ ನಮ್ಮ ಮೊತ್ತ 170ಕ್ಕೆ ಸೀಮಿತಗೊಂಡಿತು. 19ನೇ ಓವರಿನಲ್ಲಿ ರೋಹಿತ್‌ ಸಿಡಿದ ಕಾರಣ ಗೆಲುವು ನಮ್ಮಿಂದ ತಪ್ಪಿಹೋಯಿತು. ಐಪಿಎಲ್‌ನ ಎಲ್ಲ ಪಂದ್ಯಗಳನ್ನು ಗೆಲ್ಲುವುದು ತುಂಬಾ ಕಷ್ಟ. ಆದರೆ ಇದೊಂದು ಒಳ್ಳೆಯ ಪಂದ್ಯವಾಗಿತ್ತು ಎಂದು ಫ್ಲೆಮಿಂಗ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next