Advertisement

ರಾಯುಡು ಸೆಂಚುರಿ; ಚೆನ್ನೈ ಜಯಭೇರಿ

06:20 AM May 14, 2018 | |

ಪುಣೆ: ಬ್ಯಾಟ್ಸ್‌ಮನ್‌ಗಳ ಮೇಲಾಟವಾಗಿ ಪರಿಣಮಿಸಿದ ರವಿವಾರದ ಸನ್‌ರೈಸರ್ ಹೈದರಾಬಾದ್‌-ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಿನ ಐಪಿಎಲ್‌ ಮುಖಾಮುಖೀ ದ್ವಿತೀಯ ಪ್ಲೇ-ಆಫ್ ತಂಡವನ್ನು ಅಧಿಕೃತಗೊಳಿಸಿದೆ. 

Advertisement

2 ವರ್ಷಗಳ ನಿಷೇಧ ಮುಗಿಸಿಕೊಂಡು ಬಂದ ಧೋನಿ ಸಾರಥ್ಯದ ಚೆನ್ನೈ 8 ವಿಕೆಟ್‌ಗಳ ಅಮೋಘ ಜಯದೊಂದಿಗೆ ಅಧಿಕೃತವಾಗಿ ಮುಂದಿನ ಸುತ್ತಿಗೆ ಲಗ್ಗೆ ಇರಿಸಿತು. 

ಆರಂಭಕಾರ ಅಂಬಾಟಿ ರಾಯುಡು ಅವರ ಚೊಚ್ಚಲ ಐಪಿಎಲ್‌ ಶತಕ ಚೆನ್ನೈ ಸರದಿಯ ಆಕರ್ಷಣೆಯಾಗಿತ್ತು.ಪುಣೆಯಲ್ಲಿ ನಡೆದ ಅಗ್ರ ತಂಡಗಳೆರಡರ “ಬಿಗ್‌ ಫೈಟ್‌’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 4 ವಿಕೆಟಿಗೆ 179 ರನ್‌ ಪೇರಿಸಿದರೆ, ಚೆನ್ನೈ 19 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 180 ರನ್‌ ಬಾರಿಸಿ ತನ್ನ 8ನೇ ಗೆಲುವನ್ನು ಒಲಿಸಿಕೊಂಡಿತು. ಆಗ ಅಂಬಾಟಿ ರಾಯುಡು ಅಜೇಯ ನೂರರಲ್ಲಿದ್ದರು.

ಈ ಫ‌ಲಿತಾಂಶದಿಂದ ಅಂಕಪಟ್ಟಿಯ ಮೊದಲೆರಡು ಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಹೈದರಾಬಾದ್‌ 18 ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿಯಿತು. ಚೆನ್ನೈ 16 ಅಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲೇ ಉಳಿಯಿತು. ಒಂದು ವೇಳೆ ಈ ಪಂದ್ಯ ಜಯಿಸಿದ್ದರೆ ಹೈದರಾಬಾದ್‌ ಲೀಗ್‌ ಹಂತದ ಅಗ್ರಸ್ಥಾನಿ ಎಂಬ ಹಿರಿಮೆಗೆ ಪಾತ್ರವಾಗುತ್ತಿತ್ತು. ಆದರೆ ಈ ಅವಕಾಶವೀಗ ಚೆನ್ನೈಗೂ ಲಭಿಸಿದೆ. ಎರಡೂ ತಂಡಗಳು ಇನ್ನೂ 2 ಪಂದ್ಯಗಳನ್ನು ಆಡಬೇಕಿದೆ.

ಅಬ್ಬರಿಸಿದ ರಾಯುಡು-ವಾಟ್ಸನ್‌
180 ರನ್‌ ಬೆನ್ನಟ್ಟುವ ಹಾದಿಯಲ್ಲಿ ಅಂಬಾಟಿ ರಾಯುಡು-ಶೇನ್‌ ವಾಟ್ಸನ್‌ ಸೇರಿಕೊಂಡು ಚೆನ್ನೈಗೆ ಭದ್ರ ಬುನಾದಿ ನಿರ್ಮಿಸಿದರು. ಕೂಟದಲ್ಲೇ ಅತ್ಯಂತ ಬಲಿಷ್ಠ ಬೌಲಿಂಗ್‌ ಪಡೆಯನ್ನು ಹೊಂದಿದ್ದ ಹೈದರಾಬಾದ್‌ಗೆ ದೊಡ್ಡ ಕಂಟಕವಾಗಿ ಪರಿಣಮಿಸಿದರು. ಇವರಿಬ್ಬರ ಮೊದಲ ವಿಕೆಟ್‌ ಜತೆಯಾಟದಲ್ಲಿ 13.3 ಓವರ್‌ಗಳಿಂದ 134 ರನ್‌ ಹರಿದು ಬಂತು. ಆಗಲೇ ಹೈದರಾಬಾದ್‌ ತನ್ನ ಶರಣಾಗತಿಯನ್ನು ಸಾರಿತ್ತು.

Advertisement

ರನೌಟ್‌ ರೂಪದಲ್ಲಿ ವಾಟ್ಸನ್‌ ವಿಕೆಟ್‌ ಬಿತ್ತು. ಆಗ ಅವರು 35 ಎಸೆತ ಎದುರಿಸಿ 57 ರನ್‌ ಮಾಡಿದ್ದರು. ಸಿಡಿಸಿದ್ದು 5 ಫೋರ್‌ ಹಾಗೂ 3 ಸಿಕ್ಸರ್‌.

ಅಂಬಾಟಿ ರಾಯುಡು ಪ್ರಚಂಡ ಫಾರ್ಮ್ ಮುಂದುವರಿಸಿ ಶತಕ ಸಂಭ್ರಮದಲ್ಲಿ ಮಿಂದೆದ್ದರು. ತಂಡದ ಗೆಲುವಿಗೆ ಇನ್ನೇನು 2 ರನ್‌ ಅಗತ್ಯವಿದೆ ಎನ್ನುವಾಗ ಒಂಟಿ ಓಟದ ಮೂಲಕ ರಾಯುಡು ಸೆಂಚುರಿ ಪೂರೈಸಿದರು. 62 ಎಸೆತ ಎದುರಿಸಿದ ರಾಯುಡು 7 ಪ್ರಚಂಡ ಸಿಕ್ಸರ್‌ ಜತೆಗೆ 7 ಬೌಂಡರಿ ಬಾರಿಸಿ ಪುಣೆ ಅಂಗಳದಲ್ಲಿ ಮೆರೆದಾಡಿದರು. ನಾಯಕ ಧೋನಿ 20 ರನ್‌ ಮಾಡಿ ಅಜೇಯರಾಗಿ ಉಳಿದರು.ಇದರೊಂದಿಗೆ ರಾಯುಡು ಈ ಐಪಿಎಲ್‌ನಲ್ಲಿ 500 ರನ್‌ ಪೂರ್ತಿಗೊಳಿಸಿದ 3ನೇ ಬ್ಯಾಟ್ಸ್‌ಮನ್‌ ಎನಿಸಿದರು (535). ಕೇನ್‌ ವಿಲಿಯಮ್ಸನ್‌ (544) ಮತ್ತು ಕೆ.ಎಲ್‌. ರಾಹುಲ್‌ (537) ಮೊದಲೆರಡು ಸ್ಥಾನದಲ್ಲಿದ್ದಾರೆ.

ಧವನ್‌-ವಿಲಿಯಮ್ಸನ್‌ ಭರ್ಜರಿ ಆಟ
ಸನ್‌ರೈಸರ್ ಹೈದರಾಬಾದ್‌ ಪರ ಆರಂಭಕಾರ ಶಿಖರ್‌ ಧವನ್‌ ಮತ್ತು ನಾಯಕ ಕೇನ್‌ ವಿಲಿಯಮ್ಸನ್‌ ಮತ್ತೂಂದು ಭರ್ಜರಿ ಜತೆಯಾಟದ ಮೂಲಕ ಮಿಂಚಿದರು. ಗುರುವಾರ ಡೆಲ್ಲಿ ವಿರುದ್ಧ 188 ರನ್‌ ಚೇಸಿಂಗ್‌ ವೇಳೆ ಇವರಿಬ್ಬರು ಸೇರಿಕೊಂಡು ಮುರಿಯದ ದ್ವಿತೀಯ ವಿಕೆಟಿಗೆ 176 ರನ್‌ ಪೇರಿಸಿ ಕೋಟ್ಲಾ ಅಂಗಳದಲ್ಲಿ ವಿಜೃಂಭಿಸಿದ್ದರು. ರವಿವಾರ ಚೆನ್ನೈಯಲ್ಲಿ ಇದೇ ಆಟವನ್ನು ಮುಂದುವರಿಸಿ 2ನೇ ವಿಕೆಟಿಗೆ 123 ರನ್‌ ರಾಶಿ ಹಾಕಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಇಬ್ಬರಿಂದಲೂ ಮತ್ತೆ ಅರ್ಧ ಶತಕ ದಾಖಲಾಯಿತು.

ಶಿಖರ್‌ ಧವನ್‌ ಸರ್ವಾಧಿಕ 79 ರನ್‌ ಬಾರಿಸಿದರೆ, ವಿಲಿಯಮ್ಸನ್‌ 51 ರನ್‌ ಹೊಡೆದರು. ಇವರಿಬ್ಬರನ್ನು ಹೊರತುಪಡಿಸಿದರೆ 21 ರನ್‌ ಮಾಡಿದ ದೀಪಕ್‌ ಹೂಡಾ ಅವರದೇ ಹೆಚ್ಚಿನ ಗಳಿಕೆ.

9 ಎಸೆತ ಎದುರಿಸಿ ಕೇವಲ 2 ರನ್‌ ಮಾಡಿದ ಅಲೆಕ್ಸ್‌ ಹೇಲ್ಸ್‌ ಔಟಾದ ಬಳಿಕ ಜತೆಗೂಡಿದ ಧವನ್‌-ವಿಲಿಯಮ್ಸನ್‌ 12.3 ಓವರ್‌ಗಳ ಜತೆಯಾಟ ನಡೆಸಿ ಚೆನ್ನೈ ಬೌಲಿಂಗಿಗೆ ಸವಾಲಾಗಿ ಪರಿಣಮಿಸಿದರು. 7 ಮಂದಿ ದಾಳಿಗಿಳಿದರೂ ಇವರ ಓಟಕ್ಕೆ ಬ್ರೇಕ್‌ ಹಾಕುವುದು ಕಷ್ಟವಾಯಿತು. ಹೆಚ್ಚು ಬಿರುಸಿನಿಂದ ಬ್ಯಾಟ್‌ ಬೀಸಿದ ಧವನ್‌ 79 ರನ್ನಿಗೆ ಎದುರಿಸಿದ್ದು 49 ಎಸೆತ ಮಾತ್ರ. 10 ಬೌಂಡರಿ ಹಾಗೂ 3 ಸಿಕ್ಸರ್‌ ಬಾರಿಸಿ ಪ್ರಚಂಡ ಫಾರ್ಮ್ಗೆ ಸಾಕ್ಷಿಯಾದರು.
ವಿಲಿಯಮ್ಸನ್‌ ಅವರ 51 ರನ್‌ 39 ಎಸೆತಗಳಿಂದ ಬಂತು. ಈ ಆಕರ್ಷಕ ಬ್ಯಾಟಿಂಗ್‌ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಸ್ಕೋರ್‌ 141ಕ್ಕೆ ಏರಿದ ವೇಳೆ ಇವರಿಬ್ಬರು ಒಟ್ಟೊಟ್ಟಿಗೇ ಔಟಾಗಿ ನಡೆದರು. ಬ್ರಾವೊ ಓವರಿನ ಅಂತಿಮ ಎಸೆತದಲ್ಲಿ ಧವನ್‌ ಹರ್ಭಜನ್‌ಗೆ ಕ್ಯಾಚ್‌ ನೀಡಿದರೆ, ಶಾದೂìಲ್‌ ಠಾಕೂರ್‌ ಓವರಿನ ಮೊದಲ ಎಸೆತದಲ್ಲಿ ವಿಲಿಯಮ್ಸನ್‌ ವಿಕೆಟ್‌ ಬಿತ್ತು. ಮನೀಷ್‌ ಪಾಂಡೆ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು. 6 ಎಸೆತ ಎದುರಿಸಿದ ಪಾಂಡೆ 5 ರನ್‌ ಮಾಡಿ ನಿರ್ಗಮಿಸಿದರು. 32ಕ್ಕೆ 2 ವಿಕೆಟ್‌ ಕಿತ್ತ ಠಾಕೂರ್‌ ಚೆನ್ನೈನ ಯಶಸ್ವಿ ಬೌಲರ್‌.

ಸ್ಕೋರ್‌ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಶಿಖರ್‌ ಧವನ್‌    ಸಿ ಹರ್ಭಜನ್‌ ಬಿ ಬ್ರಾವೊ    79
ಅಲೆಕ್ಸ್‌ ಹೇಲ್ಸ್‌    ಸಿ ರೈನಾ ಬಿ ಚಹರ್‌    2
ಕೇನ್‌ ವಿಲಿಯಮ್ಸನ್‌    ಸಿ ಬ್ರಾವೊ ಬಿ ಠಾಕೂರ್‌    51
ಮನೀಷ್‌ ಪಾಂಡೆ    ಸಿ ವಿಲ್ಲಿ ಬಿ ಠಾಕೂರ್‌    5
ದೀಪಕ್‌ ಹೂಡಾ    ಔಟಾಗದೆ    21
ಶಕಿಬ್‌ ಅಲ್‌ ಹಸನ್‌    ಔಟಾಗದೆ    8
ಇತರ        13
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)        179
ವಿಕೆಟ್‌ ಪತನ: 1-18, 2-141, 3-141, 4-160.
ಬೌಲಿಂಗ್‌:
ದೀಪಕ್‌ ಚಹರ್‌        4-0-16-1
ಶಾದೂìಲ್‌ ಠಾಕೂರ್‌        4-0-32-2
ಡೇವಿಡ್‌ ವಿಲ್ಲಿ        2-0-24-0
ಹರ್ಭಜನ್‌ ಸಿಂಗ್‌        2-0-26-0
ಶೇನ್‌ ವಾಟ್ಸನ್‌        2-0-15-0
ಡ್ವೇನ್‌ ಬ್ರಾವೊ        4-0-39-1
ರವೀಂದ್ರ ಜಡೇಜ        2-0-24-0

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌    ರನೌಟ್‌    57
ಅಂಬಾಟಿ ರಾಯುಡು    ಔಟಾಗದೆ    100
ಸುರೇಶ್‌ ರೈನಾ    ಸಿ ವಿಲಿಯಮ್ಸನ್‌ ಬಿ ಶರ್ಮ    2
ಎಂ.ಎಸ್‌. ಧೋನಿ    ಔಟಾಗದೆ    20
ಇತರ        1
ಒಟ್ಟು  (19 ಓವರ್‌ಗಳಲ್ಲಿ 2 ವಿಕೆಟಿಗೆ)        180
ವಿಕೆಟ್‌ ಪತನ: 1-134, 2-137.
ಬೌಲಿಂಗ್‌:
ಸಂದೀಪ್‌ ಶರ್ಮ        4-0-36-1
ಭುವನೇಶ್ವರ್‌ ಕುಮಾರ್‌        4-0-38-0
ರಶೀದ್‌ ಖಾನ್‌        4-0-25-0
ಶಕಿಬ್‌ ಅಲ್‌ ಹಸನ್‌        4-0-41-0
ಸಿದ್ಧಾರ್ಥ್ ಕೌಲ್‌        3-0-40-0
ಪಂದ್ಯಶ್ರೇಷ್ಠ: ಅಂಬಾಟಿ ರಾಯುಡು

Advertisement

Udayavani is now on Telegram. Click here to join our channel and stay updated with the latest news.

Next