ಚೆನ್ನೈ: ಪೊಲೀಸ್ ವಶದಲ್ಲಿದ್ದ 30 ವರ್ಷದ ಆರೋಪಿಯೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದ್ದು, ಕಳೆದ ಎರಡು ತಿಂಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸೋದರಿಯ ಸಾವಿನಿಂದ ಮನನೊಂದು ಆಕೆಯ ಚಿತೆಗೆ ಹಾರಿದ ವ್ಯಕ್ತಿ!
ಶನಿವಾರ ಕೊಡಂಗಯ್ಯೂರ್ ಪೊಲೀಸರು ರಾಜಶೇಖರ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಈತನ ವಿರುದ್ಧ 20ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ರಾಜಶೇಖರ್ ತಿರುವಳ್ಳೂರ್ ಜಿಲ್ಲೆಯ ನಿವಾಸಿಯಾಗಿದ್ದು, ಈತ ತಾನು ಎಸಗಿರುವ ಅಪರಾಧಗಳ ಬಗ್ಗೆ ತಪ್ಪೊಪ್ಪಿಕೊಂಡಿದ್ದ. ವಿಚಾರಣೆ ವೇಳೆ ಅಸ್ವಸ್ಥಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೂಡಲೇ ರಾಜಶೇಖರ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯ ನಂತರ ಪೊಲೀಸ್ ಠಾಣೆಗೆ ವಾಪಸ್ ಕರೆ ತರಲಾಗಿತ್ತು. ಆದರೆ ಮತ್ತೆ ರಾಜಶೇಖರ್ ಅಸ್ವಸ್ಥಗೊಂಡಾಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ವರದಿ ವಿವರಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಐವರನ್ನು ಅಮಾನತುಗೊಳಿಸಲಾಗಿದೆ ಎಂದು ಚೆನ್ನೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿಎಸ್ ಅನ್ಬು ತಿಳಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ರಾಜಶೇಖರ್ ಪ್ರಕರಣದ ಕುರಿತು ಸಿಬಿ-ಸಿಐಡಿ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಶೈಲೇಂದ್ರ ಬಾಬು ತಿಳಿಸಿರುವುದಾಗಿ ವರದಿಯಾಗಿದೆ.
ಇದಕ್ಕೂ ಮುನ್ನ ಏಪ್ರಿಲ್ ತಿಂಗಳಲ್ಲಿ ಡ್ರಗ್ಸ್ ಸಾಗಾಟದಲ್ಲಿ ಬಂಧಿಸಲ್ಪಟ್ಟಿದ್ದ ವಿ.ವಿಘ್ನೇಶ್ (25) ಎಂಬಾತ ಕೂಡಾ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ನಂತರ ವಿಘ್ನೇಶ್ ಶವದ ಮರಣೋತ್ತರ ಪರೀಕ್ಷೆಯಲ್ಲಿ ಬಲವಾದ ಹೊಡೆತದ ಕುರಿತು ಪತ್ತೆಯಾದ ಹಿನ್ನೆಲೆಯಲ್ಲಿ ಆರು ಮಂದಿ ಪೊಲೀಸರನ್ನು ಬಂಧಿಸಲಾಗಿತ್ತು.