ಚೆನ್ನೈ:
ನಾಯಗನ್ ಮೀಂಡುಮ್ ವರಾರ್',
ದಿ ಕಿಂಗ್ ಈಸ್ ಕಮಿಂಗ್ ಬ್ಯಾಕ್’ ,ಹೀಗೆ ಮಂಗಳವಾರ ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದ ವೀಕ್ಷಕರ ಕೈಯಲ್ಲಿ ಪ್ಲಕಾರ್ಡ್‌ಗಳು ಕುಣಿಯುತ್ತಿದ್ದವು. ಭಾರೀ ಭೋರ್ಗರೆತವೂ ಇತ್ತು.
ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಆರಾಧ್ಯ ದೈವ, 4 ಸಲ ಸಿಎಸ್‌ಕೆಯನ್ನು ಐಪಿಎಲ್ ಪಟ್ಟಕ್ಕೇರಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಮರಳಿ ತವರಿನ ಅಂಗಳದಲ್ಲಿ ಅಭ್ಯಾಸ ಆರಂಭಿಸಿದ್ದಕ್ಕೆ ಅಭಿಮಾನಿಗಳ ಹರ್ಷೋದ್ದಾರ ಮುಗಿಲು ಮುಟ್ಟಿತ್ತು!
ಹಾಗಾದರೆ ಐಪಿಎಲ್ ಆರಂಭವಾಗಿಯೇ ಬಿಟ್ಟಿತೇ ಎಂಬುದು ಪ್ರಶ್ನೆಯಲ್ಲವೇ? ಇಲ್ಲ. ಚೆನ್ನೈ ತಂಡದ ಅಭ್ಯಾಸ ವೀಕ್ಷಿಸಲು ವೀಕ್ಷಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಪರಿಣಾಮ, ಅಲ್ಲಿ ಐಪಿಎಲ್ ಪಂದ್ಯಕ್ಕಿಂತಲೂ ಮಿಗಿಲಾದ ಜೋಶ್ ಕಂಡುಬಂದಿತ್ತು. 4 ವರ್ಷಗಳ ಬಳಿಕ ತವರಿನಂಗಳದಲ್ಲಿ ಚೆನ್ನೈ ಆಟಗಾರರನ್ನು ಕಂಡಾಗ ಉಂಟಾದ ರೋಮಾಂಚನ ಬಣ್ಣನೆಗೂ ಮೀರಿದ್ದಾಗಿತ್ತು!
ಪ್ರೇಕ್ಷಕರ ಜೋಶ್ ಚೆನ್ನೈ ಆಟಗಾರರಲ್ಲೂ ಹೊಸ ಸ್ಫೂರ್ತಿ ಉಕ್ಕಿಸಿತು. ಧೋನಿ ಅವರಂತೂ ಭರ್ಜರಿ ಮೂಡ್‌ನಲ್ಲಿದ್ದರು. ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ಒತ್ತು ಕೊಟ್ಟರು. ಇವರು ಬಾರಿಸಿದ ಚೆಂಡೊಂದು ಚೆಪಾಕ್ ಸ್ಟೇಡಿಯಂನಿಂದ ಹೊರಗೆ ಸಿಡಿದಾಗಲಂತೂ ವೀಕ್ಷಕರ ಆರ್ಭಟ ಮುಗಿಲು ಮುಟ್ಟಿತು. ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಇದನ್ನು ತಮ್ಮ ಕೆಮರಾದಲ್ಲಿ ಸೆರೆಹಿಡಿಯುತ್ತಿದ್ದುದು ಕಂಡುಬಂತು.