ಚನ್ನಗಿರಿ: ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು. ಅದನ್ನು ಬಿಟ್ಟು ಜನತೆಗೆ ಅಧಿಕಾರದ ದರ್ಪ ತೋರಿಸಿದರೆ ಹುಷಾರ್. ಇಲ್ಲಿ ಯಾರೂ ಸತ್ಯಹರೀಶ್ಚಂದ್ರರಲ್ಲ. ನಿಮ್ಮ ಇಲಾಖೆಗಳ ಕಾರ್ಯವೈಖರಿ ಕುರಿತು ತನಿಖೆ ನಡೆಸಿದರೆ ಎಲ್ಲರೂ ಮನೆಗೆ ಹೋಗುತ್ತೀರಿ. ಜನತೆಗೆ ಸ್ಪಂದಿಸಿ ಕೆಲಸ ಮಾಡುವುದನ್ನು ಕಲಿಯಿರಿ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾಸಿಕ ಕೆಡಿಪಿ ಸಭೆ ಆರಂಭದಲ್ಲಿಯೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ 1ನೇ ತ್ತೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯಿಲ್ಲದೇ ಬರದ ಛಾಯೆ ಅವರಿಸಿದೆ. ರೈತರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಜನರೊಂದಿಗೆ ಹಗುರವಾಗಿ ಮಾತನಾಡಬಾರದು ಎಂದು ಸೂಚಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಅಕ್ಷರ ದಾಸೋಹ ಅಧಿಕಾರಿ ನಿಂಗಪ್ಪರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮೊದಲು ಜನತೆ ಸಂಪರ್ಕಕ್ಕೆ ಸಿಗುವುದು ಕಲಿ, ಖುದ್ದು ನಾನೇ ಫೋನ್ ಮಾಡಿದ್ರೂ ಕಾಲ್ ರಿಸೀವ್ ಮಾಡೊಲ್ಲ. ಇನ್ನು ಜನರ ಕೆಲಸವನ್ನು ಹೇಗೆ ಮಾಡುತ್ತೀರ ಎಂದು ಪ್ರಶ್ನಿಸಿದರು. ಇನ್ನ್ನು ಬಿಇಒ ಅಧಿಕಾರಿಗಳು ರಜಾ ಹಾಕಿಕೊಂಡು ಮನೆಯಲ್ಲಿ ಕುಳಿತರೆ ಹೇಗೆ? ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರ. ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕು 7ನೇ ಸ್ಥಾನಕ್ಕೆ ಹೋಗಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ, ಶಾಲೆಗಳಲ್ಲಿ ಟ್ಯೂಷನ್ ಮಾಡುವುದಕ್ಕೆ ಅವಕಾಶವಿದ್ದರೆ ಮಾಡಿ, ಕೆಲಸ ಬಿಟ್ಟು ಸುತ್ತಾಡುವ ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಎಂದು ತಾಕೀತು ಮಾಡಿದರು.
ಅರಣ್ಯಾಧಿಕಾರಿ ಓ.ಎಸ್. ದಿನೇಶ್ ಮಾತನಾಡಿ, ರೈತರಿಗೆ ಸಬ್ಸಿಡಿಯಲ್ಲಿ ಎಲ್ಲಾ ಜಾತಿಯ ಸಸಿಗಳ ವಿತರಣೆ ಮಾಡಲಾಗುತ್ತಿದೆ. ಅದರಲ್ಲಿ ಶ್ರೀಗಂಧ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಮಾಹಿತಿ ನೀಡಿದರು. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ತಾಲೂಕಿನಲ್ಲಿ ಕಾಡಾನೆ ಪರಿಸ್ಥಿತಿ ಹೇಗಿದೆ. ತಾಲೂಕಿನ ಶಿವಾಜಿನಗರ ಸಮೀಪದಲ್ಲಿ ತೋಟಗಳನ್ನು ನಾಶಪಡಿಸಿವೆ ಎಂದರು. ಅದಕ್ಕೆ ಅಧಿಕಾರಿ ಮಾತನಾಡಿ, ಉಬ್ರಾಣಿ ಭಾಗದಲ್ಲಿ ಪಿಟಿಪಿ ಹಾಕಿ ಆನೆಗಳು ಬರುವ ಮಾರ್ಗವನ್ನು ಬ್ಲಾಕ್ ಮಾಡಲಾಗಿದೆ. ಶಾಂತಿಸಾಗರ ವಲಯ ಅರಣ್ಯಪ್ರದೇಶದಲ್ಲಿ ಪಿಟಿಪಿ ಆಗಿಲ್ಲ. ಅಲ್ಲಿಂದ ಆನೆಗಳು ಬರುತ್ತಿವೆ ಎಂದು ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷೆ ರೂಪ, ಉಪಾಧ್ಯಕ್ಷೆ ಗೀತಾ, ಜಿಪಂ ಸದಸ್ಯೆ ಮಂಜುಳಾ, ಯಶೋಧಮ್ಮ, ಸಾಕಮ್ಮ, ತೇಜಸ್ವಿಪಟೇಲ್, ಲೋಕೇಶ್ವರ, ವಾಗೀಶ್, ತಹಶಿಲ್ದಾರ್ ನಾಗರಾಜ್. ಇಒ ಪ್ರಕಾಶ್ ಇದ್ದರು.