Advertisement

ಚನ್ನಬಸವೇಶ್ವರ ಮಹಾ ರಥೋತ್ಸವ

05:20 PM Feb 05, 2023 | Team Udayavani |

ಜೋಯಿಡಾ: ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಸಕಲ ಸಿದ್ಧತೆಗೊಂಡಿದ್ದು, ಹರ ಹರ ಮಹಾದೇವ ಅಡಿಕೇಶ್ವರ ಮಡಿಕೇಶ್ವರ ಉಳವಿ ಚೆನ್ನಬಸವೇಶ್ವರ ಎನ್ನುತ್ತ ದಿನವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಜ.28 ರಿಂದ ಜಾತ್ರೆ ಆರಂಭವಾಗಿದ್ದು, ಫೆ 6 ರಂದು ಸಂಜೆ 4ಕ್ಕೆ ಮಹಾರಥೋತ್ಸವ ಜರುಗಲಿದ್ದು, ದೇವಸ್ಥಾನ ಟ್ರಸ್ಟ್‌ ಕಮಿಟಿ ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement

ಈಗಾಗಲೇ ಉಳವಿ ಟ್ರಸ್ಟ್‌ ಕಮಿಟಿ ಮತ್ತು ಉಳವಿ ಗ್ರಾಪಂ ಮುಂದಾಳತ್ವದಲ್ಲಿ ಬಂದ ಭಕ್ತರಿಗೆ ವಸತಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಅನ್ನಛತ್ರಗಳನ್ನು ಮಾಡಲಾಗಿದೆ. ಜಾತ್ರೆಗೆ ಹೊಸ ರಥಬೀದಿ ನಿರ್ಮಾಣವಾದ ಕಾರಣ ರಥೋತ್ಸವಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಈ ವರ್ಷ ಹೆಚ್ಚಿನ ಭಕ್ತರು ಜಾತ್ರೆಗೆ ಬರುವ ನಿರೀಕ್ಷೆ ಇದೆ ಎಂಬುದು ಟ್ರಸ್ಟ್‌ ಕಮಿಟಿಯವರ ಮಾತಾಗಿದೆ.

ಕಾಲ್ನಡಿಗೆಯಲ್ಲಿ ಬರುವ ಭಕ್ತರು: ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ದಿನವೂ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಉಳವಿಗೆ ಬರುತ್ತಾರೆ. ಇಲ್ಲಿಗೆ ಬರಬೇಕಾದರೆ ಡಟ್ಟ ಕಾಡಿನ
ಮಧ್ಯದಿಂದಲೇ ಬರಬೇಕು. ಕಾಡಿನ ದಾರಿಯಿದ್ದರು ಸಹಿತ ಭಕ್ತರು ಗುಂಪು ಗುಂಪಾಗಿ ಕಾನೇರಿ ಹೊಳೆ, ಅಂಬುಳಿ ಹೊಳೆ, ಹಳ್ಳಗಳು  ಇರುವ ಭಾಗದಲ್ಲಿ ರಾತ್ರಿ ತಂಗುತ್ತಾರೆ.

ವಾರಗಟ್ಟಲೇ ನಡೆದುಕೊಂಡು ಬಂದು ತಮ್ಮ ಇಷ್ಟ ದೇವರ ದರ್ಶನ ಪಡೆಯುತ್ತಾರೆ.
ಚಕ್ಕಡಿ ಎತ್ತುಗಳ ಗೆಜ್ಜೆಯ ನಿನಾದ: ಉಳವಿ ಜಾತ್ರೆಗೆ ಚಕ್ಕಡಿಗಾಡಿಗಳು ಬರುವುದು ಬೇಡ ಎಂಬ ಸರ್ಕಾರದ ಆದೇಶವಿದ್ದರೂ ನೂರಾರು ಚಕ್ಕಡಿಗಾಡಿಗಳು ಈಗಾಗಲೇ ಬಂದಿವೆ. ಉಳವಿ ಚೆನ್ನಬಸವಣ್ಣನ ದರ್ಶನ ಪಡೆದರೆ ನಮ್ಮ ಎತ್ತುಗಳು, ಕುಟುಂಬ, ಊರು ಸುಖದಿಂದ ಇರುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಚಕ್ಕಡಿ ಗಾಡಿಗಳನ್ನು ಭಕ್ತರು ತರುತ್ತಿದ್ದಾರೆ.

ಸಿದ್ಧಗೊಳುಳುತ್ತಿದೆ ತೇರು: ಉಳವಿ ಮಹಾರಥೋತ್ಸವಕ್ಕೆ ತೇರು ಸಜ್ಜಾಗುತ್ತಿದೆ. ಬಣ್ಣ ಬಣ್ಣದ ಕಾಗದಗಳನ್ನು ಬಳಸಿ, ಹೂವುಗಳಿಂದ, ಬಣ್ಣಗಳಿಂದ ತೇರನ್ನು ಸಿದ್ಧಗೊಳಿಸಲಾಗುತ್ತಿದೆ. ಉಳವಿ ಜಾತ್ರೆಯಲ್ಲಿ ಎರಡು ತೇರನ್ನು ಎಳೆಯಲಾಗುತ್ತದೆ. ಒಂದು ಸಣ್ಣ ತೇರು ಹಾಗೂ ಇನ್ನೊಂದು ದೊಡ್ಡ ತೇರು. ನೀರಿನ ವ್ಯವಸ್ಥೆ: ಉಳವಿ ಗ್ರಾಪಂನಿಂದ ಜಾತ್ರೆಗೆ ಬಂದ ಲಕ್ಷಾಂತರ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಹೆಚ್ಚುವರಿ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ ಎಂದು ಪಿಡಿಒ ಮಹಮ್ಮದ್‌ ಹನೀಫ್‌ ತಿಳಿಸಿದ್ದಾರೆ.

Advertisement

ಪೊಲೀಸ್‌-ಅರಣ್ಯ ಇಲಾಖೆ ಸಹಕಾರ: ಶ್ರೀಕ್ಷೇತ್ರ ಉಳವಿ ಜಾತ್ರೆಗೆ ಪೊಲೀಸ್‌ ಮತ್ತು ಅರಣ್ಯ ಇಲಾಖೆ ಸಹಕಾರ ಅತ್ಯಗತ್ಯವಾಗಿದೆ. ಪೊಲೀಸರು ಟ್ರಾಫಿಕ್‌ ಕಿರಿಕಿರಿ ತಪ್ಪಿಸಿದರೆ, ಹಚ್ಚ ಹಸಿರಿನ ಕಾಡಿಗೆ ಯಾವುದೇ ತರಹದ ಹಾನಿಯಾಗದಂತೆ ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ.

ಸಂದೇಶ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next