Advertisement

ಕಲರ್‌ಫ‌ುಲ್‌ ಕೆಮಿಸ್ಟ್ರಿ

12:30 AM Feb 15, 2019 | Team Udayavani |

“ಅಪ್ಪ, ಅಮ್ಮ, ಮಗ ಮತ್ತು ಸೊಸೆ…’ ಈ ನಾಲ್ವರ ನಡುವಿನ ಕಥೆಯೇ “ಕೆಮಿಸ್ಟ್ರಿ ಆಫ್ ಕರಿಯಪ್ಪ’.– ಹೀಗೆ ಹೇಳುತ್ತಲೇ ಮಾತಿಗಿಳಿದರು ನಟ ತಬಲನಾಣಿ. “ಒಂದು ಸಂದೇಶದ ಜೊತೆ ಮನರಂಜನೆ ಮೂಲಕ ಒಂದೊಳ್ಳೆಯ ಫ್ಯಾಮಿಲಿ ಕಥೆ ಹೇಳುತ್ತಿದ್ದೇವೆ. ಇದು ಮಂಡ್ಯ ಜಿಲ್ಲೆಯಲ್ಲಿ ನಡೆದಂತಹ ಒಂದು ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರ. ಮನುಷ್ಯನಿಗೆ ಸಮಸ್ಯೆಗಳು ಸಹಜ. ಅವೆಲ್ಲವನ್ನು ಧೈರ್ಯವಾಗಿ ಎದುರಿಸಿದರೆ ಹೇಗೆ ಬದುಕಲು ಸಾಧ್ಯವಿದೆ ಎಂಬುದನ್ನು ಹಾಸ್ಯಮಯವಾಗಿಯೇ ಇಲ್ಲಿ ಹೇಳಲಾಗಿದೆ. ಇಲ್ಲಿ ಮುಖ್ಯವಾದ ಅಂಶವೆಂದರೆ, ಮಾತೇ ಬಂಡವಾಳ. ಒಂದು ಚಿಕ್ಕ ಮನೆ, ಸಣ್ಣ ಕಾರು ಜೊತೆಗೆ ಪುಟ್ಟ ಕುಟುಂಬದ ಕಥೆ ಮತ್ತು ವ್ಯಥೆ ಇಲ್ಲಿ ಹೈಲೈಟ್‌. ನಾನಿಲ್ಲಿ ಒಬ್ಬ ಮಗನಿಗೆ ಎಷ್ಟು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುವಂತಹ ಪ್ರೀತಿಯ ಅಪ್ಪನಾಗಿ ನಟಿಸಿದ್ದೇನೆ. ಇಡೀ ಚಿತ್ರತಂಡದ ಶ್ರಮದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಚಿತ್ರ ನೋಡಿದವರಿಗೆ ಖಂಡಿತವಾಗಿಯೂ ನಗು ವಕೌìಟ್‌ ಆಗುತ್ತೆ’ ಅಂದರು ತಬಲನಾಣಿ.

Advertisement

ನಿರ್ದೇಶಕ ಕುಮಾರ್‌ ಅವರಿಗೆ ಈ ಚಿತ್ರ ಯಶಸ್ಸು ತಂದುಕೊಡುತ್ತದೆ ಎಂಬ ವಿಶ್ವಾಸ. ಕಾರಣ, ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ ಸಾಕಷ್ಟು ಮೆಚ್ಚುಗೆ ಪಡೆದಿರುವುದು. “ಮಂಡ್ಯ ಜಿಲ್ಲೆಯಲ್ಲಿ ನಡೆದ ಘಟನೆ ಬಗ್ಗೆ ಗೆಳೆಯರೊಬ್ಬರು ವಿವರಿಸಿದ್ದರು. ಆ ಘಟನೆ ಇಟ್ಟುಕೊಂಡು ಚಿತ್ರವನ್ನೇಕೆ ಮಾಡಬಾರದು ಎಂದೆನಿಸಿ ಈ ಚಿತ್ರ ಮಾಡಿದ್ದೇನೆ. ಇದೊಂದು ಫ್ಯಾಮಿಲಿ ಕಥೆ. ಮಗನಲ್ಲಿರುವ ಒಂದು ವೀಕ್‌ನೆಸ್‌ ಚಿತ್ರದ ಹೈಲೈಟ್‌. ತಂದೆಗೆ ತನ್ನ ಸಂಸಾರವೇ ಸರ್ವಸ್ವ. ಆದರೆ, ಆ ಸಂಸಾರದಲ್ಲೊಂದು ರಿಸ್ಕ್ ಶುರುವಾಗುತ್ತೆ. ಕರಿಯಪ್ಪ ಆ ಗಂಭೀರ ವಿಷಯವನ್ನು ಹೇಗೆ ಬಗೆಹರಿಸುತ್ತಾನೆ ಎಂಬುದನ್ನೇ ಇಲ್ಲಿ ಹಾಸ್ಯಮಯ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಒಂದು ಸರಳ ಸುಂದರ ಸಾಂಸಾರಿಕ ಚಿತ್ರ ಮಾಡಿದ್ದು ಖುಷಿ ಕೊಟ್ಟಿದೆ’ ಎಂಬುದು ನಿರ್ದೇಶಕ ಕುಮಾರ್‌ ಅವರ ಮಾತು.

ನಿರ್ಮಾಪಕ ಡಾ.ಡಿ.ಎಸ್‌.ಮಂಜುನಾಥ್‌ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ಸಂತಸವಿದೆ. ಸೆನ್ಸಾರ್‌ ಯಾವುದೇ ಕಟ್‌, ಮ್ಯೂಟ್‌ ಇಲ್ಲದೆ “ಯು/ಎ’ ಪ್ರಮಾಣ ಪತ್ರ ನೀಡಿದೆ. ಇಲ್ಲಿ ಸಂದೇಶದ ಜೊತೆ ಹಾಸ್ಯವೂ ಮೇಳೈಸಿದೆ. ಕನ್ನಡದಲ್ಲಿ ನೈಜ ಘಟನೆ ಸಿನಿಮಾ ಬಂದಿದ್ದರೂ, ಅವುಗಳಲ್ಲಿ ಮನರಂಜನೆ ಹೆಚ್ಚಾಗಿ ಕಂಡಿಲ್ಲ ಎನ್ನುವವರಿಗೆ ಇಲ್ಲಿ ಮನರಂಜನೆ ಮುಖ್ಯವಾಗಿದೆ. ಸಿನಿಮಾ ನೋಡಿ ಹೊರಬಂದವರಿಗೆ ಹೊಸ ಫೀಲ್‌ ಸಿಗಲಿದೆ. ಕನ್ನಡ ಚಿತ್ರಗಳನ್ನು ಮಾಡುವುದೇ ಕಷ್ಟ. ಅದರಲ್ಲೂ ಬಿಡುಗಡೆ ಮಾಡುವುದು ಇನ್ನೂ ಕಷ್ಟ. ಆದರೆ, ವಿತರಕ ವಿಜಯ್‌ ಅವರು ಸಿನಿಮಾ ನೋಡಿ, ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನಿರ್ದೇಶಕರು ಹೇಳಿದ ಬಜೆಟ್‌ ಒಳಗೆ ಚಿತ್ರ ಮಾಡಿ ಮುಗಿಸಿದ್ದಾರೆ. ನಿಜ ಹೇಳುವುದಾದರೆ, ನಾನೀಗ ಲಾಭದಲ್ಲಿದ್ದೇನೆ’ ಅಂದರು ಮಂಜುನಾಥ್‌.

ವಿತರಕ ವಿಜಯ್‌ ಅವರು, ಭೂಮಿಕಾ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ರಾಜ್ಯದೆಲ್ಲೆಡೆ ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಕುರಿತು ಹೇಳಿಕೊಂಡರು.

ನಾಯಕಿ ಸಂಜನಾಗೆ ಇದು ಮೊದಲ ಚಿತ್ರವಂತೆ. ಅವರಿಲ್ಲಿ ಹಳ್ಳಿಯಿಂದ ಬಂದು ಹುಡುಗಿ ಪಾತ್ರ ನಿರ್ವಹಿಸಿದ್ದು, ಗಂಡನನ್ನೇ ಗಂಡಸು ಎಂಬ ಬಗ್ಗೆ ಗೊಂದಲ ಪಡುವಂತಹ ಪಾತ್ರ ಮಾಡಿದ್ದಾರಂತೆ. ಒಂದು ಸಮಸ್ಯೆ ಬಂದಾಗ, ಹೆಣ್ಣು ಹೇಗೆ ನಿರ್ಧಾರ ತೆಗೆದುಕೊಳ್ಳಬೇಕೆಂಬ ಸಂದೇಶ ಇಲ್ಲಿ ಪ್ರಧಾನ ಎಂಬುದು ಸಂಜನಾ ಮಾತು. ಅಪೂರ್ವ ಇಲ್ಲಿ ತಬಲನಾಣಿ ಅವರ ಜೋಡಿಯಾಗಿ ನಟಿಸಿದ ಬಗ್ಗೆ ಹೇಳಿಕೊಂಡರು. ನಾಯಕ ಚಂದನ್‌, ಹೆಚ್ಚೇನೂ ಮಾತನಾಡಲಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next