ರಾಣಿಬೆನ್ನೂರ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾನಗಲ್ಲ ತಾಲೂಕಿನ ಶಿಗ್ಗಿಹಳ್ಳಿ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ಪ್ರಮುಖ್ಯತೆ ಕುರಿತ ತರಬೇತಿ ಕಾರ್ಯಗಾರವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಿಜ್ಞಾನಿ ಡಾ| ಸಂತೋಷ ಎಚ್.ಎಂ. ಮಾತನಾಡಿ, ರೈತ ಮಹಿಳೆಯರಿಗೆ ತರಕಾರಿ ಮತ್ತು ಹಣ್ಣಿನ ಬೆಳೆಗಳ ಬೇಸಾಯ ಹೊಸದೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕೃಷಿಯು ಕೇವಲ ವಾಣಿಜ್ಯ ಬೆಳೆಗಳು ಮತ್ತು ಹೆಚ್ಚಿನ ಆದಾಯ ನೀಡುವ ಬೆಳೆಗಳಿಗೆ ಮಾತ್ರ ಸೀಮಿತವಾಗಿದೆ. ಪ್ರಸ್ತುತ ತರಕಾರಿ ಮತ್ತು ಹಣ್ಣುಗಳ ಬೇಸಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಔಷಧಿ ಮತ್ತು ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಇವುಗಳ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದೆ ಎಂದರು.
ಆದ್ದರಿಂದ ಮನೆಯ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ, ಆರೋಗ್ಯ ರಕ್ಷಿಸಿಕೊಳ್ಳಲು ಪೌಷ್ಟಿಕ ಕೈತೋಟ ಮಾಡಿಕೊಳ್ಳುವುದು ಅಗತ್ಯವಿದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಪ್ರತಿದಿನ ತಾಜಾ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಮನೆಯ ಸದಸ್ಯರು ಸವಿಯಬಹುದು. ಆರೋಗ್ಯವಂತ ಮನುಷ್ಯನು ಪ್ರತಿದಿನ ಸೊಪ್ಪು, ಹೂ, ಕಾಯಿ, ಹಣ್ಣು ಮತ್ತು ಬೇರಿನ ತರಕಾರಿಗಳನ್ನು ಒಳಗೊಂಡಂತೆ ಕನಿಷ್ಟ 325 ಗ್ರಾಂ ನಷ್ಟು ತರಕಾರಿ ಹಾಗೂ 100 ಗ್ರಾಂ ಹಣ್ಣನ್ನು ಪ್ರತಿದಿನ ಸೇವಿಸಬೇಕು. ಇದರಿಂದ ದೇಹಕ್ಕೆ ಬೇಕಾಗುವ ವಿಟಮಿನ, ಖನಿಜಾಂಶ, ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತವೆ ಎಂದರು.
ಕೈತೋಟದಲ್ಲಿ ಬೇರಿನ ತರಕಾರಿಗಳಾದ ಬೀಟ್ ರೊಟ್, ಮೂಲಂಗಿ ಹಾಗೂ ಸೊಪ್ಪಿನ ತರಕಾರಿಗಳಾದ ದಂಟಿನ ಸೊಪ್ಪು, ಕೊತ್ತಂಬರಿ, ಮೆಂತೆ, ಪಾಲಕ, ಕರಿಬೇವು ಸೊಪ್ಪು, ಈರುಳ್ಳಿ ಜತೆಗೆ ಕಾಯಿ ಮತ್ತು ಹಣ್ಣಿನ ರೂಪದಲ್ಲಿ ಬಳಸುವ ಟೋಮ್ಯಾಟೊ, ಬದನೆ, ಮೆಣಸಿನಕಾಯಿ, ಹಿರೇಕಾಯಿ, ಹಾಗಲಕಾಯಿ, ಸೌತೆಕಾಯಿ, ಬೆಂಡೆ, ತೊಂಡೆಕಾಯಿ, ಕುಂಬಳಕಾಯಿ, ನುಗ್ಗೆ, ತಿಂಗಳ ಹುರುಳಿ, ಅಲಸಂ , ಅವರೆಕಾಯಿ ಇತ್ಯಾದಿ ತರಕಾರಿಗಳನ್ನು ಹಾಗೂ ಸಪೋಟ, ಪೇರಲ, ಪಪ್ಪಾಯ, ಮಾವು, ನಿಂಬೆ, ಸೀತಾಫಲ, ಬಾಳೆ ಸೇರಿದಂತೆ ಇತ್ಯಾದಿ ಹಣ್ಣಿನ ಬೆಳೆಗಳನ್ನು ಮಾಡಬಹುದು ಎಂದು ತಿಳಿಸಿದರು,
ಡಾ| ರಾಜಕುಮಾರ ಜಿ.ಆರ್. ಮಾತನಾಡಿ, ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಫಲವತ್ತತೆ ಹೆಚ್ಚಾಗುವುದು. ಕೈತೋಟದ ಒಂದು ಮೂಲೆಯಲ್ಲಿ ಎರೆಹುಳು, ಗೊಬ್ಬರ ತಯಾರಿಸಲು ಅವಕಾಶ ಮಾಡಿಕೊಂಡು, ಸಿಗುವಂತಹ ಕಳೆ, ಬೆಳೆಯ ಅವಶೇಷಗಳನ್ನು ಬಳಸಿಕೊಳ್ಳಬಹುದು. ಎರೆಹುಳು ಗೊಬ್ಬರವು ಬೆಳೆಗೆ ಬೇಕಾಗುವ ಪೋಷಕಾಂಶ ಹೊಂದಿರುವ ಜತೆಗೆ ಹ್ಯೂಮಸ್ ಅಂಶವನ್ನು ನೀಡುತ್ತದೆ.
ಮಣ್ಣಿನಲ್ಲಿ ನೀರು ಹಿಡಿದಿಡುವ ಜತೆಗೆ ಖನಿಜಾಂಶಗಳು ಮಳೆ ನೀರಿನೊಂದಿಗೆ ಕೊಚ್ಚಿ ಹೋಗುವುದನ್ನು ತಡೆದು ಮಣ್ಣಿನ ಗುಣಮಟ್ಟವನ್ನು ಉತ್ತಮ ಪಡಿಸುತ್ತದೆ ಎಂದು ವಿವರಿಸಿದರು. ಡಾ| ಶಿವಮೂರ್ತಿ ಡಿ., ತರಕಾರಿ ಬೀಜಗಳ ಬಿತ್ತುವ ಕ್ರಮ, ಕಳೆ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ ಹಾಗೂ ಕಾಂಪೋಸ್ಟ್ ತಯಾರಿಕೆ ಬಗ್ಗೆ ರೈತರಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಡಾ| ಮಹೇಶ ಕಡಗಿ ಆರೋಗ್ಯವಂತ ಬದುಕಿಗೆ ಹಾಲಿನ ಮಹತ್ವ ಹಾಗೂ ರಾಸುಗಳಿಗೆ ಮೇವಿನ ಬೆಳೆಗಳ ಬಗ್ಗೆ ಮಾಹಿತಿ
ನೀಡಿದರು. ತರಬೇತಿಯಲ್ಲಿ 40ಕ್ಕೂ ಅಧಿಕ ರೈತ ಮಹಿಳೆಯರು ಮತ್ತು ರೈತರು ಪಾಲ್ಗೊಂಡಿದ್ದರು.