ಮೈಸೂರು: ರಾಸಾಯನಿಕ ತ್ಯಾಜ್ಯಕ್ಕೆ ಸಿಲುಕಿ ಬಾಲಕನೊಬ್ಬ ಬಲಿಯಾಗಿರುವ ಘಟನೆ ರಾಜ್ಯದೆಲ್ಲೆಡೆ ತಲ್ಲಣ ಮೂಡಿಸಿದ್ದು,ವಾಟರ್ ಸೆನ್ಸಿಟಿವ್ ರಾಸಾಯನಿಕ ಪದಾರ್ಥಗಳಿಂದಲೇ ಈ ಅನಾಹುತ ಸಂಭವಿಸಿದೆ ಎನ್ನುವುದು ಖಚಿತವಾಗಿದೆ. ಆದರೆ, ಸ್ಪಷ್ಟವಾಗಿ ಯಾವ ರಾಸಾಯನಿಕ ವಸ್ತು ಮತ್ತು ಯಾರು ಇಲ್ಲಿ ತಂದು ಪೇರಿಸಿದ್ದಾರೆ ಎನ್ನುವುದು ಗೊತ್ತಾಗಿಲ್ಲ.
ಪರಿಸರ ಮಾಲಿನ್ಯ ಅಧಿಕಾರಿಗಳು ಮತ್ತು ಭೂಗರ್ಭ ವಿಜ್ಞಾನಿಗಳು ಜಿಲ್ಲಾಡಳಿತದ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ಮಣ್ಣಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಘಟನಾ ಸ್ಥಳದಲ್ಲಿ ಮಣ್ಣಿನ ತಾಪಮಾನ 110 ಡಿಗ್ರಿ ಸೆ. ಇದ್ದು, ವಾತಾವರಣ ತಾಪಮಾನಕ್ಕಿಂತ ಹೆಚ್ಚಿದೆ. ಮಣ್ಣು ನಯವಾದ ಮರಳಿನಂತಿದ್ದು, ಬೂದು ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ಸ್ಥಳದಲ್ಲಿ ಯಾವುದೇ ವಾಸನೆ ಅಥವಾ ಘಾಟು ಇಲ್ಲ ಎಂದು ತಜ್ಞರ ತಂಡ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ.
ಸುತ್ತಮುತ್ತಲಿನ ಕೆಲವು ಕಾರ್ಖಾನೆಗಳು ವಿಷಯುಕ್ತ ರಾಸಾಯನಿಕ ಪದಾರ್ಥವನ್ನು ಸಂಸ್ಕರಿಸದೆ ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೈಸೂರಿನಲ್ಲಿರುವ ನೋಟು ಮುದ್ರಣ ಸಂಸ್ಥೆಯಿಂದ ತ್ಯಾಜ್ಯ ರಾಸಾಯನಿಕ ತಂದು ಅಲ್ಲಿ ಸುರಿಯಲಾಗುತ್ತಿದೆ. ಈ ತ್ಯಾಜ್ಯದಿಂದ ಬೆಂಕಿ ಹೊತ್ತಿಕೊಂಡು ಬಾಲಕನ ಸಾವು ಸಂಭವಿಸಿದೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ. ಇದಕ್ಕೆ ದನಿಗೂಡಿಸಿರುವ ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಭಾರತೀಯ ನೋಟು ಮುದ್ರಣ ಘಟಕದತ್ತ ಬೊಟ್ಟು ಮಾಡುತ್ತಾರೆ. ಪ್ರಿಂಟಿಂಗ್ ಕೆಮಿಕಲ್ ಅನ್ನು ಅವೈಜಾnನಿಕವಾಗಿ ಆರ್‌ಬಿಐ ವಿಲೇವಾರಿ ಮಾಡುತ್ತಿದೆ ಎಂದು ನಾಲ್ಕೈದು ವರ್ಷಗಳ ಹಿಂದೆಯೇ ಸಂಘದಿಂದ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ತ್ಯಾಜ್ಯ ಸಂಸ್ಕರಣಾ ಘಟಕವನ್ನೂ ಸ್ಥಾಪಿಸಿಲ್ಲ ಎಂದು ಆರೋಪಿಸಿದ್ದಾರೆ.
ಫಾಸ್ಪರಸ್, ಸೋಡಿಯಂ ಹೈಡ್ರೇಡ್‌ನಂಥ ವಾಟರ್ ಸೆನ್ಸಿಟಿವ್ ಕೆಮಿಕಲ್‌ಗಳಿಂದ ಈ ದುರಂತ ಸಂಭವಿಸಿರಬಹುದು. ಈ ರಾಸಾಯನಿಕ ತ್ಯಾಜ್ಯಗಳು ನೀರಿನ ಅಂಶ ಬಿದ್ದ ಕೂಡಲೇ ಪ್ರತಿಕ್ರಿಯೆ ನೀಡುತ್ತವೆ ಎನ್ನುವುದು ವಿಜ್ಞಾನಿಗಳ ಹೇಳಿಕೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ , ಈ ಬಗ್ಗೆ ಪ್ರತಿಕ್ರಿಯಿಸಿರುವ ಮಣ್ಣಿನ ಮಾದರಿಯನ್ನು ಪರೀಕ್ಷಿಸಿದಾಗ ಅದರಲ್ಲಿ ಪಿಎಚ್-7.0 ಇತ್ತು. ಇದು ಸಾಮಾನ್ಯವಾಗಿದ್ದು, ಫಾಸ್ಪರಸ್, ಸೋಡಿಯಂ ಹೈಡ್ರೇಡ್ ಇದೆಯಾ, ಇದ್ದರೆ ಎಷ್ಟು ಪ್ರಮಾಣದಲ್ಲಿದೆ ಹಾಗೂ ಎಲ್ಲಿಂದ ಅದು ಬರುತ್ತಿದೆ ಈ ಮಾಹಿತಿಗಳೆಲ್ಲವೂ ಪ್ರಯೋಗಾಲಯದಿಂದ ವರದಿ ಬಂದ ನಂತರ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ನನ್ನ ಮಗನ ಸಾವಿಗೆ ಸುತ್ತಮುತಲಿನ ಕಾರ್ಖಾನೆಗಳವರೇ ಕಾರಣ. ಮುಂಚೆಯೇ ಅಧಿಕಾರಿಗಳು ಎಚ್ಚರವಹಿಸಿದ್ದರೆ ನನ್ನ ಮಗನಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಇನ್ನೊಬ್ಬರಿಗೆ ಈ ರೀತಿ ಆಗದಂತೆ ಇನ್ನಾದರೂ ಎಚ್ಚರವಹಿಸಲಿ.
– ಮೂರ್ತಿ, ಮೃತ ಬಾಲಕ ಹರ್ಷಲ್ ತಂದೆ