Advertisement
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.ಮೀನು ಕೆಡದಂತೆ ಫಾರ್ಮಾಲಿನ್ ರಾಸಾಯನಿಕ ಬಳಕೆ ಮಾಡಲಾಗುತ್ತಿದೆಯೇ ಎಂದು ತಿಳಿಯಲು ಮಲ್ಪೆ ಬಂದರಿನಿಂದ ಹೊರ ಹೋಗುವ ಮೀನು ಲಾರಿಗಳ ಮೀನು ಮತ್ತು ಮಲ್ಪೆಗೆ ಆಗಮಿಸುವ ಹೊರ ರಾಜ್ಯದ ಲಾರಿಗಳ ಮೀನುಗಳನ್ನೂ ಪರಿಶೀಲಿಸಲಾಗಿದೆ. ಅವುಗಳಲ್ಲಿ ಫಾರ್ಮಾಲಿನ್ ಅಂಶ ಪತ್ತೆಯಾಗಿಲ್ಲ.
ಪರಿಶೀಲನೆಗೆ ತೆಗೆದುಕೊಂಡ ಒಟ್ಟು 15 ಮಾದರಿಗಳನ್ನು ಮೈಸೂರಿನ ಎನ್‌ಎಬಿಎಲ್ (ನ್ಯಾಷನಲ್ ಅಕ್ರಿಡರೇಟೆಡ್ ಬೋರ್ಡ್ ಫಾರ್ ಲ್ಯಾಬೋರೇಟರಿಗೆ ಪರಿಶೀಲನೆಗೆ ಕಳುಹಿಸಲಾಗಿತ್ತು. ಜಿಲ್ಲೆಯ ಮೀನುಗಳಲ್ಲಿ ಯಾವುದೇ ರಾಸಾಯನಿಕ ಬಳಕೆ ಆಗಿಲ್ಲ ಎಂದು ವರದಿ ಬಂದಿದೆ. ಹಾಗಾಗಿ ಆತಂಕ ಬೇಡ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ತಯಾರಿಕಾ ಘಟಕಗಳಿಗೆ ಮತ್ತು ಆಹಾರ ತಯಾರಿಕಾ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಯವರು ಆಹಾರ ಸುರಕ್ಷಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರೋಹಿಣಿ, ಆರೋಗ್ಯ ಇಲಾಖೆ ಮತ್ತು ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.