ಮುಂಬಯಿ: ಚೆಂಬೂರು ತಿಲಕ್ ನಗರದ ಸಹ್ಯಾದ್ರಿ ಮಂಡಳದ ಗಣೇಶೋತ್ಸವವು ಆ. 25ರಿಂದ ಪ್ರಾರಂಭಗೊಂಡು ಸೆ. 5 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಪ್ರತೀ ವರ್ಷ ವೈವಿಧ್ಯಮಯ ವಿನ್ಯಾಸಗಳನ್ನು ನಿರ್ಮಿಸಿ ಜನಾಕರ್ಷಣೆಗೆ ಒಳಗಾಗಿರುವ ಸಹ್ಯಾದ್ರಿ ಕ್ರೀಡಾಮಂಡಲವು ಪ್ರಸ್ತುತ ವರ್ಷ ದೇಶ ಭಕ್ತಿಯನ್ನು ಬಿಂಬಿಸುವ ಜೈ ಜವಾನ್-ಜೈಕಿಸಾನ್-ಜೈ ವಿಜ್ಞಾನ್ ಎಂಬ ಧ್ಯೇಯೋದ್ದೇಶದೊಂದಿಗೆ ಗಣೇಶೋತ್ಸವದ ಪೆಂಡಾಲನ್ನು ನಿರ್ಮಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಕಳೆದ ವರ್ಷ ಪಾಂಡಾ ವಿಲೇಜ್‌ನ ದೃಶ್ಯವನ್ನು ನಿರ್ಮಿಸಿ ಎಳೆಯ ಮಕ್ಕಳಿಗೆ ವಿಶೇಷ ಅನುಭವನವನ್ನು ನೀಡಿತ್ತು. ಕಳೆದ ಐದು ವರ್ಷಗಳಿಂದ ಕಿಡ್ಸ್ ವರ್ಲ್ಡ್, ಶಿವಾಜಿ ಮಹಾರಾಜ್, ಸಿನಿಮಾ ಜಗತ್ತಿಗೆ ನೂರು ವರ್ಷ, ವಾರಾಣಸಿ ಪರಂಪರೆಯನ್ನು ಬಿಂಬಿಸುವ ಆಕೃತಿಗಳನ್ನು ನಿರ್ಮಿಸಿ ಎಲ್ಲರ ಆಕರ್ಷಣೆಗೊಳಪಟ್ಟಿತ್ತು.
ಪ್ರಸ್ತುತ ವರ್ಷ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಪಸರಿಸಿದ ದೇಶದ ವಿವಿಧ ವಾಸ್ತುಶಿಲ್ಪ, ಸಂಸ್ಕೃತಿಯನ್ನು ಇಲ್ಲಿ ಪಡಿಮೂಡಿಸಲಾಗಿದೆ. ಮಂಡಲದ ಅಧ್ಯಕ್ಷ ರಾಹುಲ್ ಗಜಾನನ ವಾಳಂಜ ಅವರು ಪ್ರತೀ ವರ್ಷದಂತೆ ತನ್ನ ಕಲ್ಪನೆಯಿಂದ ದೃಶ್ಯದ ಯೋಜನೆಯನ್ನು ಮಾಡುತ್ತಿದ್ದಾರೆ. ಈ ಕಲೆ
ಯನ್ನು ಪ್ರತ್ಯಕ್ಷವಾಗಿಸುವಲ್ಲಿ ಕಲಾ ಸಂಯೋಜಕ ಪ್ರಸನಜೀತ್ ಚಂದಾ ಅವರು ಶ್ರಮಿಸುತ್ತಿದ್ದಾರೆ. ನಿಕಿಲ್ ಮೋರೆ, ಸಂತೋಷ್ ಶಿಲಾರ, ಚಿತ್ರಕಾರ ದಿಲೀಪ್ ಮೈತಿ ಅವರು ಸಹಕರಿಸುತ್ತಿದ್ದಾರೆ.
ಮಂಡಳವು ಕಳೆದ ಹಲವಾರು ವರ್ಷಗಳಿಂದ ವಿಭಿನ್ನ ಆಕೃತಿಗಳನ್ನು ಸೃಷ್ಟಿಸಿ ಹಲವಾರು ಪ್ರಶಸ್ತಿಗಳಿಗೂ ಭಾಜನವಾಗುತ್ತಿದೆ. ಒಟ್ಟಿನಲ್ಲಿ ಸಹ್ಯಾದ್ರಿ ಕ್ರೀಡಾ ಮಂಡಲವು ಪ್ರಸ್ತುತ ವರ್ಷ ಭಕ್ತಾದಿಗಳನ್ನು ಮತ್ತೆ ತನ್ನತ್ತ ಕೈಬೀಸಿ ಕರೆಯಿಸಿಕೊಳ್ಳಲು ಸನ್ನದ್ಧವಾಗಿದೆ.