ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ಆಶ್ರಯದಲ್ಲಿ ನೂತನ ಮಂದಿರದ ಉದ್ಘಾಟನೆ ಹಾಗೂ ಗಣಪತಿ ವಿಗ್ರಹ ಪ್ರತಿಷ್ಠಾಪನೆಯು ಆ. 24ರಂದು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.
ಚೆಂಬೂರಿನ ಘಾಟ್ಲಾದಲ್ಲಿರುವ ಚೆಂಬೂರು ಕರ್ನಾಟಕ ಸಂಘದ ವಿದ್ಯಾಸಂಸ್ಥೆಗಳ ಪ್ರವೇಶ ದ್ವಾರದಲ್ಲಿ ಭವ್ಯ ಗಣಪತಿಯ ಮಂದಿರವು ನಿರ್ಮಾಣಗೊಂಡಿದ್ದು, ವಿಶೇಷವೆಂದರೆ ವಿಶ್ವಪ್ರಸಿದ್ಧ ಕಾರ್ಕಳದ ಶಿಲ್ಪಿಗಳಿಂದ ಕರಿಕಲ್ಲಿನಲ್ಲಿ ನಿರ್ಮಿಸಲ್ಪಟ್ಟ ಗಪತಿಯ ಮೂರ್ತಿಯು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಆ. 23ರಂದು ಸಂಜೆ ತೆಂಗಿನ ಗರಿಗಳ ಛತ್ರ ಚಾಮರಗಳಿಂದ ಕಂಗೊಳಿಸುವ ನಿಸರ್ಗ ರಮಣೀಯ ವಿದ್ಯಾಸಾಗರ ಪರಿಸರಕ್ಕೆ ವಿಘ್ನೇಶ್ವರನ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಯಿತು. ಕಾರ್ಯಕಾರಿ ಸಮಿತಿಯ ಸುಂದರ ಕೋಟ್ಯಾನ್ ದಂಪತಿ ವಿಗ್ರಹಕ್ಕೆ ಅಭಿಷೇಕ ಹಾಗೂ ಬಿಂಬಾಧಿವಾಸ ಪೂಜೆಯನ್ನು ನೆರವೇರಿಸಿದರು. ಅಹೋರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆ. 24ರಂದು ಬೆಳಗ್ಗೆ 8.30ರಿಂದ ಛೆಡ್ಡಾ ನಗರದ ಸುಬ್ರಹ್ಮಣ್ಯ ಮಠದ ವಿಷ್ಣು ಪುರೋಹಿತರು ಮತ್ತು ತಂಡದವರು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದಯಾಸಾಗರ್ ಚೌಟ ಮತ್ತು ಸುರೇಖಾ ದಂಪತಿ ವಿಗ್ರಹದ ಪ್ರತಿಷ್ಠಾಪನ ಕಾರ್ಯಕ್ರಮಗಳನ್ನು ನೆರವೇರಿಸಿದರು. ಪುಷ್ಪಾಲಂಕೃತ ಮಂದಿರ ದಲ್ಲಿ ಗಣಪತಿಯ ಮೂರ್ತಿಯು ಪ್ರತಿಷ್ಠಾಪನೆಗೊಂಡಿದ್ದು, ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು, ತುಳು-ಕನ್ನಡಿಗರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆ. 25ರಂದು ಸಂಘದ ವಠಾರದಲ್ಲಿ ವಾರ್ಷಿಕ ಗಣಹೋಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರಂಜನ್ ಕುಮಾರ್ ಅಮೀನ್ ದಂಪತಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಚೆಂಬೂರು ಕರ್ನಾಟಕ ಸಂಘವು ಶೀಘ್ರದಲ್ಲಿಯೇ ತನ್ನ ಬಹುಕಾಲದ ಕನಸಾಗಿರುವ ಕಾನೂನು ಪದವಿ ಕಾಲೇಜನ್ನು ಲೋಕಾರ್ಪಣೆಗೊಳಿಸಲಿದ್ದು, ಈ ಬಾರಿಯ ಸಿಇಟಿ ಪರೀಕ್ಷೆಯ ಅನಂತರ ಕಾರ್ಯಾರಂಭಗೊಳ್ಳಲಿದೆ.
ಸಂಘದ ಅಧ್ಯಕ್ಷ ಎಚ್. ಕೆ. ಸುಧಾಕರ ಆರಾಟೆ, ಉಪಾಧ್ಯಕ್ಷ ಪ್ರಭಾಕರ ಬೋಳಾರ, ಗೌರವ ಪ್ರಧಾನ ಕಾರ್ಯದರ್ಶಿ ರಂಜನ್ ಕುಮಾರ್ ಅಮೀನ್, ಕೋಶಾಧಿಕಾರಿ ಟಿ. ಆರ್. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ದಯಾಸಾಗರ್ ಚೌಟ, ಇತರ ಪದಾಧಿಕಾರಿಗಳಾದ ಗುಣಕರ ಹೆಗ್ಡೆ, ಮಧುಕರ ಬೈಲೂರು, ಸುಂದರ ಕೋಟ್ಯಾನ್, ಮೋಹನ್ ಕಾಂಚನ್, ಜಯ ಎನ್. ಶೆಟ್ಟಿ, ಯೋಗೇಶ್ ಗುಜರನ್, ರಾಮ ಪೂಜಾರಿ, ವಿಶ್ವನಾಥ್ ಶೇಣವ, ದೇವದಾಸ್ ಶೆಟ್ಟಿಗಾರ್, ಜಯ ಎಂ. ಶೆಟ್ಟಿ, ಸುಧೀರ್ ಪುತ್ರನ್, ಅಶೋಕ್ ಸಾಲ್ಯಾನ್, ಚಂದ್ರಶೇಖರ ಅಂಚನ್, ಸುಧಾಕರ ಅಂಚನ್ ಮತ್ತು ಸಿ. ಎಸ್. ನಾಯಕ್, ಸಂಜೀವ ಶೆಟ್ಟಿ ಮೊದಲಾದವರು ಸಂಸ್ಥೆಯ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ.