Advertisement

ಉಳ್ಳಾಲ: ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಅಸ್ತು

12:32 PM Apr 29, 2021 | Team Udayavani |

ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ಚೆಂಬುಗುಡ್ಡೆ ಹಿಂದೂ ರುದ್ರಭೂಮಿ ಸುಮಾರು ಐವತ್ತು ವರ್ಷಕ್ಕಿಂತಲೂ ಹೆಳೆಯ ರುದ್ರಭೂಮಿ. ಸುಮಾರು ಎರಡು ಎಕರೆ ಪ್ರದೇಶದಲ್ಲಿರುವ ಈ ರುದ್ರಭೂಮಿಯಲ್ಲಿ ವಿದ್ಯುತ್‌ ಚಿತಾಗಾರದ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಇದೀಗ ವಿದ್ಯುತ್‌ ಚಿತಾಗಾರ ನಿರ್ಮಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದು, ಸುಮಾರು 80 ಲಕ್ಷ ರೂ ವೆಚ್ಚದ ವಿದ್ಯುತ್‌ ಚಿತಾಗಾರ ಸದ್ಯದಲ್ಲೇ ಚೆಂಬುಗುಡ್ಡೆಯಲ್ಲಿ ನಿರ್ಮಾಣವಾಗಲಿದೆ.

Advertisement

ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಪೆರ್ಮನ್ನೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಚೆಂಬುಗುಡ್ಡೆ ರುದ್ರಭೂಮಿ ಶವ ಸಂಸ್ಕಾರಕ್ಕೆ ಹೆಚ್ಚು ಬಳಕೆಯಾಗುತ್ತಿರುವ ರುದ್ರಭೂಮಿ ವರ್ಷಕ್ಕೆ ಸುಮಾರು 400ಕ್ಕೂ ಹೆಚ್ಚು ಶವಸಂಸ್ಕಾರ ಈ ರುದ್ರಭೂಮಿಯಲ್ಲಿ ಆಗುತ್ತಿದೆ. ಈ ನಡುವೆ ಕಳೆದ 10 ವರ್ಷಗಳಿಂದ ಈಚೆಗೆ ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ರುದ್ರಭೂಮಿಯ ಸುತ್ತಮುತ್ತ ಮನೆಗಳ ಶಾಲಾ ಕಾಲೇಜುಗಳು ತಲೆ ಎತ್ತಿದ್ದು, ವಾಯುಮಾಲಿನ್ಯವೂ ಇಲ್ಲಿನ  ಜನರಿಗೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಈ ರುದ್ರಭೂಮಿಯಲ್ಲಿ ಸಾವಿರಗಟ್ಟಲೆ ಕ್ವಿಂಟಾಲ್‌ ಲೆಕ್ಕದಲ್ಲಿ ಕಟ್ಟಿಗೆಯೂ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ವಿದ್ಯುತ್‌ ಚಿತಾಗಾರದ ಬೇಡಿಕೆಯಿಡಲಾಗಿತ್ತು.

ಇದನ್ನೂ ಓದಿ:ಕೋವಿಡ್‌-19 ಎದುರಿಸಲು ಉಳ್ಳಾಲ ಆರೋಗ್ಯ ಕೇಂದ್ರ ಸಜ್ಜು

ಸ್ಮಶಾನ ನಿರ್ವಹಣಾ ಸಮಿತಿಯ ಅಧ್ಯಕ್ಷ ಚಂದ್ರಹಾಸ್‌ ಉಳ್ಳಾಲ್‌, ಪದಾಧಿಕಾರಿಗಳಾದ ಈಶ್ವರ್‌ ಉಳ್ಳಾಲ್‌, ಸುರೇಶ್‌ ಭಟ್ನಗರ, ವಿಠಲ ಶ್ರೀಯಾನ್‌,ರಾಜೀವ ಮೆಂಡನ್‌, ರಮೇಶ್‌ ಮೆಂಡನ್‌, ಭಾಸ್ಕರ ಶೆಟ್ಟಿ, ಸುಂದರ ಅಮೀನ್‌ , ಶೇಖರ್‌ ಚೊಂಬುಗುಡ್ಡೆ ಸ್ಥಳೀಯ ನಗರ ಸಭೆ ಸದಸ್ಯರಾದ ಶಶಿಕಲಾ ಹಾಗೂ ಬಾಝಿಲ್‌ ಡಿಸೋಜ ಏಳು ತಿಂಗಳ ಹಿಂದೆ ಕ್ಷೇತ್ರದ ಶಾಸಕ ಯು.ಟಿ.ಖಾದರ್‌ ರವರಿಗೆ ಮನವಿಯನ್ನು ಸಲ್ಲಿಸಿದ್ದರು. ಸಮಿತಿಯ ಮನವಿಯನ್ನು ಶಾಸಕರು ಜಿಲ್ಲಾಧಿಕಾರಿಗೆ ನೀಡಿದ್ದು ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕೆ ಸಂಬಂಧಿಸಿದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದರು. ಇದೀಗ ವಿದ್ಯುತ್‌ ಚಿತಾಗಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇದೀಗ ಅನುಮೋದನೆಯನ್ನು ನೀಡಿದ್ದಾರೆ.

Advertisement

ರುದ್ರಭೂಮಿ ಸುಮಾರು ಎರಡು ಎಕರೆ ಪ್ರದೇಶದಲ್ಲಿದ್ದು ಇದರಲ್ಲಿ ಐವತ್ತು ಸೆಂಟ್ಸ್‌ ಪ್ರದೇಶವನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬೇಕಾದ ದೊಡ್ಡ ನೀರಿನ ಟ್ಯಾಂಕ್‌ಗೆ ನೀಡಿದ್ದು, ದಫನ ಭೂಮಿಯಲ್ಲಿಯೂ ಅಂಡರ್‌ಗ್ರೌಂಡ್‌ ಟ್ಯಾಂಕ್‌ ನಿರ್ಮಾಣಕ್ಕೆ ನೀಡಿದ್ದರಿಂದ ಸ್ಥಳದ ಅಭಾವ ಹೆಚ್ಚಾಗಿದ್ದು ಇರುವ ಸ್ಥಳದಲ್ಲಿ ಶವಸಂಸ್ಕಾರ ನಡೆಸಲು ಮತ್ತು ಮುಂದಿನ ಜನಸಂಖ್ಯೆಯ ಆಧಾರದಲ್ಲಿ ವಿದ್ಯುತ್‌ ಚಿತಾಗಾರಕ್ಕೆ ಸಮಿತಿ ಶಾಸಕ ಯು.ಟಿ.ಖಾದರ್‌ ಅವರ ಮೂಲಕ ಬೇಡಿಕೆಯಿಟ್ಟಿದ್ದು ಇದೀಗ ಬೇಡಿಕೆಗೆ ಮನ್ನಣೆ ಸಿಕ್ಕಿದ್ದು ವಿದ್ಯುತ್‌ ಚಿತಾಗಾರ ನಿರ್ಮಾಣ ಸದಸ್ಯದಲ್ಲೇ ಆಗಲಿದೆ.

– ಚಂದ್ರಹಾಸ ಉಳ್ಳಾಲ್‌, ಅಧ್ಯಕ್ಷರು, ರುದ್ರಭೂಮಿ ನಿರ್ವಹಣಾ ಸಮಿತಿ

ಉಳ್ಳಾಲ ಬೆಳೆಯುತ್ತಿರುವ ಪಟ್ಟಣವಾಗಿದ್ದು ಇಲ್ಲಿ ಪ್ರಮುಖ  ಮೂರು ಮೆಡಿಕಲ್‌ ಕಾಲೇಜು ಆಸ್ಪತ್ರೆಗಳು ಕಾರ್ಯಾಚರಿಸುತ್ತಿದ್ದು, ಅಲ್ಲದೇ ನಗರಕ್ಕೂ ಬಹಳ ಹತ್ತಿರವಾದ ಪ್ರದೇಶವಾದ್ದರಿಂದ ಕೋವಿಡ್‌ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯುತ್‌ ಚಿತಾಗಾರದ ಅವಶ್ಯಕತೆಯನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದು ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ ರವರನ್ನು ಸ್ಥಳಕ್ಕೆ ಕರೆದುಕೊಂಡು ಸ್ಥಳ ಪರಿಶೀಲನೆ ಕೂಡಾ ನಡೆಸಿದ್ದರು. ಇದೀಗ ವಿದ್ಯುತ್‌ ಚಿತಾಗಾರಕ್ಕೆ ಅನುಮೋದನೆ ಸಿಕ್ಕಿದ್ದು  ಅತೀ ಶೀಘ್ರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಸ್ಮಶಾನ ಸಮಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ವಿದ್ಯುತ್‌ ಚಿತಾಗಾರ ನಿರ್ಮಾಣದ ಬಗ್ಗೆ ಕಾರ್ಯಸೂಚಿಯನ್ನು ತಯಾರಿಸುಲಾಗುವುದು.

-ಯು.ಟಿ.ಖಾದರ್‌, ಶಾಸಕರು, ಮಂಗಳೂರು ವಿಧಾನಸಬಾ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next