Advertisement

ಎಚ್‌ಡಿಡಿ ಆಧಿಪತ್ಯಕ್ಕೆ ಚ.ಸ್ವಾಮಿ ಸೆಡ್ಡು

06:30 AM May 07, 2018 | |

ಮಂಡ್ಯ ಜಿಲ್ಲೆಯ ಚುನಾವಣಾ ಕಾಳಗದಲ್ಲಿ ಪ್ರತಿಷ್ಠಿತ ಮತ್ತು ಜಿದ್ದಾಜಿದ್ದಿನ ಯುದ್ಧಭೂಮಿಯಾಗಿ ಪರಿಣಮಿಸಿರುವ ನಾಗಮಂಗಲ ಕ್ಷೇತ್ರದಲ್ಲೀಗ ಅಕ್ಷರಶಃ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Advertisement

ಮಾಜಿ ಪ್ರಧಾನಿ ದೇವೇಗೌಡರ ಮಾಜಿ ಶಿಷ್ಯ ಎನ್‌.ಚೆಲುವರಾಯಸ್ವಾಮಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡ ಬೆನ್ನಹಿಂದೆಯೇ ಅವರ ಸೋಲಿಗೆ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದ್ದು, ಇದರ ನಡುವೆಯೇ ಶಾಸಕ ಚೆಲುವರಾಯಸ್ವಾಮಿ ತಮ್ಮ ಅಸ್ತಿತ್ವದ ಹೋರಾಟ ಮುಂದುವರಿಸಿದ್ದಾರೆ.

ಚೆಲುವರಾಯಸ್ವಾಮಿ ಅವರು 2018ರ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲೂ ಜೆಡಿಎಸ್‌ ವಿರುದ್ಧ ರಣಕಹಳೆ ಮೊಳಗಿಸಿದ್ದಾರಲ್ಲದೆ ಸ್ವಕ್ಷೇತ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಮಾಡು ಇಲ್ಲವೇ ಮಡಿ ಎಂಬ ಹೋರಾಟಕ್ಕೆ ಇಳಿದಿದ್ದಾರೆ.

ಜಿಲ್ಲೆಯಲ್ಲಿಯೇ ನಾಗಮಂಗಲ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ಜೆಡಿಎಸ್‌ ಕುಟುಂಬ ಕಾಂಗ್ರೆಸ್‌ ಒಳಗಿದ್ದ ಭಿನ್ನಮತೀಯ ನಾಯಕರಾದ ಮಾಜಿ ಶಾಸಕ ಎಲ್‌.ಆರ್‌.ಶಿವ ರಾಮೇಗೌಡ ಹಾಗೂ ಕೆ.ಸುರೇಶ್‌ ಗೌಡ ಅವರನ್ನು ಒಗ್ಗೂಡಿಸಿ ಮತ್ತೋರ್ವ ಟಿಕೆಟ್‌ ಆಕಾಂಕ್ಷಿಯಾದ ಡಾ.ಲಕ್ಷ್ಮೀ ಅಶ್ವಿ‌ನ್‌ಗೌಡ ಅವರ ಮಹಿಳಾ ಶಕ್ತಿಯನ್ನು ಕೇಂದ್ರೀಕರಿಸಿ ಎನ್‌.ಚೆಲುವರಾಯ ಸ್ವಾಮಿ ಸೋಲಿಗೆ ಬ್ರಹ್ಮಾಸ್ತ್ರವನ್ನೇ ಹೂಡಲಾಗಿದೆ.

2008ರ ಚುನಾವಣೆಯಲ್ಲಿ ಚೆಲುವರಾಯ ಸ್ವಾಮಿ ಅವರನ್ನು ಪರಾಭವಗೊಳಿಸಿದ್ದ ಕೆ.ಸುರೇಶ್‌ಗೌಡ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದರೂ ಅಘೋಷಿತವಾಗಿ ಇಡೀ ಜಾತ್ಯತೀತ ಜನತಾದಳವೇ ಕಾಂಗ್ರೆಸ್‌ ಅಭ್ಯರ್ಥಿಯನ್ನು ಮಣಿಸಲು ಹರಸಾಹಸ ನಡೆಸುತ್ತಿದೆ. 

Advertisement

ಜೆಡಿಎಸ್‌ ಮತ್ತು ದೇವೇಗೌಡರ ವರ್ಚಸ್ಸಿನ ಮೇಲೆಯೇ ಕೆ.ಸುರೇಶ್‌ಗೌಡ ಚುನಾವಣೆ ಎದುರಿಸುತ್ತಿದ್ದರೆ ಚೆಲುವರಾಯಸ್ವಾಮಿ ಕಾಂಗ್ರೆಸ್‌ನ ಮೂಲ ಮತಗಳನ್ನು ಸಂರಕ್ಷಿಸಿಕೊಂಡು ಜೆಡಿಎಸ್‌ನ ಆಪ್ತ ಕಾರ್ಯಕರ್ತರನ್ನೂ ಕಾಂಗ್ರೆಸ್‌ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.2008ರ ಚುನಾವಣೆಯಲ್ಲಿ ಚೆಲುವರಾಯ ಸ್ವಾಮಿ ಅವರನ್ನು ಸೋಲಿಸಿದ್ದರೆಂಬ ಕಾರಣಕ್ಕಾಗಿಯೇ ಕೆ.ಸುರೇಶ್‌ಗೌಡ ಅವರನ್ನು ಜೆಡಿಎಸ್‌ ವರಿಷ್ಠರು ಚುನಾವಣಾ ರಣರಂಗಕ್ಕೆ ಇಳಿಸಿದ್ದಾರೆ. 

ಪ್ರತಿ ಬಾರಿ ನಾಗಮಂಗಲ ಕ್ಷೇತ್ರದ ಚುನಾವಣೆ ತ್ರಿಕೋನ ದಿಕ್ಕಿಗೆ ಸಾಗುತ್ತಿತ್ತು. ಆದರೆ, ಈ ಬಾರಿ ಜೆಡಿಎಸ್‌ ವರಿಷ್ಠರು ಇಬ್ಬರೂ ಮಾಜಿ ಶಾಸಕರಾದ ಎಲ್‌.ಆರ್‌.ಶಿವರಾಮೇಗೌಡ, ಕೆ.ಸುರೇಶ್‌ಗೌಡ ಅವರನ್ನು ಒಗ್ಗೂಡಿಸಿ ಹೋರಾಟಕ್ಕಿಳಿಸುವ ಪ್ರಯತ್ನ ನಡೆಸಿದ್ದಾರೆ. 

ಕ್ಷೇತ್ರದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಬಿ.ಪಾರ್ಥಸಾರಥಿ ಅವರನ್ನು ಕಣಕ್ಕಿಳಿ ಸಿದ್ದು, ಈ ಹಿಂದಿನಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿರಲಿಲ್ಲ. ಆದರೆ, ಪಕ್ಷಾಂತರಕ್ಕೆ ಹೆಸರಾಗಿರುವ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಅವರು ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಹೆಚ್ಚಿನ ಮತದಾರರು ಅವರನ್ನು ಬೆಂಬಲಿಸಿದ್ದರು.

ಅಭಿವೃದ್ಧಿ ರಾಜ ಕಾರಣ ನನ್ನ ಮೂಲಮಂತ್ರ. ಶಾಸಕನಾಗಿ ಕ್ಷೇತ್ರದಲ್ಲಿ 2500 ಕೋಟಿ ರೂ. ಕಾಮಗಾರಿ ತಂದಿದ್ದೇನೆ. ಚುನಾವಣೆಯಲ್ಲಿ ಮತದಾರರು ಕೈಬಿಡುವುದಿಲ್ಲವೆಂಬ ವಿಶ್ವಾಸವೂ ಇದೆ.
– ಎನ್‌.ಚೆಲುವರಾಯಸ್ವಾಮಿ, ಕಾಂಗ್ರೆಸ್‌ ಅಭ್ಯರ್ಥಿ

ನನ್ನ ಕಾಲ ದಲ್ಲಿ ಅಡಿ ಗಲ್ಲು ಹಾಕಿದ ಕಾಮಗಾರಿಗಳಿಗೆ ಮತ್ತೆ ಅಡಿಗಲ್ಲು ಹಾಕಿಸಿ ಹಾಲಿ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ದಂಧೆ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಶಾಶ್ವತವಾದ ಯಾವುದೇ ಕೆಲಸಗಳನ್ನು ಅವರು ಮಾಡಿಲ್ಲ. 
– ಕೆ.ಸುರೇಶ್‌ಗೌಡ, ಜೆಡಿಎಸ್‌ ಅಭ್ಯರ್ಥಿ

ಮತದಾರರ ಸಂಖ್ಯೆ ಒಟ್ಟು : 2.06ಲಕ್ಷ
ಪುರುಷರು:1,04,280
ಮಹಿಳೆಯರು:1,02,245
ಜಾತಿವಾರು
ಒಕ್ಕಲಿಗರು:65,000
ಕುರುಬರು:24,000
ಅಲ್ಪಸಂಖ್ಯಾಕರು:14,000
ಹಿಂದುಳಿದ ವರ್ಗ:25,000

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next