ಬಂಟ್ವಾಳ: ತಾಲೂಕಿನ ಇರಾ ಮತ್ತು ಚೇಳೂರು ಗ್ರಾಮದ ತಗ್ಗು ಅಗಲಗುರಿ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಯಾಕ್ಟರಿಯೊಂದರಿಂದ ತ್ಯಾಜ್ಯ ಹೊರ ಬಿಡುವುದರಿಂದ ಪರಿಸರಕ್ಕೆ ತೊಂದರೆಯಾಗುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ.
ಕೋಳಿ ತ್ಯಾಜ್ಯದಿಂದ ನಾಯಿಯ ಆಹಾರ ತಯಾರಿಸುವ ಈ ಫ್ಯಾಕ್ಟರಿಯಿಂದ ಹೊರ ಬಿಟ್ಟ ನೀರು ತೋಡಿನ ಮೂಲಕ ಹರಿಯುವ ಜತೆಗೆ ದುರ್ನಾತದಿಂದ ಮನೆಗಳಲ್ಲಿ ಇರಲಾಗದ ಸ್ಥಿತಿ ಇದೆ ಎಂದು ಗ್ರಾಮಸ್ಥರು ರಾಜ್ಯದ ಆರೋಗ್ಯ ಸಚಿವರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು.
ಸೋಮವಾರ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್, ತಾ| ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು, ಸಜೀಪಪಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ವೇತಾ, ಗ್ರಾಮಕರಣಿಕ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಫ್ಯಾಕ್ಟರಿ ಕಾರ್ಯಾಚರಣೆ ನಡೆಸದಂತೆ ಸೂಚನೆ ನೀಡಿದ್ದಾರೆ.
ಮಾಲಕರು ಪ್ಯಾಕ್ಟರಿ ನಡೆಸುವುದಕ್ಕೆ ಬೈಕಂಪಾಡಿಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮತ್ತು ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದಿದ್ದು, ಆದರೆ ತ್ಯಾಜ್ಯ ನೀರನ್ನು ಶುದ್ಧೀಕರಿಸದೆ ಹೊರ ಬಿಡದಂತೆ ನೀಡಿರುವ ಸೂಚನೆ ಪಾಲಿಸಿಲ್ಲ. ಹೀಗಾಗಿ ಗ್ರಾಮಸ್ಥರ ದೂರಿನ ಮೇಲೆ ಸ್ಥಳಕ್ಕೆ ಭೇಟಿ ನೀಡಿದ್ದು, ತ್ಯಾಜ್ಯ ಹೊರ ಬಿಡುವ ಕುರಿತು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಫ್ಯಾಕ್ಟರಿ ತ್ಯಾಜ್ಯದಿಂದ ತೊಂದರೆ ಇದೆಯೇ ಎಂಬ ಕುರಿತು ಸ್ಥಳೀಯ ಗ್ರಾ.ಪಂ. ಆರೋಗ್ಯ ಇಲಾಖೆಯ ಬಳಿ ಸಲಹೆ ಕೇಳಿದ ಹಿನ್ನೆಲೆಯಲ್ಲಿ ಟಿಎಚ್‌ಒ ಡಾ| ದೀಪಾ ಪ್ರಭು ಸ್ಥಳಕ್ಕೆ ಭೇಟಿ ನೀಡಿದ್ದು, ವರದಿಯನ್ನು ಸ್ಥಳೀಯಾಡಳಿತಕ್ಕೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.