Advertisement

ನೀರು-ಮೇವು ಮಿತವಾಗಿ ಬಳಸಿ

04:32 PM May 17, 2019 | Naveen |

ಚಳ್ಳಕೆರೆ: ಕಳೆದ ವಾರವಷ್ಟೇ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬೊಸೇದೇವರಹಟ್ಟಿಯಲ್ಲಿ ನಿತ್ರಾಣದಿಂದ ದೇವರ ಎತ್ತು ಸಾವಿಗೀಡಾಗಿದ್ದು, ಎಚ್ಚೆತ್ತ ಜಿಲ್ಲಾಡಳಿತ ತಾಲೂಕಿನಾದ್ಯಂತ ಒಟ್ಟು ಏಳು ಗೋಶಾಲೆಗಳನ್ನು ಪ್ರಾರಂಭಿಸಿ ಪ್ರತಿನಿತ್ಯ ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ ಎಂದು ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರ್‌ ಹೇಳಿದರು.

Advertisement

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಭೀಕರ ಬರಗಾಲದ ದುಸ್ಥಿತಿ ಇದ್ದು, ಇತ್ತೀಚಿನ ದಿನಗಳಲ್ಲಿ ಜಾನುವಾರುಗಳು ಸಹ ಮೇವಿನ ಸಂಕಷ್ಟ ಎದುರಿಸುತ್ತಿದ್ದು, ಅವುಗಳನ್ನು ರಕ್ಷಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರಸ್ತುತ ತಾಲೂಕಿನಾದ್ಯಂತ ಏಳು ಕಡೆ ಗೋಶಾಲೆಗಳನ್ನು ಆರಂಭಿಸಿದ್ದು, ಗೋಶಾಲೆಗಳಲ್ಲಿರುವ ಎಲ್ಲ ಜಾನುವಾರುಗಳಿಗೂ ಮೇವು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರತಿನಿತ್ಯ ಅಂದಾಜು 8 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಎಲ್ಲಾ ಗೋಶಾಲೆಗಳಲ್ಲಿ ಆಶ್ರಯ ಪಡೆದಿದ್ದು, ಪ್ರತಿನಿತ್ಯ ಸರಾಸರಿ 10 ಟನ್‌ ಮೇವನ್ನು ಜಾನುವಾರುಗಳಿಗೆ ನೀಡಲಾಗುತ್ತಿದೆ. ತಾಲೂಕಿನ ದೊಡ್ಡ ಉಳ್ಳಾರ್ತಿ, ಸಾಣೀಕೆರೆ, ನಾಗಗೊಂಡನಹಳ್ಳಿ, ಎ.ಜಿ. ರಸ್ತೆ, ಹಿರೇಹಳ್ಳಿ, ಮಲ್ಲೂರಹಳ್ಳಿ ಮತ್ತು ಚೌಳೂರು ಗೋಶಾಲೆ ಈಗಾಗಲೇ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಒಟ್ಟು 8 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಗೋಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಮೇವಿನ ಜೊತೆಗೆ ನೀರನ್ನು ಸಹ ಸರಬರಾಜು ಮಾಡಲಾಗುತ್ತಿದೆ. ಪಶುವೈದ್ಯ ಅಧಿಕಾರಿಗಳು ಗೋಶಾಲೆಗೆ ಭೇಟಿ ನೀಡಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದರು.

ಜಾನುವಾರುಗಳಿಗೆ ಅಗತ್ಯವಿರುವಷ್ಟು ಮೇವನ್ನು ನೀಡಿ, ಯಾವುದೇ ಕಾರಣಕ್ಕೂ ಮೇವನ್ನು ಎಲ್ಲಂದರಲ್ಲೇ ಎಸೆಯದೇ ಜೋಪಾನವಾಗಿ ಜಾನುವಾರುಗಳು ತಿನ್ನುವ ರೀತಿಯಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ನೀವು ಎಲ್ಲಿಯೂ ದಂಡವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಸಂಚಾರಿ ಮೇವು ವಿತರಣೆಗೆ ಆದ್ಯತೆ: ಈಗಾಗಲೇ ಏಳು ಕಡೆ ಗೋಶಾಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನೇಕ ಗ್ರಾಮಗಳ ರೈತರು ತಮ್ಮ ಗ್ರಾಮದಲ್ಲೇ ಗೋಶಾಲೆ ನಿರ್ಮಿಸುವಂತೆ ಒತ್ತಾಯ ಹೇರುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಗೋಶಾಲೆ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಂಚಾರಿ ಮೇವು ಬ್ಯಾಂಕ್‌ ಪ್ರಾರಂಭಿಸಿ ಅಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮೇವನ್ನು ವಿತರಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಿದೆ. ಗೋಶಾಲೆಗಳು ಇಲ್ಲದ ಕಡೆ ಸಂಚಾರಿ ಮೇವು ಬ್ಯಾಂಕ್‌ನ ಮೂಲಕ ರೈತರು ಮೇವು ಪಡೆಯಬೇಕು ಎಂದರು.

Advertisement

ಮಿತ ನೀರು ಬಳಕೆಗೆ ಅದ್ಯತೆ ನೀಡಿ: ತಾಲೂಕಿನ ಏಳು ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಕಡೆಗಳಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಿದ್ದು, ಅಲ್ಲಿ ಜಾನುವಾರುಗಳಿಗೆ ನೀರನ್ನು ಕುಡಿಯಲು ವ್ಯವಸ್ಥೆ ಮಾಡಲಾಗಿದೆ. ನೀರು ಸಹ ಅಮೂಲ್ಯವಾಗಿದ್ದು, ಎಲ್ಲೆಡೆ ನೀರಿನ ಹಾಹಾಕಾರ ಇರುವ ಸಂದರ್ಭದಲ್ಲೇ ಜಾನುವಾರುಗಳ ನೀರಿನ ಬವಣೆ ಸಹ ನಿಯಂತ್ರಿಸಲು ಹೆಚ್ಚಿನ ಅದ್ಯತೆ ನೀಡಲಾಗಿದೆ. ಇಲ್ಲಿಯೂ ಸಹ ರೈತರು ತಮ್ಮ ಜಾನುವಾರುಗಳಿಗೆ ನೀರು ಕುಡಿಸಿವ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಬೇಕು. ನೀರನ್ನು ಅಪವ್ಯಯ ಮಾಡದಂತೆ ಜಾಗೃತೆ ವಹಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next