Advertisement

Chelairu: ಅಕ್ರಮ ಮರಳುಗಾರಿಕೆ; ಅಣೆಕಟ್ಟಿನ ಪಿಲ್ಲರುಗಳಲ್ಲಿ ಬಿರುಕು

01:12 PM Dec 09, 2024 | Team Udayavani |

ಚೇಳೈರು: ಹಳೆಯಂಗಡಿ,  ಚೇಳೈರು ಗಡಿ ಭಾಗವಾಗಿರುವ ಗ್ರಾಮ ಪಂಚಾಯತ್‌ ಪ್ರದೇಶದ ನಂದಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಇಲ್ಲಿನ ಗ್ರಾಮವನ್ನು ಸಂಪರ್ಕಿಸುವ ಸೇತುವೆಗೆ ಅಪಾಯವನ್ನು ತಂದೊಡ್ಡುತ್ತಿದೆ. ಅಣೆಕಟ್ಟೆಗೆ ಹಾಕಿದ ಹಲಗೆಗಳನ್ನೂ ಬದಿಗೆ ಸರಿಸಿ ಮರಳುಗಾರಿಕೆ ಮಾಡುಷ್ಟರ ಮಟ್ಟಿಗೆ ಅಕ್ರಮಗಳು ನಡೆಯುತ್ತಿವೆ.

Advertisement

ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಮರಳುಗಾರಿಕೆ ನಡೆಯುತ್ತಿದ್ದು, ಈವರೆಗೆ ಸ್ಪಷ್ಟವಾದ ಯಾವುದೇ ಆದೇಶ ಇರದೇ ಇರುವುದರಿಂದ ಅಕ್ರಮ ಮರಳುಗಾರಿಕೆ ಹಣ ಮಾಡುವ ಸುಲಭದ ದಂಧೆಯಾಗಿದೆ. ಒಂದೆಡೆ ಸರಕಾರದ ಬೊಕ್ಕಸಕ್ಕೆ ರಾಜಸ್ವ ನಷ್ಟವಾದರೆ, ಯಾವುದೇ ಕಟ್ಟು ಪಾಡಿನ ಪರಿವೆಯಿಲ್ಲದೆ ದೋಣಿ ಮೂಲಕ ಮರಳುಗಾರಿಕೆ ಮಾಡುತ್ತಿರುವುದರಿಂದ ಜನಸಂಚಾರದ ಸೇತುವೆಗಳಿಗೂ ಸುರಕ್ಷೆ ಎಂಬುದು ಇಲ್ಲದಂತಾಗಿದೆ.

ಬಾಹ್ಯ ಶಕ್ತಿಗಳನ್ನೊಳಗೊಂಡ ಈ ದಂಧೆ ಸ್ಥಳೀಯರ ನಿದ್ದೆಗೆಡಿಸಿದರೆ, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದರೂ ಮೌನವಹಿಸಿದೆ. ಕಾನೂನು ಪ್ರಕಾರ ಅಣೆಕಟ್ಟಿನ 500 ಮೀಟರ್‌ ದೂರದಿಂದ ಮರಳು ತೆಗೆಯಲು ಅವಕಾಶವಿರುವುದು. ಆದರೆ ಇಲ್ಲಿ ಅಕ್ರಮವಾಗಿ  ಚೇಳೈರು ನಂದಿನಿ ಅಣೆಕಟ್ಟಿನ ಅಡಿಭಾಗದಿಂದ ತುಂಬಾ ಆಳಕ್ಕೆ ಮರಳನ್ನು ದೋಣಿಯಲ್ಲಿ ತೆಗೆಯುವುದರಿಂದ ಅಣೆಕಟ್ಟಿನ ಪಿಲ್ಲರುಗಳು ಬಿರುಕು ಬಿಟ್ಟಿವೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ನವೆಂಬರ್‌ ತಿಂಗಳಲ್ಲಿ ಚೇಳೈರು ಗ್ರಾ.ಪಂ. ವ್ಯಾಪ್ತಿಯ ಎಲ್ಲ ಅಣೆಕಟ್ಟಿನ ಬಾಗಿಲನ್ನು ಹಾಕಬೇಕಾಗಿತ್ತು. ಸರಿಯಾದ ಸಮಯಕ್ಕೆ ಹಾಕದ ಕಾರಣ ಉಪ್ಪು ನೀರಿನ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕೃಷಿಕರಿಗೆ ತುಂಬಾ ಸಮಸ್ಯೆಯಾಗಿದೆ ಹಾಗಾಗಿ ಅಣೆಕಟ್ಟಿನ ಬಾಗಿಲು ಹಾಕುವ ಕೆಲಸ ಸಮಯಕ್ಕೆ ಸರಿಯಾಗಿ ಆಗಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು  ಚೇಳೈರು ಗ್ರಾ.ಪಂ. ಸದಸ್ಯ ಸುಧಾಕರ ಶೆಟ್ಟಿ ಖಂಡಿಗೆ ಆಗ್ರಹಿಸಿದ್ದಾರೆ.

ಸಿಸಿ ಕೆಮರಾ ಇದ್ದರೂ ಮರಳುಗಾರಿಕೆ!
ಮರಳುಗಾರಿಕೆ ನಡೆಯುವ ಜಾಗ ಹಳೆಯಂಗಡಿ ಗ್ರಾಮ ಪಂಚಾಯತ್‌ ಸೇರಿದ್ದರೆ, ಅಣೆಕಟ್ಟು ಇರುವ ಭಾಗ  ಚೇಳೈರು ಗ್ರಾಮ ಪಂಚಾಯತ್‌ಗೆ ಸೇರಿದ್ದಾಗಿದೆ. ಸಿಸಿ ಕೆಮರಾ ಕಾವಲಿನ ನಡೆವೆಯೂ ಮರಳುಗಾರಿಕೆ ಮಾತ್ರ ನಿಂತಿಲ್ಲ.

Advertisement

ರಾತ್ರಿ ಅಣೆಕಟ್ಟಿನ ಬಾಗಿಲು ತೆಗೆದು ಮರಳು ಸಂಗ್ರಹ
ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಂದಿನಿ ನದಿಯ ಅಣೆಕಟ್ಟಿನ ಬಾಗಿಲನ್ನು ಹಾಕಿದರೂ ರಾತ್ರಿ ಹೊತ್ತು ಅಣೆಕಟ್ಟಿನ ಬಾಗಿಲು ತೆಗದು ಮರಳು ತೆಗೆಯುವುದರಿಂದ ಉಪ್ಪು ನೀರಿನ ಸಮಸ್ಯೆ ಉಂಟಾಗಿದೆ. ಹಾಗಾಗಿ ಕುಡಿಯುವ ನೀರಿಗೆ ಮುಂದಿನ ಬೇಸಗೆಗೆ ಬಹಳಷ್ಟು ಸಮಸ್ಯೆ ಎದುರಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಾಹಿತಿ ನೀಡಿದರೆ ಅಕ್ರಮ ತಡೆ
ಮರಳುಗಾರಿಕೆ ನಡೆಯುವ ಬಗ್ಗೆ ನನಗೆ ಗ್ರಾಮಸ್ಥರು ದೂರು ನೀಡಿದ ಕೂಡಲೇ ಸ್ಥಳಕ್ಕೆ ಹೋಗಿ ಮರಳುಗಾರಿಕೆ ನಿಲ್ಲಿಸುತ್ತೇವೆ. ಅದರೆ ತಡ ರಾತ್ರಿ ಮರಳುಗಾರಿಕೆ ನಡೆಯುವ ಕಾರಣ ನಮಗೆ ಮಾಹಿತಿ ದೊರೆಯುವುದಿಲ್ಲ. ಗ್ರಾಮಸ್ಥರು ಸರಿಯಾದ ಸಮಯಕ್ಕೆ ಮಾಹಿತಿ ಮತ್ತು ಸಹಕಾರ ನೀಡಿದಲ್ಲಿ ಮರಳುಗಾರಿಕೆ ನಿಲ್ಲಿಸಬಹುದು.
-ನಿತ್ಯಾನಂದ,  ಚೇಳೈರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

ದೂರು ನೀಡಿದ್ದೇವೆ
ಅಕ್ರಮ ಮರಳುಗಾರಿಕೆ ಬಗ್ಗೆ ಸಂಬಂಧಿ ಸಿದ ಇಲಾಖೆಗೆ ದೂರು ನೀಡಿದ್ದೇವೆ. ಅಣೆಕಟ್ಟಿನ ಅಡಿಭಾಗ ಬಿರುಕು ಬಿಟ್ಟಿರುವ ಬಗ್ಗೆ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಗಮನಕ್ಕೆ ತರಲಾಗುವುದು.
-ಜಯಾನಂದ, ಅಧ್ಯಕ್ಷರು,  ಚೇಳೈರು ಗ್ರಾ.ಪಂ.

-ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next