Advertisement

Chef Chidambara trailer: ಭರವಸೆ ಮೂಡಿಸಿದ ಅನಿರುದ್ಧ್ ಸಿನಿಮಾ

03:15 PM Jun 03, 2024 | Team Udayavani |

“ಶೆಫ್ ಚಿದಂಬರ’ ಹೀಗೊಂದು ಸಿನಿಮಾ ತುಂಬಾ ದಿನಗಳಿಂದ ಸದ್ದು ಮಾಡುತ್ತಲೇ ಇದೆ. ಈಗ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕುತೂಹಲಕಾರಿ ಅಂಶಗಳ ಮೂಲಕ ಟ್ರೇಲರ್‌ ಭರವಸೆ ಮೂಡಿಸಿದೆ. ಆ್ಯಕ್ಷನ್‌, ಸಸ್ಪೆನ್ಸ್‌, ಕಾಮಿಡಿ ಸೇರಿದಂತೆ ಹಲವು ಅಂಶಗಳು ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿವೆ.

Advertisement

ಅನಿರುದ್ಧ್ ಜತಕರ್‌ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ರೂಪ ಡಿ.ಎನ್‌ ನಿರ್ಮಾಣ ಮಾಡಿದ್ದಾರೆ. ಆನಂದರಾಜ್‌ ಎಂ. ನಿರ್ದೇಶಿಸಿರುವ ಈ ಸಿನಿಮಾದ ಟ್ರೇಲರ್‌ ಅನ್ನು ನಟ ರಮೇಶ್‌ ಅರವಿಂದ್‌ ಇತ್ತೀಚೆಗೆ ಬಿಡುಗಡೆ ಮಾಡಿದರು. ಟ್ರೇಲರ್‌ಗೆ ಮೆಚ್ಚುಗೆ ದೊರಕುತ್ತಿದ್ದು, ಇದೇ ಜೂನ್‌ 14 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಐದು ವರ್ಷಗಳ ನಂತರ ಅನಿರುದ್ಧ್ ಅಭಿನಯಿಸಿರುವ ಚಿತ್ರ ತೆರೆಗೆ ಬರುತ್ತಿದೆ.

“ಅನಿರುದ್ಧ್ ನನ್ನ ನಿರ್ದೇಶನದ ರಾಮ ಶ್ಯಾಮ ಭಾಮ ಸೇರಿದಂತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ನಟ. ಈ ಚಿತ್ರದ ಟ್ರೇಲರ್‌ ಸಹ ಚೆನ್ನಾಗಿದೆ. ಡಾರ್ಕ್‌ ಕಾಮಿಡಿ ಜಾನರ್‌ನ ಈ ಚಿತ್ರದ ಟ್ರೇಲರ್‌ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ’ ಎಂದು ಶುಭಕೋರಿದರು ರಮೇಶ್‌ ಅರವಿಂದ್‌

ನಟ ಅನಿರುದ್ಧ್ ಮಾತನಾಡಿ, “ನಿರ್ಮಾಪಕಿ ರೂಪ ಅವರ ಪತಿ ಸರ್ವೋತಮ್‌ ಹಾಗೂ ನಾನು ಬಹಳ ವರ್ಷಗಳ ಸ್ನೇಹಿತರು. ಅವರು ಚಿತ್ರ ಮಾಡೋಣ ಎಂದಾಗ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಆನಂದರಾಜ್‌ ಅವರು ಹೇಳಿದ ಈ ಕಥೆ ಇಷ್ಟವಾಯಿತು. ಕಿಚ್ಚ ಸುದೀಪ್‌ ಟೀಸರ್‌ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದರು. ಈಗ ರಮೇಶ್‌ ಅರವಿಂದ್‌ ಟ್ರೇಲರ್‌ ಬಿಡುಗಡೆ ಮಾಡಿ ಕೊಟ್ಟಿದ್ದಾರೆ’ ಎಂದರು ನಟ ಅನಿರುದ್ಧ್.

ಚಿತ್ರದ ನಾಯಕಿಯರಾದ ನಿಧಿ ಸುಬ್ಬಯ್ಯ ಹಾಗೂ ಲವ್‌ ಮಾಕ್ಟೇಲ್ ಖ್ಯಾತಿಯ ರೆಚೆಲ್‌ ಡೇವಿಡ್‌ ಅವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ರಿತ್ವಿಕ್‌ ಮುರಳಿಧರ್‌, ಛಾಯಾಗ್ರಾಹಕ ಉದಯ್‌ ಲೀಲ, ಸಂಕಲನಕಾರ ವಿಜೇತ್‌ ಚಂದ್ರ ಹಾಗೂ ಸಂಭಾಷಣೆ ಬರೆದಿರುವ ಗಣೇಶ್‌ ಪರಶುರಾಮ್‌ ಸೇರಿದಂತೆ ಮುಂತಾದ ತಂತ್ರಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next