Advertisement

ಅಸಮರ್ಪಕ ತ್ಯಾಜ್ಯ ವಿಲೇವಾರಿಯೇ ಚಿರತೆ ಹಾವಳಿ

12:37 PM Feb 10, 2018 | |

ಮೈಸೂರು: ಅಸಮರ್ಪಕ ಘನ ತ್ಯಾಜ್ಯವಿಲೇವಾರಿ, ಕಸಾಯಿಖಾನೆಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಇತ್ತೀಚೆಗೆ ಜನವಸತಿ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಜನವಸತಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಚಿರತೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸುವ ಸಲುವಾಗಿ ನಗರದ ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಚಿರತೆ-ಮಾನವ ಸಂಘರ್ಷ: ನಿಯಂತ್ರಣ-ನಿರ್ವಹಣೆ ಶೀರ್ಷಿಕೆಯಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು.

ಬೆಟ್ಟದಲ್ಲಿ ಇನ್ನೂ ಇವೆ ಚಿರತೆ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ.ಕರುಣಾಕರ್‌ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಚಿರತೆಗಳ ಸಮಸ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಅನೇಕ ಕ್ರಮಗಳನ್ನು ಅನುಸರಿಸಲಾಗುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಚಾಮುಂಡಿಬೆಟ್ಟದಲ್ಲಿ ಪ್ರಸ್ತುತ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಚಿರತೆಗಳ ಆವಾಸ ಸ್ಥಾನವಾಗಿರುವುದರಿಂದ ಇನ್ನೂ 5-6 ಚಿರತೆಗಳು ಬೆಟ್ಟದಲ್ಲಿವೆ.

ಆದರೆ, ಪ್ರಾಣಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಚಿರತೆಗಳ ಹಾವಳಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ನಗರದ ಒಳಗೆ ಅಥವಾ ಹೊರವಲಯಗಳಲ್ಲಿ ಬಿಸಾಡಲಾಗುವ ಪ್ರಾಣಿತ್ಯಾಜ್ಯಗಳನ್ನು ಸೇವಿಸಲು ಬೀದಿನಾಯಿ, ಹಂದಿಗಳು ಹೆಚ್ಚಾಗಿ ಹೋಗಲಿದ್ದು, ಇವುಗಳನ್ನು ತಿನ್ನುವ ಸಲುವಾಗಿ ಚಿರತೆಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದರು.

ಕಸದಿಂದ ರಸ ವಿಧಾನ ಅವಶ್ಯ: ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜಾnನಗಳ ವಿಶ್ವವಿದ್ಯಾನಿಲಯ(ಕೆವಿಎಎಪ್‌ಎಸ್‌ಯು)ದ ನಿರ್ದೇಶಕ ಡಾ.ಮೊಹಮ್ಮದ್‌ ನದೀಂ ಫೈರೋಜ್‌ ಮಾತನಾಡಿ, ಸಾಮಾನ್ಯವಾಗಿ ಯಾವುದೇ ಕಾಡು ಪ್ರಾಣಿಗಳು ನೀರು, ಆಹಾರ ಹಾಗೂ ಸಂತಾನೋತ್ಪತ್ತಿ ಸಂದರ್ಭದಲ್ಲಿ ಸಂಗಾತಿಯನ್ನು ಹುಡುಕಿಕೊಂಡು ತನ್ನ ಜಾಗದಿಂದ ಬೇರೆಡೆಗೆ ಬರಲಿವೆ.

Advertisement

ಆದರೆ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಉಂಟಾಗಿರುವ ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಚಿರತೆ ಹಾವಳಿ ಹೆಚ್ಚಾಗಿದೆ. ಪ್ರಸ್ತುತ ಸಂದರ್ಭದಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಸಾಕಷ್ಟು ಕ್ರಮಗಳನ್ನು ಅನುಸರಿಸಲಾಗಿದ್ದರೂ, ಅದು ಎಲ್ಲೆಮೀರಿರುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ.

ಕಾಸಾಯಿಖಾನೆಗಳು, ಮಾಂಸ ಮಾರಾಟ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯಗಳನ್ನು ನಗರದ ಹೊರಭಾಗದ ಕೆರೆ, ಖಾಲಿ ಜಾಗಗಳಲ್ಲಿ ಬಿಸಡಲಾಗುತ್ತಿದ್ದು, ಇದರಿಂದ ಈ ಸಮಸ್ಯೆ ದಿನದಿಂದ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಸದಿಂದ ರಸ ಮಾಡುವ ವಿಧಾನಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದು ಪ್ರಾತ್ಯಕ್ಷಿಯ ಮೂಲಕ ತಿಳುವಳಿಕೆ ಮೂಡಿಸಿದರು.

ಕ್ರಿಯಾ ಯೋಜನೆ ರೂಪಿಸಿ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವಿ.ರವಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಚಿರತೆಗಳ ಹಾವಳಿಗೆ ಅರಣ್ಯ ಇಲಾಖೆ ಕಾರಣವೇ? ಎಂಬ ಪ್ರಶ್ನೆ ಹಲವು ವರ್ಷಗಳಿಂದಲೂ ಇದೆ. ಹೀಗಾಗಿ ಇದನ್ನು ತಡೆಯುವಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರ ಜವಾಬ್ದಾರಿ ಏನೆಂಬುದನ್ನು ಚರ್ಚಿಸಿ, ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ.ಕೆ.ಆರ್‌.ರಮೇಶ್‌, ಚಿರತೆಗಳಲ್ಲಿರುವ ವಿಧಗಳು, ಅವುಗಳ ಆಹಾರ ಪದ್ಧತಿ, ಜೀವನ ಕ್ರಮ, ಚಿರತೆಗಳನ್ನು ಸೆರೆಹಿಡಿಯುವ ವಿಧಾನ, ಚಿರತೆಗಳನ್ನು ಸೆರೆಹಿಡಿದ ಬಳಿಕ ಅನುಸರಿಸುವ ವೈದ್ಯಕೀಯ ತಪಾಸಣೆಯ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.  ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಮಲ್ಲಿಗೆ ವೀರೇಶ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭೆಯಲ್ಲಿ ಎಸಿಎಫ್ ಮನೋಜ್‌ ಕುಮಾರ್‌, ಸಿಸಿಎಫ್ಗಳಾದ ಹನುಮಂತಪ್ಪ, ಏಡುಕುಂಡಲ ಸೇರಿದಂತೆ ಮೈಸೂರು ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಿಲ್ಲೆಯಲ್ಲಿವೆ 150ಕ್ಕೂ ಹೆಚ್ಚು ಚಿರತೆ: ಇತ್ತೀಚೆಗೆೆ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಮಧ್ಯಪ್ರದೇಶದಲ್ಲಿ ಹೆಚ್ಚಿನ ಚಿರತೆಗಳಿದ್ದು, 2ನೇ ಸ್ಥಾನದಲ್ಲಿ ಕರ್ನಾಟಕ ಇದೆ. ರಾಜ್ಯದಲ್ಲಿ 1125 ಚಿರತೆಗಳಿದ್ದು, ಮೈಸೂರು ಜಿಲ್ಲೆಯಲ್ಲಿ 150-180 ಹಾಗೂ ಮೈಸೂರು ತಾಲೂಕು ವ್ಯಾಪ್ತಿಯಲ್ಲಿ 40-50 ಚಿರತೆಗಳಿವೆ ಎಂದು ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕ ರವಿಶಂಕರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next