ಪುತ್ತೂರು: ಒಂದು ವಾರ ದಿಂದ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಕರೆತರುವ ಚೀತಾಗಳದ್ದೇ ಸುದ್ದಿ. ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಅಂದೂ ಸಹ ಪ್ರಧಾನಿ ಜನ್ಮದಿನದ ಜತೆಗೆ ಎಲ್ಲೆಲ್ಲೂ ರಾರಾಜಿಸುತ್ತಿರುವುದು ಚೀತಾಗಳೇ. ಅದರ ಮಧ್ಯೆ ಸಂಭ್ರಮದ ಸಂಗತಿಯೆಂದರೆ ಆ ಚೀತಾ ಕರೆ ತಂದ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಿದ್ದರು ಎಂಬುದು !
ಜಂಬೋ ಜೆಟ್ ವಿಮಾನದ ಮೂಲಕ ಎಂಟು ಚೀತಾಗಳನ್ನು ಶನಿವಾರ ಭಾರತಕ್ಕೆ ತರಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಅಭಯಾರಣ್ಯಕ್ಕೆ ಚೀತಾಗಳನ್ನು ಬಿಟ್ಟರು.
ಹೀಗೆ ಚೀತಾಗಳನ್ನು ಕರೆತಂದ ತಂಡದ ಮೂವರು ಭಾರತೀಯರ ಪೈಕಿ ಓರ್ವರು ಪುತ್ತೂರಿನ ಡಾ| ಸನತ್ ಕೃಷ್ಣ ಮುಳಿಯ. ಕೇಂದ್ರ ಸರಕಾರದ ಪರಿಸರ ಇಲಾಖೆಯ ಅಧೀನದ ಹೊಸದಿಲ್ಲಿಯ ನ್ಯಾಶನಲ್ ಜಿಯೋಲಜಿಕಲ್ ಪಾರ್ಕ್‌ನಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ| ಸನತ್ ಕೃಷ್ಣ ಮುಳಿಯ ಪ್ರತಿಷ್ಠಿತ ಮುಳಿಯ ಕುಟುಂಬದ ಸದಸ್ಯರು. ಸ್ವರ್ಣ ಉದ್ಯಮಿಯಾಗಿದ್ದ ದಿ| ಕೇಶವ ಭಟ್ ಮತ್ತು ಉಷಾ ಭಟ್ ಮುಳಿಯ ಅವರ ಪುತ್ರ. ಪುತ್ತೂರಿನ ಹಾರಾಡಿಯಲ್ಲಿ ಮನೆ ಹೊಂದಿರುವವರು.
ಸನತ್ ಅವರು ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪೂರೈಸಿ, ಬೆಂಗಳೂರಿನಲ್ಲಿ ಬಿವಿಎಸ್ ಸಿ-ಎನ್‌ವಿ ಎಸ್‌ಸಿ ಪದವಿ ಪಡೆದವರು. ವನ್ಯಜೀವಿ ಹಾಗೂ ಅರಿವಳಿಕೆ ವಿಭಾಗದಲ್ಲಿ ಉನ್ನತ ಅಧ್ಯಯನ ಮಾಡಿ ಬಳಿಕ ಆಫ್ರಿಕಾದ ಭೂತ್ಸ್ವಾನ್ ದಲ್ಲಿ ಒಂದೂವರೆ ವರ್ಷ ಕರ್ತವ್ಯ ನಿರ್ವಹಿಸಿದರು. ಈ ಮಧ್ಯೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು ಹೊಸದಿಲ್ಲಿಗೆ ವಾಪಾಸಾಗಿ ಸೇವೆಗೆ ಸೇರಿಕೊಂಡರು. ಸನತ್ ಅವರ ಪತ್ನಿ ಪ್ರಿಯಾಂಕಾ ಕೂಡ ವನ್ಯಜೀವಿ ತಜ್ಞೆ.
ಆಫ್ರಿಕಾದಲ್ಲಿ ಕೆಲಸ ನಿರ್ವಹಿಸಿದ ಅನುಭವ
ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸಿದ ಸನತ್ ಅವರ ಅನುಭವ ಈ ಪ್ರಾಜೆಕ್ಟ್ ಚೀತಾ ತಂಡಕ್ಕೆ ಸೇರಲು ಅವಕಾಶ ಒದಗಿಸಿದೆ ಎನ್ನಲಾಗಿದೆ.
“ಪ್ರಾಜೆಕ್ಟ್ ಚೀತಾ’ ಹೆಸರಿನ ಈ ಯೋಜನೆಯಲ್ಲಿ ಎಂಟು ಚೀತಾಗಳಲ್ಲಿ ಐದು ಹೆಣ್ಣು, 2ರಿಂದ 5 ವರ್ಷ ವಯಸ್ಸಿನ ನಡುವೆ ಮತ್ತು ಮೂರು 4.5ರಿಂದ5.5 ವರ್ಷದೊಳಗಿನ ಗಂಡು ಚೀತಾಗಳಿವೆ. ಬೋಯಿಂಗ್ 747-400 ವಿಮಾನ ಶನಿವಾರ ಬೆಳಗ್ಗೆ 7:55ರ ಸುಮಾರಿಗೆ ಗ್ವಾಲಿಯರ್‌ನಲ್ಲಿ ಇಳಿದ ಅನಂತರ ಚೀತಾಗಳನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಚೀತಾ ತರುವ ತಂಡದಲ್ಲಿ ಅಧಿಕಾರಿಗಳು, ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರಿದ್ದರು.