ಚಿಕ್ಕಮಗಳೂರು: ನಗರ ಹೊರವಲಯದ ತೇಗೂರು ಗ್ರಾಮದ ಬಳಿ ಚಿರತೆ ಕಂಡು ಬಂದಿದ್ದು ಗ್ರಾಮಸ್ಥರರಲ್ಲಿ ಭೀತಿ ಮೂಡಿಸಿದೆ. ಚಿರತೆ ರಸ್ತೆ ಬದಿಯಲ್ಲೇ ಓಡಾಡುತ್ತಿರುವ ದೃಶ್ಯವನ್ನು ವಾಹನ ಚಾಲಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೇಗೂರು ಗ್ರಾಮದ ಕೆಎಸ್‌ಆರ್ ಟಿಸಿ ಸಂಸ್ಥೆಯ ವಾಹನ ಚಾಲಕ ತರಬೇತಿ ಕೇಂದ್ರದ ಬಳಿ ಚಿರತೆ ರಾತ್ರಿ ಸಮಯದಲ್ಲಿ ಪ್ರತ್ಯಕ್ಷವಾಗಿದ್ದು, ವಾಹನ ಸವಾರರು ಚಿರತೆಯನ್ನು ಹಿಂಬಾಲಿಸಿ ವಿಡಿಯೋ ಮಾಡಿದ್ದು ತನ್ನ ಹಿಂದೆ ವಾಹನವೊಂದು ಬರುತ್ತಿರುವುದನ್ನು ಗಮನಿಸಿದ ಚಿರತೆ ಪೊದೆ ಸೇರಿ ಕಣ್ಮರೆಯಾಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಗ್ರಾಮದ ಮಂಜುನಾಥ ಅವರ ಮನೆಯಲ್ಲಿದ್ದ ಎರಡು ನಾಯಿಗಳು ಕಣ್ಮರೆಯಾಗಿವೆ. ನಾಯಿಯನ್ನು ಚಿರತೆ ತಿಂದಿರಬಹುದು ಎಂದು ಹೇಳಲಾಗುತ್ತಿದ್ದು, ಚಿರತೆ ಪ್ರತ್ಯಕ್ಷವಾದ ದಿನದಿಂದ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆ ತಿರುಗಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ :ಮುಳ್ಳಯ್ಯಗಿರಿಯಲ್ಲಿ ವಿಶಿಷ್ಟ ಆರ್ಕಿಡ್ ಸಸ್ಯ ಪತ್ತೆ
ಸುತ್ತಮುತ್ತ ಸಾವಿರಾರು ಎಕರೆ ಜಮೀನು ಇದ್ದು ರೈತರು ಜಮೀನುಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಚಿರತೆ ಬಾರದಂತೆ ಜಮೀನುಗಳಲ್ಲಿ ಬೆಂಕಿ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವ ವಿಷಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅ ಧಿಕಾರಿಗಳು ಪಟಾಕಿ ಸಿಡಿಸಿ ಹಿಂದಿರುಗಿದ್ದಾರೆ. ಅರಣ್ಯ ಇಲಾಖೆ ಅಧಿ ಕಾರಿಗಳು ತಕ್ಷಣ ಚಿರತೆಯನ್ನು ಓಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.