Advertisement

ಅಕ್ರಮ ಮರಳುಗಾರಿಕೆ ತಡೆಗೆ ಚೆಕ್‌ಪೋಸ್ಟ್‌: ಎಸ್‌ಪಿ ಲಕ್ಷ್ಮೀಪ್ರಸಾದ್‌

04:25 AM Jan 03, 2019 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಮರಳುಗಾರಿಕೆಯ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಕಾರ್ಯಕ್ರಮ ಹಾಕಿಕೊಳ್ಳ
ಲಾಗುವುದು. ಅನಧಿಕೃತವಾಗಿ ಮರಳು ಸಾಗಾಟಕ್ಕೆ ಯಾವ ರೀತಿಯಲ್ಲಿಯೂ ಅವಕಾಶ ನೀಡುವುದಿಲ್ಲ. ಗಡಿ ಭಾಗಗಳಲ್ಲಿ ಅಗತ್ಯ ಬಿದ್ದರೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್‌ ತಿಳಿಸಿದರು.

Advertisement

ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬುಧವಾರ ಏರ್ಪಡಿಸಿದ್ದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಳ ಮಟ್ಟದಲ್ಲಿ ಕೆಲವು ಪೊಲೀಸ್‌ ಸಿಬಂದಿ ಅಕ್ರಮ ಮರಳು ಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು; ಠಾಣೆಗಳಲ್ಲಿನ ಪೊಲೀಸ್‌ ಸಿಬಂದಿ ಕೊರತೆ ನಿವಾರಣೆಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಪರಸ್ಪರ ಗೌರವ ಇರಲಿ
ರಾಜ್ಯಾದ್ಯಂತ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಜನರು ಮತ್ತು ಪೊಲೀಸರು ಪರಸ್ಪರ ಗೌರವ, ವಿಶ್ವಾಸದಿಂದಿದ್ದರೆ ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಇತರ ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸರ ಕಾರ್ಯಭಾರ ಶೇ. 50ರಷ್ಟು ಕಡಿಮೆಯಾಗುವುದು ಎಂದು ಎಸ್‌ಪಿ ಅಭಿಪ್ರಾಯ ಪಟ್ಟರು. ನಿಕಟಪೂರ್ವ ಎಸ್‌ಪಿ ಡಾ| ರವಿಕಾಂತೇ ಗೌಡರು ಆರಂಭಿಸಿದ ಬೀಟ್‌ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಹೊಸ
ಬೀಟ್‌ ವ್ಯವಸ್ಥೆಯನ್ನು ಪೊಲೀಸರು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆಯೇ ಮತ್ತು ಜನರು ಸ್ಪಂದಿಸುತ್ತಿದ್ದಾರೆಯೇ ಎಂದು ಮೇಲ್ವಿಚಾರಣೆ ನಡೆಸಲಾಗುವುದು ಎಂದರು.

ಠಾಣೆಗೆ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಬರುವ ಜನರ ಸಮಸ್ಯೆಗಳನ್ನು ಮೊದಲು ಪೊಲೀಸರು ಆಲಿಸಿ ಪರಿಹಾರ ಕಂಡುಕೊಳ್ಳಬೇಕು. ಆದರೆ ಬಹಳಷ್ಟು ಠಾಣೆಗಳಲ್ಲಿ ಪೊಲೀಸರಿಗೆ ಜನರ ಸಮಸ್ಯೆ ಆಲಿಸುವ ವ್ಯವಧಾನ ಇರುವುದಿಲ್ಲ. ಸಮಸ್ಯೆಮುಕ್ತವಾಗಿ ಆಲಿಸುವ  ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ ಎಂದರು.

ನಕ್ಸಲ್‌ ಚಟುವಟಿಕೆ ಕ್ಷೀಣ 
ನಕ್ಸಲ್‌ ಸಮಸ್ಯೆ ದ.ಕ. ಜಿಲ್ಲೆಯಲ್ಲಿ ಈಗ ಈ ಹಿಂದಿನಂತೆ ಇಲ್ಲ. ಕಳೆದ ಸೆಪ್ಟಂಬರ್‌ನಲ್ಲಿ ಒಂದು ಪ್ರಕರಣ ದಾಖಲಾಗಿರುವುದನ್ನು ಬಿಟ್ಟರೆ ಆ ಬಳಿಕ ಯಾವುದೇ ಪ್ರಕರಣ ವರದಿಯಾಗಿಲ್ಲ. ತಿಂಗಳ ಹಿಂದೆ ಕೇರಳದಿಂದ ಕರ್ನಾಟಕಕ್ಕೆ ನಕ್ಸಲರು ಪ್ರವೇಶಿಸಿದ್ದಾರೆ ಎಂಬ ವದಂತಿ ಇತ್ತು; ಆದರೆ ಸ್ಪಷ್ಟತೆ ಇರಲಿಲ್ಲ. ಇತ್ತೀಚೆಗೆ ನಕ್ಸಲರ ಚಟುವಟಿಕೆ ಮತ್ತು ಚಲನವಲನ ಕಡಿಮೆಯಾಗಿದ್ದು, ಇದೇ ಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಪ್ರಯತ್ನಿಸಲಾಗುವುದು ಎಂದು ನಕ್ಸಲ್‌ ನಿಗ್ರಹ ಪಡೆಯ ನಿಕಟಪೂರ್ವ ಎಸ್‌ಪಿ ಆಗಿರುವ ಬಿ.ಎಂ. ಲಕ್ಷ್ಮೀಪ್ರಸಾದ್‌ ತಿಳಿಸಿದರು.

Advertisement

ಕಾರ್ಪೊರೇಟ್‌ ರಂಗದಲ್ಲಿ ಜನಸಂಪರ್ಕ ಮತ್ತು ಜನಸೇವೆಗೆ ಅವಕಾಶ ಕಡಿಮೆ. ಹಾಗಾಗಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದರೂ ಸ್ಮರ್ಧಾತ್ಮಕ ಪರೀಕ್ಷೆ ಬರೆದು ಪೊಲೀಸ್‌ ಸೇವೆಯನ್ನು ಆಯ್ಕೆ ಮಾಡಿಕೊಂಡೆ. ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡ ಬಳಿಕ ಸಮಾಜದಲ್ಲಿ ನಡೆಯುತ್ತಿರುವ ಬಹಳಷ್ಟು ಸಂಗತಿಗಳನ್ನು ತಿಳಿಯಲು ತನಗೆ ಸಾಧ್ಯವಾಯಿತು ಎಂದರು.  ಅಡಿಶನಲ್‌ ಎಸ್‌ಪಿ ವಿ.ಜೆ. ಸಜೀತ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಜನರಿಗೆ ಪೊಲೀಸರೆಂದರೆ ಭಯವಿದೆ. ಹಾಗೆಯೇ ಪೊಲೀಸರು ಕೂಡ ಜನರಿಂದ ಸ್ವಲ್ಪ ದೂರವೇ ಇದ್ದಾರೆ. ಈ ಅಂತರ ಕಡಿಮೆಯಾಗಿ ಸಂಪರ್ಕ ಜಾಸ್ತಿಯಾದರೆ ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಅರ್ಧಾಂಶದಷ್ಟು ಇತ್ಯರ್ಥವಾದಂತೆ.
ಬಿ.ಎಂ. ಲಕ್ಷ್ಮೀಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next