Advertisement

ಅಕ್ರಮ ಮರಳು ತಡೆಗೆ ಚೆಕ್‌ಪೋಸ್ಟ್‌

10:55 AM Dec 09, 2018 | |

ಕಲಬುರಗಿ: ನಗರಕ್ಕೆ ದೇವದುರ್ಗ, ಶಹಾಪುರ, ಜೇವರ್ಗಿಗಳಿಂದ ಆಗಮಿಸುವ ಅನಧಿಕೃತ ಮರಳನ್ನು ತಡೆಯಲು ಮೂರು ದಿನದೊಳಗಾಗಿ ಕಟ್ಟಿಸಂಗಾವಿ ಹತ್ತಿರ ಚೆಕ್‌ಪೋಸ್ಟ್‌ ಸ್ಥಾಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳಿನ ದಾಸ್ತಾನಿನ ವಿವರ ಪಡೆದು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದರು.

Advertisement

ಲೋಕೋಪಯೋಗಿ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್‌ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ಸಾಗಾಣಿಕೆ ಮಾಡುವಾಗ ಸೀಜ್‌ ಮಾಡಿರುವ ಮರಳಿನ ಮಾಹಿತಿ ಸಂಗ್ರಹಿಸಿ ಅದನ್ನು ಸರ್ಕಾರಿ ಕೆಲಸಗಳಿಗೆ ಬಳಿಸಿಕೊಳ್ಳಬೇಕು. ಮರಳು ಸಿಗುತ್ತಿಲ್ಲ ಎಂದು ಯಾವುದೇ ಸರ್ಕಾರಿ ಕಾಮಗಾರಿಗಳು ನಿಲ್ಲಬಾರದು ಎಂದರು.

ಪೊಲೀಸ್‌ ಹಾಗೂ ತಹಶೀಲ್ದಾರ್‌ರು ಅಕ್ರಮವಾಗಿ ಮರಳು ಸಾಗಿಸುವ ವಾಹನಗಳ ಮಾಹಿತಿಯನ್ನು ಸಾರಿಗೆ ಇಲಾಖೆಗೆ ನೀಡಿದಾಗ ವಾಹನಗಳ ರಹದಾರಿ ರದ್ದುಗೊಳಿಸಿ ಜಪ್ತಿ ಮಾಡಬೇಕು. ಮುಂದಿನ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಅನಧಿಕೃತವಾಗಿ ಮರಳು ಸಾಗಾಣಿಕೆಯಲ್ಲಿ ತೊಡಗಿರುವ ವಾಹನಗಳ ಮಾಹಿತಿ ಪಡೆದು ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಚಿತ್ತಾಪುರ ತಾಲೂಕಿನ ಕಾಟಂದೇವರಹಳ್ಳಿಯಲ್ಲಿ ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡುವ ವಾಹನಗಳ ಹಾಗೂ ವಾಹನದ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದ ಸಚಿವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅವರಿಗೆ ನೋಟಿಸ್‌ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು. ಅಧಿಕೃತವಾಗಿ ಮರಳು ಸಾಗಾಣಿಕೆ ಮಾಡುವವರಿಗೆ ಯಾವುದೇ ತರಹದ ತೊಂದರೆ ನೀಡಬಾರದು. 

ಪೋಲೀಸ್‌ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜೊತೆಗೂಡಿ ಅನಧಿಕೃತ ಮರಳು ಸಾಗಾಣಿಕೆ ತಡೆಯಬೇಕು. ಅನಧಿಕೃತ ಮರಳು ಸಾಗಾಟ ತಡೆಯಲು ಎಲ್ಲ ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸಬೇಕು ಎಂದು ಎಚ್ಚರಿಸಿದರು.

Advertisement

ಕಟ್ಟಿಸಂಗಾವಿ ಹತ್ತಿರ ಸ್ಥಾಪಿಸಲಾಗುವ ಮರಳು ಸಾಗಾಟ ವಾಹನ ತಪಾಸಣಾ ಕೇಂದ್ರದಲ್ಲಿ 8 ಗಂಟೆಯ ಸರದಿ ಮೇಲೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯಕ್ಕೆ ನೇಮಿಸಲಾಗುವುದು. ತಂತ್ರಜ್ಞಾನ ಬಳಸಿಕೊಂಡು ಅಧಿಕೃತ ಮತ್ತು ಅನಧಿಕೃತ ವಾಹನಗಳ ಗುರುತು ಹಚ್ಚಲಾಗುವುದು. ಜಿಲ್ಲೆಯ ಮರಳು ನಿಕ್ಷೇಪಗಳ ಹರಾಜು ಮಡಲಾಗುತ್ತಿದ್ದು, ಕೆಲವರು ಹರಾಜಿನಲ್ಲಿ ಭಾಗವಹಿಸಿ ಅಸಹಜ ದರಗಳನ್ನು ನಮೂದಿಸುತ್ತಿದ್ದಾರೆ ಎಂದರು.

ಮರಳು ನಿಕ್ಷೇಪಗಳು ಹರಾಜಾದ ನಂತರ ಮರಳಿನ ತೊಂದರೆ ನಿವಾರಣೆ ಆಗುತ್ತದೆ. ಮರಳು ಸಾಗಾಣಿಕೆ ಮಾಡುವ ಕೆಲವು ವ್ಯಕ್ತಿಗಳು ಸಂಪರ್ಕಿಸಿ ಮರಳನ್ನು ನಗರದಲ್ಲಿ ಸಂಗ್ರಹಿಸಿ ಅಲ್ಲಿಂದ ಸಾರ್ವಜನಿಕರಿಗೆ ಪೂರೈಸುತ್ತೇವೆ ಎಂದು ಮನವಿ ಸಲ್ಲಿಸಿದ್ದಾರೆ. ಈ ಕುರಿತು ವಿಚಾರಣೆ ಕೈಗೊಂಡು ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸೇಡಂ ಸಹಾಯಕ ಆಯುಕ್ತೆ ಡಾ| ಸುಶೀಲ ಬಿ., ಸಹಾಯಕ ಆಯುಕ್ತ ರಾಚಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next