ಬೆಂಗಳೂರು: ಬಹು ನಿರೀಕ್ಷಿತ ಎಲೆಕ್ಟ್ರಿಕ್ ಬಸ್‌ಗಳ ಪರೀಕ್ಷಾರ್ಥ ಸಂಚಾರಕ್ಕೆ ಗುರುವಾರ ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ದೊರಕಿದ್ದು, ಈ ಮೂಲಕ ಕೊನೆಗೂ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯುವ ಕಾಲ ಸನ್ನಿಹಿತವಾಗಿದೆ.
ಹಿರಿಯ ನಾಗರಿಕರಿಗೆ ವ್ಹೀಲ್‌ಚೇರ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್, ಯುಎಸ್‌ಬಿ ಚಾರ್ಜಿಂಗ್ ಅವಕಾಶದಂತಹ ಹೈಟೆಕ್ ಸೌಲಭ್ಯಗಳು ಹಾಗೂ ತುರ್ತು ಅಲಾರಂ, ನಿಲುಗಡೆ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗಾಜು ಒಡೆಯುವ ಸುತ್ತಿಗೆಗಳು, ತುರ್ತು ನಿರ್ಗಮನಕ್ಕೆ ಅವಕಾಶ ಸೇರಿದಂತೆ ಎಲ್ಲ ಸುರಕ್ಷತಾ ವ್ಯವಸ್ಥೆಗಳನ್ನು ಒಳ ಗೊಂಡ ಅತ್ಯಾಧುನಿಕ ಬಸ್‌ನ ಪರೀಕ್ಷಾರ್ಥ ಸಂಚಾರಕ್ಕೆ ವಿಧಾನ ಸೌಧ ಮುಂಭಾಗದಲ್ಲಿ ಚಾಲನೆ ದೊರೆಯಿತು.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಬಸ್‌ಗೆ ಹಸುರು ನಿಶಾನೆ ತೋರಿಸಿದರು. ಇದಕ್ಕೂ ಮುನ್ನ ಶಾಂತಿನಗರದ ಬಿಎಂಟಿಸಿ ನಿಲ್ದಾಣದಿಂದ ವಿಧಾನಸೌಧದ ತನಕ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡಿಕೊಂಡು ಬಂದ ಸಚಿವರು, ಬಸ್‌ನ ಕಾರ್ಯಕ್ಷಮತೆಯನ್ನು ಖುದ್ದು ಪರಿಶೀಲಿಸಿದರು.
ಬ್ಯಾಟರಿ ತಂತ್ರಜ್ಞಾನದ ಹೊರತಾಗಿ ಬಸ್ ಸಂಪೂರ್ಣ ದೇಶೀಯವಾಗಿ ನಿರ್ಮಿತವಾಗಿದೆ. ಏರ್ ಸಸ್ಪೆನÒನ್, ಟ್ರ್ಯಾಕ್ಷನ್ ಬ್ಯಾಟರಿಯ ಕೂಲೆಂಟ್ ಮೆಕಾನಿಸಂ ಹೊಂದಿದೆ. ಇದು ಬ್ಯಾಟರಿ ಉಷ್ಣಾಂಶ ನಿಯಂತ್ರಿಸುವ ಮೂಲಕ ಹೆಚ್ಚಿನ ಮೈಲೇಜ್‌ಗೆ ಸಹಕಾರಿ ಆಗಲಿದೆ. ಪ್ರತಿ ಕಿ.ಮೀ.ಗೆ 1.2ರಿಂದ 1.4 ಕಿ.ವಾ. ವಿದ್ಯುತ್ ಬಳಕೆಯಾಗಲಿದೆ. ಇಡೀ ಬ್ಯಾಟರಿ ಚಾರ್ಜಿಂಗ್‌ಗೆ 2ರಿಂದ 3 ಗಂಟೆ ಅವಧಿ ಸಾಕಾಗಲಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.
ಒಲೆಕ್ಟ್ರಾ ಕಂಪೆನಿಯ ಎಲೆಕ್ಟ್ರಿಕ್ ಬಸ್‌ಗಳು ಸದ್ಯ ಹೈದರಾಬಾದ್, ಪುಣೆ-ಮುಂಬಯಿ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿವೆ ಎಂದು ಎಂದು ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ತಿಳಿಸಿದೆ.
ಈ ವೇಳೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಕೇಂದ್ರ ಸರಕಾರದ ಫೇಮ…-2 ಯೋಜನೆ ಅಡಿಯಲ್ಲಿ ಪ್ರತಿ ಬಸ್ಸಿಗೆ ನೀಡುವ 55 ಲಕ್ಷ ರೂ. ಮತ್ತು ರಾಜ್ಯ ಸರಕಾರ ನೀಡುವ 33 ಲಕ್ಷ ರೂ. ನೆರವು ಒಟ್ಟುಗೂಡಿಸಿ ಪ್ರತಿ ಬಸ್ಸಿಗೆ 88 ಲಕ್ಷ ರೂ. ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ಹಂತ ಹಂತವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸವದಿ ತಿಳಿಸಿದರು.