Advertisement

ಮತಪೆಟ್ಟಿಗೆಗಳ ಸಂಗ್ರಹ-ಮತ ಎಣಿಕೆ ಕೊಠಡಿ ಪರಿಶೀಲನೆ

05:30 PM Apr 16, 2019 | Team Udayavani |
ಹಾವೇರಿ: ಹಾವೇರಿ ಲೋಕಸಭೆ ಕ್ಷೇತ್ರದ ಚುನಾವಣೆಯ ಮತಪೆಟ್ಟಿಗೆಗಳ ಸಂಗ್ರಹ ಹಾಗೂ ಮತ ಎಣಿಕೆಗಾಗಿ ಸಿದ್ಧಪಡಿಸಿರುವ ಕೊಠಡಿಗಳನ್ನು ಕೇಂದ್ರ ಚುನಾವಣಾ ಆಯೋಗದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತಗೊಂಡಿರುವ ವೀಕ್ಷಕರ ತಂಡ ಪರಿಶೀಲನೆ ನಡೆಸಿತು.
ದೇವಗಿರಿಯಲ್ಲಿರುವ ಸರ್ಕಾರಿ ಎಂಜನಿಯರಿಂಗ್‌ ಕಾಲೇಜಿಗೆ ರವಿವಾರ ಭೇಟಿ ನೀಡಿದ ಕೇಂದ್ರ ಸಾಮಾನ್ಯ ವೀಕ್ಷಕರಾದ ಐಎಎಸ್‌ ಹಿರಿಯ ಅಧಿಕಾರಿ ಡಾ| ಅಖ್ತರ್‌ ರಿಯಾಜ್‌, ವೆಚ್ಚ ವೀಕ್ಷಕರಾದ ಐಆರ್‌ಎಸ್‌ ಅಧಿಕಾರಿ ಹಸನ್‌ ಅಹ್ಮದ್‌ ಹಾಗೂ ಪೊಲೀಸ್‌ ವೀಕ್ಷಕರಾದ ಹಿರಿಯ ಐಪಿಎಸ್‌ ಅಧಿಕಾರಿ ಸಿದ್ಧಾರ್ಥ ಎಂ. ನಾರವಾನೆ ಭೇಟಿ ನೀಡಿ ಪರಿಶೀಲಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳು ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದ್ದು, ಮತದಾನದ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಇವಿಎಂ,
ವಿವಿಪ್ಯಾಟ್‌ಗಳನ್ನು ಮತ ಎಣಿಕೆ ಕೇಂದ್ರ ದೇವಗಿರಿ ಎಂಜನಿಯರಿಂಗ್‌ ಕಾಲೇಜಿಗೆ ತಂದು ದಾಸ್ತಾನು ಮಾಡಲಾಗುವುದು.
ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಪ್ರತ್ಯೇಕ ದಾಸ್ತಾನು ಕೊಠಡಿ ಹಾಗೂ ಪ್ರತ್ಯೇಕವಾಗಿ ಎಣಿಕೆ ಕೊಠಡಿಯನ್ನು ಸಿದ್ಧಪಡಿಸಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಗರಿಷ್ಠ ಭದ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ.
ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಕೊಠಡಿಯಲ್ಲಿ ಎಣಿಕೆಗಾಗಿ 14 ಟೆಬಲ್‌ಗ‌ಳನ್ನು ಅಳವಡಿಸಲಾಗುವುದು. ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜಂಟರುಗಳಿಗೆ ಎಣಿಕೆ ಕೇಂದ್ರದ ಪ್ರವೇಶಕ್ಕೆ ಪ್ರತ್ಯೇಕವಾದ ಪ್ರವೇಶ ವ್ಯವಸ್ಥೆ ಹಾಗೂ ವಿವಿಧ ಸಿದ್ಧತೆಗಳ ಕುರಿತಂತೆ ಜಿಲ್ಲಾ ಚುನಾವಣಾ ಧಿಕಾರಿಗಳಾದ ಜಿಲ್ಲಾ ಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಸಹಾಯಕ ಚುನಾವಣಾಧಿಕಾರಿ ಗೋವಿಂದರೆಡ್ಡಿ ವೀಕ್ಷಕರಿಗೆ ವಿವರಿಸಿದರು. ಮತಪೆಟ್ಟಿಗೆಗಳ ದಾಸ್ತಾನು ಕೊಠಡಿಗಳಿಗೆ ಗರಿಷ್ಠ ಸುರಕ್ಷತಾ ಕ್ರಮಗಳು ಹಾಗೂ ಭದ್ರತೆಯನ್ನು ಒದಗಿಸಲು ವೀಕ್ಷಕರು ಸಲಹೆ ನೀಡಿದರು.
ಮತಪೆಟ್ಟಿಗೆ ದಾಸ್ತಾನು ಕೊಠಡಿಯ ದ್ವಾರ ಹಾಗೂ ಕೊಠಡಿಗಳ ಹಿಂಬದಿಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ಬೆಳಕಿನ ವ್ಯವಸ್ಥೆ ಹಾಗೂ ಕಿಟಕಿ ಮತ್ತು ಬಾಗಿಲುಗಳನ್ನು ಭದ್ರಪಡಿಸುವುದು, ಕಟ್ಟಡದ ಸುತ್ತಲೂ ಗರಿಷ್ಠ ಪೊಲೀಸ್‌ ಭದ್ರತೆ ಕಲ್ಪಿಸುವ ಕುರಿತಂತೆ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ, ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಅಪರ ಜಿಲ್ಲಾಧಿ ಕಾರಿ ಗೋವಿಂದರೆಡ್ಡಿ, ಸರ್ಕಾರಿ ಎಂಜನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಹಾಗೂ ಇತರ ಅಧಿಕಾರಿಗಳು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next