Advertisement

ಪ್ರಧಾನಿ ಓಡಾಡಿದ ರಸ್ತೆ ಗುಣಮಟ್ಟ ಪರಿಶೀಲಿಸಿ

01:40 PM Oct 11, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಿದಾಗ ಮಾಡಲಾಗಿದ್ದ ರಸ್ತೆ ದುರಸ್ತಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಂತೆ ರಾಜ್ಯ ಸರ್ಕಾರವು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿ ದೆ. ಅದರ ಜತೆಗೆ ಕಲಂ 4ಜಿ ಅಡಿಯಲ್ಲಿ ಕಾಮಗಾರಿ ಮೊತ್ತ ಬಿಡುಗಡೆ ಮಾಡುವಂತೆಯೂ ತಿಳಿಸಿದೆ.

Advertisement

ವಿವಿಧ ಕಾಮಗಾರಿಗಳ ಅನುಷ್ಠಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ಜೂನ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ನಗರದ 14 ಕಿ.ಮೀ. ಉದ್ದದ ರಸ್ತೆಯನ್ನು ದುರಸ್ತಿ ಮಾಡಿ ಮರು ಡಾಂಬರೀಕರಣ ಮಾಡಲಾಗಿತ್ತು. ಅದರಲ್ಲಿ ಕೊಮ್ಮಘಟ್ಟ ವ್ಯಾಪ್ತಿಯಲ್ಲಿ ಮಾಡಲಾಗಿದ್ದ ದುರಸ್ತಿ ಕಾಮಗಾರಿ ಪ್ರಧಾನಿ ನಗರಕ್ಕೆ ಬಂದು ಹೋದ ಮರುದಿನವೇ ಕಿತ್ತು ಹೋಗಿ ಕಳಪೆ ಕಾಮಗಾರಿ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆ ಕಾಮಗಾರಿಗೆ ಸಂಬಂಧಿಸಿದಂತೆ ಗುಣಮಟ್ಟ ಪರಿಶೀಲನೆಗೆ ರಾಜ್ಯ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದೆ.

14 ಕಿ.ಮೀ.ನಲ್ಲಿ 7 ಕಿ.ಮೀ.ಗಷ್ಟೇ ಬಿಲ್‌ ಪಾವತಿ: ಮೋದಿ ನಗರಕ್ಕಾಗಮಿಸಿದ ಸಂದರ್ಭದಲ್ಲಿ 23.5 ಕೋಟಿ ರೂ. ವೆಚ್ಚದಲ್ಲಿ 14 ಕಿ.ಮೀ. ಉದ್ದದ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಬೆಂಗಳೂರು ವಿವಿ ರಸ್ತೆ, ತುಮಕೂರು ರಸ್ತೆ ಹಾಗೂ ಕೊಮ್ಮಘಟ್ಟ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಇದರಲ್ಲಿ ಕೊಮ್ಮಘಟ್ಟ ವ್ಯಾಪ್ತಿಯ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿತ್ತು. ಇದೀಗ ಅದೇ ರಸ್ತೆಯ ಕಾಮಗಾರಿಗೆ 4ಜಿ ಅಡಿಯಲ್ಲಿ ವಿನಾಯಿತಿ ಪಡೆದು ಬಿಲ್‌ ಪಾವತಿಸುವಂತೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ. ಅದು ಕೂಡ ಅಮೃತ ನಗರೋತ್ಥಾನ ಅನುದಾನದಲ್ಲಿ ಮುಖ್ಯ ಮಂತ್ರಿಗಳ ವಿವೇಚನಾ ಕಾಮಗಾರಿಗಾಗಿ ಮೀಸಲಿ ಟ್ಟಿರುವ 40 ಕೋಟಿ ರೂ. ಅನುದಾನದಲ್ಲಿ 11.5 ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸುವಂತೆ ಸೂಚಿಸಲಾಗಿದೆ.

ಗುಂಡಿ ಬಿದ್ದ ರಸ್ತೆಗೆ 1 ಕೋಟಿ ರೂ. ನಿಗದಿ : ಕೊಮ್ಮಘಟ್ಟ ಮುಖ್ಯರಸ್ತೆ ವ್ಯಾಪ್ತಿಯಲ್ಲಿ 8 ಕಡೆ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗಿತ್ತು. ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕೆಂಗೇರಿ ಹೊರವರ್ತುಲ ರಸ್ತೆವರೆಗಿನ ಮರಿಯಪ್ಪನಪಾಳ್ಯ ರಸ್ತೆಯಲ್ಲಿ ಮಾಡಲಾಗಿದ್ದ ಡಾಂಬರೀಕರಣ ಒಂದೇ ದಿನಕ್ಕೆ ಕಿತ್ತು ಬಂದಿತ್ತು. ಹೀಗಿದ್ದರೂ, ಆ ರಸ್ತೆಗೆ 1 ಕೋಟಿ ರೂ. ಬಿಲ್‌ ಮೊತ್ತ ನಿಗದಿ ಮಾಡಲಾಗಿದೆ. ಆ ಮೊತ್ತವನ್ನು ಪಾವತಿಸುವಂತೆ ನಗರಾಭಿವೃದ್ಧಿ ಇಲಾಖೆ ತನ್ನ ಆದೇಶದಲ್ಲಿ ಉಲ್ಲೇಖೀಸಿದೆ.

ಗುಣಮಟ್ಟ ತಪಾಸಣೆ ನಡೆಸಿ, ವರದಿ ಸಿದ್ಧಪಡಿಸಿ : ಕಾಮಗಾರಿ ನಡೆದು 4 ತಿಂಗಳಾಗುತ್ತಿದ್ದು, ಕಾಮಗಾರಿ ನಡೆದ ಎರಡೇ ದಿನದಲ್ಲಿ ರಸ್ತೆ ಕಿತ್ತು ಬಂದು ಹಾಳಾದಾಗ ಯಾವುದೇ ಕ್ರಮ ಕೈಗೊಳ್ಳದ ನಗರಾಭಿವೃದ್ಧಿ ಇಲಾಖೆ ಇದೀಗ ಬಿಲ್‌ ಪಾವತಿ ವೇಳೆ ರಸ್ತೆ ಗುಣಮಟ್ಟ ಪರಿಶೀಲಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ. ಪ್ರಮುಖವಾಗಿ ಬಿಲ್‌ ಪಾವತಿ ಮಾಡಲಾಗುತ್ತಿರುವ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂಬುದನ್ನು ಖುದ್ದು ಮುಖ್ಯ ಆಯುಕ್ತರು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ. ಜತೆಗೆ ಸಂಬಂಧಪಟ್ಟ ಮುಖ್ಯ ಎಂಜಿನಿಯರ್‌ರಿಂದ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ಹಾಗೆಯೇ ಪ್ರತಿಷ್ಠಿತ ಸಂಸ್ಥೆಯಿಂದ ರಸ್ತೆ ದುರಸ್ತಿ ಕಾಮಗಾರಿಯ ಗುಣಮಟ್ಟ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಿ, ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ಆದೇಶಿಸಲಾಗಿದೆ.

Advertisement

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next