Advertisement

ಪಾಲಿಕೆ “ವಿಸರ್ಜಿಸುವ’ಬಗ್ಗೆ ಪರಿಶೀಲಿಸಿ!

12:29 AM Oct 16, 2019 | Team Udayavani |

ಬೆಂಗಳೂರು: ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ವಿಚಾರದಲ್ಲಿ ನಿರಂತರವಾಗಿ ವಿಫ‌ಲವಾಗಿರುವ ಮತ್ತು ವ್ಯಾಪಕ ಪ್ರಮಾಣದಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಬಿಬಿಎಂಪಿಯನ್ನು “ವಿಸರ್ಜನೆ’ ಮಾಡುವ ಕಾನೂನು ಕ್ರಮದ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ನಿಯಮಗಳು-2000 ಮತ್ತು 2016, ನಿರ್ಮಾಣ ಮತ್ತು ತೆರವು ನಿಯಮಗಳು-2016, ಮಾಲಿನ್ಯ ತಡೆ ನಿಯಮಗಳು-1986 ಸೇರಿದಂತೆ ಇತರ ಕಾಯ್ದೆ ಮತ್ತು ಕಾನೂನು ನಿಯಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸತತವಾಗಿ ವಿಫ‌ಲವಾಗಿರುವುದರ ಜೊತೆಗೆ ಕಾನೂನುದತ್ತ ಅಧಿಕಾರ ಚಲಾಯಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ “ಕರ್ನಾಟಕ ಮುನ್ಸಿಪಲ್‌ ಕಾಯ್ದೆ-1976ರ ಸೆಕ್ಷನ್‌ 99(1) ಪ್ರಕಾರ ಪಾಲಿಕೆಯನ್ನು ವಿಸರ್ಜನೆ ಮಾಡುವ ಕಾನೂನು ಅಧಿಕಾರ ರಾಜ್ಯ ಸರ್ಕಾರಕ್ಕಿದೆ.

Advertisement

ಈ ಕುರಿತು ಪರಾಮರ್ಶೆ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆಗೆ ಸಂಬಂಧಿಸಿದಂತೆ 2013ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೆಲವು ಮಹತ್ವದ ನಿರ್ದೇಶನಗಳನ್ನು ನೀಡಿ, ಮಂಗಳವಾರ ವಿಸ್ತೃತ ಆದೇಶ ಮಾಡಿದೆ.

ಅಲ್ಲದೇ “ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ನಿಯಮಗಳು-2016′ ಜಾರಿಗೆ ತರಲು ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಡಿ. 16ರೊಳಗೆ ಸಮಗ್ರ ವರದಿ ನೀಡಬೇಕು. ಆ ವರದಿಯನ್ನು ಆಧರಿಸಿ “ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡುವುದನ್ನು ನಿರ್ಬಂಧಿಸುವಂತಹ’ ಕಠಿಣ ಆದೇಶಗಳನ್ನು ಮಾಡುವ ಬಗ್ಗೆ ನ್ಯಾಯಾಲಯ ಪರಿಶೀಲಿಸಲಿದೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಿರುವ ಹೈಕೋರ್ಟ್‌, ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಬಿಬಿಎಂಪಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಸಂಪೂರ್ಣ ಸ್ವತಂತ್ರವಾಗಿದ್ದು, ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ, ಕಾನೂನು ಕ್ರಮ ಜರುಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಅಡ್ಡಿ ಆಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಘನತ್ಯಾಜ್ಯ ವಿಲೇವಾರಿ ನಿರ್ವಹಣೆಯಲ್ಲಿ ಬಿಬಿಎಂಪಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಈ ಮೂಲಕ. ಸಂವಿಧಾನದ ಕಲಂ 21ರ ಮಾಲಿನ್ಯ ರಹಿತ ಶುದ್ಧ ಪರಿಸರ ಹೊಂದುವ ನಾಗರೀಕರ ಮೂಲಭೂತ ಹಕ್ಕನ್ನು ಬಿಬಿಎಂಪಿ ಕಸಿದುಕೊಂಡಿದೆ. ನಗರದಲ್ಲಿ ಪ್ರತಿ ದಿಮ 5,700 ಟನ್‌ ಘನತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಆ ಪೈಕಿ 4,500 ಟನ್‌ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಮತ್ತು ಮನುಷ್ಯರಿಗೆ ಹಾನಿಕಾರಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಜತೆಗೆ ನಗರದಲ್ಲಿ ಪ್ರತಿ ದಿನ 1,500 ಟನ್‌ ನಿರ್ಮಾಣ ಮತ್ತು ತೆರವು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರ ವಿಲೇವಾರಿಗೆ ಯಾವುದೇ ವ್ಯವಸ್ಥೆ ಇಲ್ಲ. ಅದು ಎಲ್ಲಿಗೆ ಹೋಗುತ್ತಿದೆ ಅನ್ನುವುದು ಗೊತ್ತಿಲ್ಲ. ಎರಡು ತಿಂಗಳಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ನ್ಯಾಯಾಲಯ ಕಠಿಣ ಆದೇಶಗಳನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಬೆಲ್ಲಹಳ್ಳಿ ಕ್ವಾರಿಯಲ್ಲಿ ಯಾವುದೇ ರೀತಿ ಸಂಸ್ಕರಣೆ ಮಾಡಿ ಘನತ್ಯಾಜ್ಯ ಸುರಿಯಲಾಗುತ್ತಿದೆ. ಪಾಲಿಕೆ ಹೇಳಿರುವಂತೆ ಈ ಸೆಪ್ಟಂಬರ್‌ ಅಂತ್ಯಕ್ಕೆ ಈ ಜಾಗದಲ್ಲಿ 18.99 ಲಕ್ಷ ಟನ್‌ ಘನತ್ಯಾಜ್ಯ ಹಾಕಲಾಗಿದೆ. ಈಗ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದುಕೊಳ್ಳದೇ ಪಾಲಿಕೆ ಮತ್ತೂಂದು ಕ್ವಾರಿ ಪ್ರದೇಶ ಗುರುತಿಸಿದೆ. ವಿವಿಧ ವರದಿಗಳು ಮತ್ತು ಅರ್ಜಿದಾರರ ಹೇಳಿಕೆ ಗಮನಿಸಿದರೆ ಈ ಜಾಗದ ಸುತ್ತ ಜನವಸತಿ ಪ್ರದೇಶವಿದೆ. ಈ ವಿಚಾರದಲ್ಲಿ ಕಾನೂನು ಉಲ್ಲಂಘನೆಯಾದರೆ ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾಯಪೀಠ ಕಟುವಾಗಿ ಹೇಳಿದೆ. ಈ ಬಗ್ಗೆ ಡಿ.16ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿದೇರ್ಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು.

Advertisement

ತ್ಯಾಜ್ಯದಿಂದ ನಗರಕ್ಕೆ ದುಸ್ಥಿತಿ: ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿಯ ಘನತ್ಯಾಜ್ಯ, ಹಳೆ ಕಟ್ಟಡಗಳ ನೆಲಸಮಗೊಳಿಸುವುದರಿಂದ ಉತ್ಪತ್ತಿಯಾಗುವ ತ್ಯಾಜ್ಯ, ಪ್ಲಾಸ್ಟಿಕ್‌ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯಗಳ ವಿಲೇವಾರಿ ಮತ್ತು ನಿರ್ವಹಣೆಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫ‌ಲವಾಗಿದೆ. ಅದರಿಂದಾಗಿ, ಗಾರ್ಡನ್‌ ಸಿಟಿ, ಗ್ರೀನ್‌ ಸಿಟಿ, ಲೇಕ್‌ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರದಲ್ಲಿ ಇಂದು ಮಾರಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next