Advertisement

ಇಮೇಲ್‌ ಚೆಕ್‌!

09:44 AM Sep 03, 2019 | sudhir |

ಇ- ಮೇಲ್‌ಅನ್ನು ಶಾಲಾ ವಿದ್ಯಾರ್ಥಿಗಳಿಂದ, ವೃತ್ತಿಪರರ ತನಕ ಎಲ್ಲರೂ ಬಳಸುತ್ತಾರೆ. ಸಾಮಾಜಿಕ ಜಾಲತಾಣಗಳಂತೆಯೇ ಇಮೇಲ್‌ ಸೇವೆ ಕೂಡಾ ಬಹುತೇಕರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹಲವೆಡೆ ಇದಿಲ್ಲದಿದ್ದರೆ ದೈನಂದಿನ ಕೆಲಸ ಕಾರ್ಯಗಳು ನಡೆಯುವುದೇ ಇಲ್ಲ ಎನ್ನುವಷ್ಟರಮಟ್ಟಿಗೆ ನಾವು ಅದನ್ನು ಅವಲಂಬಿಸಿದ್ದೇವೆ. ಈ ಅವಲಂಬನೆಯನ್ನು ಇ- ಮೇಲ್‌ ಸಂಸ್ಥೆಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಹೊಚ್ಚ ಹೊಸ ಸಂಗತಿಯೇನಲ್ಲ. ಜಗತ್ತಿನ ಜನಪ್ರಿಯ ಇ-ಮೇಲ್‌ ಸೇವೆ ಗೂಗಲ್‌ ಒಡೆತನದ “ಜಿ- ಮೇಲ್‌’ ಕೂಡಾ ಇದಕ್ಕೆ ಹೊರತಾಗಿಲ್ಲ. ತನ್ನ ಬಳಕೆದಾರರ ಇಮೇಲ್‌ ಖಾತೆಗಳಲ್ಲಿನ ಮಾಹಿತಿಯನ್ನು ಕಲೆ ಹಾಕುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು.

Advertisement

ಒಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಿದಾಗ ಅದರ ಕುರಿತು ಶಾಪಿಂಗ್‌ ಸಂಸ್ಥೆ ಯಾವ ವಸ್ತುವನ್ನು ಎಷ್ಟು ಬೆಲೆಗೆ ಶಾಪಿಂಗ್‌ ಮಾಡಿದ್ದೀರಿ ಎಂಬ ಮಾಹಿತಿಯನ್ನು ಮೇಲ್‌ ಮಾಡುತ್ತದೆ. ಅದನ್ನು ಪ್ರತಿಯೊಬ್ಬರೂ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಏಕೆಂದರೆ ಅದು ರಶೀದಿ ಇದ್ದ ಹಾಗೆ. ನಾಳೆ ಆ ವಸ್ತುವನ್ನು ಹಿಂದಿರುಗಿಸಲು ಅಥವಾ ಪೇಮೆಂಟ್‌ ವಿಚಾರದಲ್ಲಿ ಏನಾದರೂ ಗೊಂದಲ ತಲೆದೋರಿದರೆ ಶಾಪಿಂಗ್‌ ಸಂಸ್ಥೆ ಕಳಿಸಿದ ಮೇಲ್‌ ಅನ್ನೇ ಸಾಕ್ಷಿಯಾಗಿ ತೋರಿಸಬಹುದು. ಇಂಥಾ ಮೇಲ್‌ಗ‌ಳನ್ನು ಗೂಗಲ್‌ ಜಾಲಾಡಿ ತನ್ನ ಬಳಕೆದಾರನ ಶಾಪಿಂಗ್‌ ಮಾಹಿತಿಯನ್ನೆಲ್ಲ ದಾಖಲಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆನ್‌ಲೈನ್‌ ಶಾಪಿಂಗ್‌ ಮಾತ್ರವಲ್ಲ, ಬಳಕೆದಾರ ಅಂಗಡಿಗಳಲ್ಲಿ ಕೊಂಡ ವಸ್ತುಗಳ ಮಾಹಿತಿಯನ್ನೂ ಗೂಗಲ್‌ ಜಾಲಾಡುತ್ತದೆ.

ಈ ಮಾಹಿತಿಯನ್ನೆಲ್ಲಾ ಇಟ್ಟುಕೊಂಡು ಏನು ತಾನೇ ಮಾಡಬಹುದು? ಇದು ಅನೇಕರ ಪ್ರಶ್ನೆ. ಆದರೆ ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಯೇ ಸಿರಿಸಂಪತ್ತು. “ಇನ್‌ಫಾರ್ಮೇಶನ್‌ ಈಸ್‌ ವೆಲ್ತ್‌’ ಎಂಬ ಹೊಸದೊಂದು ಗಾದೆ ಸೃಷ್ಟಿಯಾಗಿದ್ದೇ ಈ ಕಾರಣಕ್ಕೆ. ಈ ಮಾಹಿತಿಯನ್ನು ಗೂಗಲ್‌ ಇತರೆ ಸಂಸ್ಥೆಗಳಿಗೆ ಮಾರಿಕೊಳ್ಳಬಹುದು. ಉದಾಹರಣೆಗೆ 2018ರಲ್ಲಿ ಮಾಸ್ಟರ್‌ಕಾರ್ಡ್‌ ಬಳಕೆದಾರರು ಆಫ್ಲೈನ್‌ ಶಾಪಿಂಗ್‌ನಲ್ಲಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯನ್ನು ಗೂಗಲ್‌ ಮಾಸ್ಟರ್‌ಕಾರ್ಡ್‌ ಸಂಸ್ಥೆ ಜೊತೆ ಹಂಚಿಕೊಂಡಿತ್ತು.

ಕ್ರೋಮ್‌ ಬ್ರೌಸರ್‌, ಪ್ಲೇಸ್ಟೋರ್‌ ಹೀಗೆ ಗೂಗಲ್‌ನ ಯಾವುದೇ ಸೇವೆಯನ್ನು ಬಳಸುವಾಗ ಅಕ್ಕಪಕ್ಕ ಅಥವಾ ಪಾಪ್‌ಅಪ್‌ ವಿಂಡೋಗಳಲ್ಲಿ ಜಾಹೀರಾತುಗಳು ಪ್ರತ್ಯಕ್ಷವಾಗುವುದನ್ನು ನೀವು ಗಮನಿಸಿರಬಹುದು. ಈ ಜಾಹೀರಾತುಗಳು ಪ್ರತಿಯೊಬ್ಬ ಬಳಕೆದಾರನಿಗೂ ಬದಲಾಗುತ್ತವೆ. ಎಲ್ಲರಿಗೂ ಒಂದೇ ಥರದ ಜಾಹೀರಾತುಗಳು ಮೂಡುವುದಿಲ್ಲ. ಆಯಾ ಬಳಕೆದಾರನ ಆಸಕ್ತಿ, ಈ ಹಿಂದೆ ಮಾಡಿದ ಶಾಪಿಂಗ್‌ ಮುಂತಾದ ಮಾಹಿತಿಯನ್ನು ಅವಲಂಬಿಸಿ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ಮೂಡುತ್ತವೆ. 2017ರಲ್ಲಿ ಈ ಬಗ್ಗೆ ದೂರುಗಳು ಕೇಳಿಬಂದಾಗ ಗೂಗಲ್‌ ಇನ್ನುಮುಂದೆ ಹಾಗಾಗುವುದಿಲ್ಲ ಎಂದು ಸಮಜಾಯಿಷಿಯನ್ನೇನೋ ನೀಡಿತ್ತು. ಆದರೆ ಅದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂದು ಖಚಿತವಾಗಿ ಹೇಳಬಲ್ಲವರಾರು? ಅಲ್ಲದೆ ಬಳಕೆದಾರರ ಮಾಹಿತಿಯನ್ನು ಬಳಸಿಕೊಂಡು ಹಣ ಮಾಡುವ ಮಾರ್ಗಗಳಲ್ಲಿ ಇವು ಕೆಲವಷ್ಟೇ. ಇಲ್ಲೊಂದು ವಿಚಾರವಿದೆ. ಬಳಕೆದಾರ, ತನ್ನ ಖಾಸಗಿತನವನ್ನು ಕಾಪಾಡಿಕೊಳ್ಳಲು ಗೂಗಲ್‌ ಅನುವು ಮಾಡಿಕೊಡುತ್ತದೆ.

ಆದರೆ ಬಳಕೆದಾರರಿಗೆ ಈ ಬಗ್ಗೆ ಅರಿವಿಲ್ಲ ಹಾಗೂ ಇನ್ನು ಕೆಲವರು ಈ ಬಗ್ಗೆ ಜಾಗೃತಿ ವಹಿಸುತ್ತಿಲ್ಲ. ಬಳಕೆದಾರರು ನಿರ್ಲಕ್ಷ್ಯ ತೋರದೆ ತಮ್ಮ ಖಾಸಗಿತನ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next