ಕುಷ್ಟಗಿ: ಜಲಮೂಲ ಹೆಚ್ಚಿಸಲು ನರೇಗಾ ಯೋಜನೆಯಡಿ ನಿರ್ಮಿಸಿದ ಚೆಕ್ ಡ್ಯಾಂ ಅವೈಜ್ಞಾನಿಕ ಹಾಗೂ ಸಂಪೂರ್ಣ ಕಳಪೆಯಾಗಿವೆ ಎಂದು ತಾಪಂ ಸದಸ್ಯರು ಎಇಇ ಎಸ್.ಡಿ. ನಾಗೋಡ್ ಅವರನ್ನು ತರಾಟೆ ತೆಗೆದುಕೊಂಡರು. ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಎಇಇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಾಪಂ ಸದಸ್ಯೆ ಮಂಜುಳಾ ಪಾಟೀಲ ಅವರು, ಚೆಕ್ ಡ್ಯಾಂ ಅವ್ಯವಹಾರಕ್ಕೆ ಸಂಬಂ ಧಿಸಿದಂತೆ ಪೂರಕ ದಾಖಲೆಗಳಿದ್ದು ಇದನ್ನು ಸಾಕ್ಷ್ಯಧಾರ ಸಮೇತ ಸಾಬೀತು ಪಡಿಸುವೆ. ಮಾತಿಗೆ ತಪ್ಪಿದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ. ನೀವು ಎಇಇ ನೌಕರಿಗೆ ರಾಜೀನಾಮೆ ನೀಡುವಿರಾ ಪ್ರಶ್ನಿಸಿ ಸವಾಲು ಹಾಕಿದರು.
ತಾಪಂ ಸದಸ್ಯ ಯಂಕಪ್ಪ ಚೌವ್ಹಾಣ ಮಾತನಾಡಿ, ಚೆಕ್ ಡ್ಯಾಂಗಳು ಕಳಪೆಯಾಗಿದ್ದು, ದೊಡ್ಡ ಹಗರಣವೇ ಆಗಿದೆ. ಈ ಚೆಕ್ ಡ್ಯಾಂ ಕಾಮಗಾರಿಯಲ್ಲಿ ಸತ್ತವರ ಹೆಸರಲ್ಲಿ ಎನ್‌ಎಂಆರ್, ಸರ್ಕಾರಿ ನೌಕರದಾರರು ಕೂಲಿಕಾರರಾಗಿದ್ದು, ಕೋಟ್ಯಂತರ ರೂ. ಕೊಳ್ಳೆ ಹೊಡೆದಿದ್ದಾರೆ. ಚೆಕ್ ಡ್ಯಾಂ ಕೆಲಸ ನೀರಿನ ಮೂಲ ಹೆಚ್ಚಿಸುವ ಕೆಲಸವಾಗಿದ್ದರೂ, ದುರಪಯೋಗವೇ ಜಾಸ್ತಿಯಾಗಿದೆ. ಕೆಲಸ ಆಗದೇ ಎಂಐಎಸ್ ಹೇಗಾದವು? ಶುದ್ಧ ನೀರಿನ ಘಟಕಗಳ ಬಗ್ಗೆ ತಲೆ ಕೆಡಸಿಕೊಳ್ಳದೇ ದುರಸ್ತಿಗೂ ಮುಂದಾಗದೇ ಬರೀ ಚೆಕ್ ಡ್ಯಾಂ ಬಗ್ಗೆ ಗಮನ ಹರಿಸಲಾಗಿದೆ ಎಂದು ಆರೋಪಿಸಿದರು.
ಇದನ್ನು ಅಲ್ಲಗಳೆದ ಎಇಇ ಎಸ್.ಡಿ. ನಾಗೋಡ್, 198ರಲ್ಲಿ 40 ಚೆಕ್ ಡ್ಯಾಂಗಳಿಗಷ್ಟೇಹಣ ಪಾವತಿಯಾಗಿದೆ. ಉಳಿದವು ಪರಿಶೀಲಿಸಿ ಗುಣಮಟ್ಟದ ಮೇರೆಗೆ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸಲಾಗುವುದು. ಸದರಿ ಪ್ರಕರಣದ ಹಿನ್ನೆಲೆಯಲ್ಲಿ ಸಿಇಒ ಹಂತದಲ್ಲಿ ತನಿಖೆ ನಡೆದಿದೆ ಎಂದು ಸಭೆಗೆ ತಿಳಿಸಿದರು. ವೈದ್ಯಾಧಿಕಾರಿ ಡಾ| ಆನಂದ ಗೋಟೂರು ಮಾತನಾಡಿ, ತಾಲೂಕಿನಲ್ಲಿ ಡೆಂಘೀ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣಪ್ರದೇಶದಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ ಡೆಂಘೀಯ ಔಷಧಕೊರತೆ ಇಲ್ಲ, ಇದಕ್ಕೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ ಇದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಉಪಾಧ್ಯಕ್ಷೆ ವಿಶಾಲಾಕ್ಷಿ ಮದೂರು, ತಾಪಂ ಇಒ ಕೆ. ತಿಮ್ಮಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಪ್ಪ, ನರೇಗಾ ಸಹಾಯಕ ನಿರ್ದೇಶಕ ಅರುಣಕುಮಾರ ದಳವಾಯಿ ಹಾಜರಿದ್ದರು.