Advertisement
ಪಯಸ್ವಿನಿ ನದಿಯ ನೀರನ್ನು ಕುಂಟಾರು ಪ್ರದೇಶದಿಂದ ಬೆಳ್ಳೂರು ಗ್ರಾಮ ಪಂಚಾಯಿತಿಯ ಪ್ರದೇಶಗಳಿಗೆ ಹಾಯಿಸುವ ಜಲನಿಧಿ ಯೋಜನೆಯ ಕಾಮಗಾರಿಗಳು ಪೂರ್ತಿಗೊಂಡಿದ್ದು, ಈಗ ಜನರ ಬೇಡಿಕೆಯಂತೆ ಪಯಸ್ವಿನಿ ನದಿಗೆ ಕುಂಟಾರಿನಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
Related Articles
ಮಳೆ ಬಂದರೆ ಕಾಮಗಾರಿ ಸ್ಥಗಿತ ಸಾಧ್ಯತೆ.
ಕಾಮಗಾರಿಯು ಆಮೆನಡಿಗೆಯಲ್ಲಿ ನಡೆಯುತ್ತಿದ್ದು ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿ ಪೂರ್ತಿಗೊಳಿಸದಿದ್ದರೆ ಸಮಸ್ಯೆ ಕಟಿಟ್ಟ ಬುತ್ತಿ. ಇನ್ನೂ ಸಾಕಷ್ಟು ಕೆಲಸ ಬಾಕಿ ಇದ್ದು ಚೆಕ್ ಡಾಮ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಬೇಸಿಗೆಯ ಮಳೆಯು ಇದ್ದಕ್ಕಿದ್ದಂತೆ ಸುರಿದರೆ ಪಯಸ್ವಿನಿಯಲ್ಲಿ ನೀರಿನ ಹರಿವು ಆರಂಭವಾಗಿ ಕಾಮಗಾರಿ ಸ್ಥಗಿತಗೊಳ್ಳಬಹುದು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಭಾರೀ ಮಳೆ ಸುರಿದಿತ್ತು. ಅಷ್ಟೇ ಅಲ್ಲದೆ ಈಗಾಗೇ ನೀರನ್ನು ತಡೆ ಹಿಡಿಯಲು ದೇಗುಲ ಪರಿಸರದಿಂದ ತಂದು ನದಿಯಲ್ಲಿ ರಾಶಿ ಹಾಕಿದ ಮಣ್ಣು ಸಮುದ್ರ ಪಾಲಾಗಬಹುದು. ಕಾಮಗಾರಿಯನ್ನು ಈ ವರ್ಷ ಮುಂದುವರಿಸಲು ಅಸಾಧ್ಯವಾಗದಿದ್ದಲ್ಲಿ ಭಾರೀ ನಷ್ಟಕ್ಕೂ ಎಡೆಯಾಗಬಹುದು.
Advertisement
ಕಲಕಿದ ನೀರಿನ ಸಮಸ್ಯೆಚೆಕ್ ಡಾಮ್ ನಿರ್ಮಾಣದ ಸಂದರ್ಭದಲ್ಲಿ ಸುರಿದ ಮಣ್ಣು ಮತ್ತು ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಸಂಗ್ರಹವಾಗುತ್ತಿರುವ ನೀರನ್ನು ಹಲವು ಮೋಟಾರುಗಳ ಮೂಲಕ ಕಟ್ಟಿ ನಿಂತ ನೀರಿಗೆ ಹಾಯಿಸುವ ಕಾರಣ ಈ ಪ್ರದೇಶದಲ್ಲಿರುವ ನೀರು ಸಂಪೂರ್ಣ ಕಲಕಿದೆ. ಹೀಗಾಗಿ ಕುಂಟಾರು ಕ್ಷೇತ್ರ ಮತ್ತು ಇಲ್ಲಿನ ಪರಿಸರ ನಿವಾಸಿಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ. ಬೆಳ್ಳೂರಿಗೆ ನೀರು
ಬೆಳ್ಳೂರು ಗ್ರಾಮ ಪಂಚಾಯತಿನ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಮಗ್ರವಾಗಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವಿಶ್ವ ಬ್ಯಾಂಕಿನ ನೆರವಿನೊಂದಿಗೆ ರಾಜ್ಯ ಸರಕಾರ, ಗ್ರಾಮ ಪಂಚಾಯತ್‌ನ ಆರ್ಥಿಕ ಸಹಾಯದೊಂದಿಗೆ ಬೆಳ್ಳೂರು ಗ್ರಾಮ ಪಂಚಾಯತಿನ 13 ವಾರ್ಡುಗಳ 1126 ಕುಟುಂಬಗಳಿಗೆ ಸಹಾಯಕವಾಗುವಂತೆ 7.37 ಕೋಟಿ ರೂಪಾಯಿ ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆ ಇದಾಗಿದೆ. ಯೋಜನೆಯಂತೆ ಕಾರಡ್ಕ ಗ್ರಾಮ ಪಂಚಾಯತಿಗೆ ಸೇರಿದ ಕುಂಟಾರು ಶ್ರೀ ಕ್ಷೇತ್ರ ಸಮೀಪದಲ್ಲಿ ಹರಿಯುವ ಪಯಸ್ವಿನಿ ನದಿಯಿಂದ ನೀರನ್ನು, ನದಿಗೆ ಹೊಂದಿಕೊಂಡು ದೊಡ್ಡ ಬಾವಿಯೊಂದನ್ನು ಕೊರೆದು, ಇದಕ್ಕೆ 50 ಅಶ್ವ ಶಕ್ತಿಯ ನೀರೆತ್ತುವ ಪಂಪನ್ನು ಜೋಡಿಸಿ, ಕುಂಟಾರು-ಮಾಯಿಲಂಕೋಟೆ ಮೂಲಕ ಮಿಂಚಿಪದವಿನಲ್ಲಿ ನಿರ್ಮಿಸುವ ಸಂಗ್ರಹಣಾ ಟ್ಯಾಂಕಿಯಲ್ಲಿ ಶೇಖರಿಸಿ ಅಲ್ಲಿಂದ ಬೆಳ್ಳೂರನ್ನು ತಲಪಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಸುಮಾರು 10ಕಿ.ಮೀ. ಉದ್ದಕ್ಕೆ ಕೊಳವೆಯನ್ನು ಜೋಡಿಸಬೇಕಾಗಿದೆ. ವರದಾನವಾಗಬಲ್ಲ ಯೋಜನೆ
ಗ್ರಾಮೀಣ ಪ್ರದೇಶವಾಗಿರುವ ಬೆಳ್ಳೂರು ಗ್ರಾಮ ಪಂಚಾಯತಿಗೆ ಈ ಕುಡಿಯುವ ನೀರಿನ ಯೋಜನೆ ವರದಾನವಾಗಬಹುದು. ಇಲ್ಲಿನ ಬಹಳಷ್ಟು ಕುಟುಂಬಗಳು ಬೇಸಗೆ ಬಂತೆಂದರೆ ನೀರಿಗಾಗಿ ಒದ್ದಾಟ ಅರಂಭವಾಗುತ್ತದೆ. ಪರ್ಲಾಂಗುಗಳ ತನಕ ನೀರಿಗಾಗಿ ಸಾಗ ಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕಾಲನಿ ನಿವಾಸಿಗಳು ಸಹ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಿಂಚಿಪದವಿನಲ್ಲಿ ಎರಡೂವರೆ ಲಕ್ಷ ಲೀಟರ್ ಸಾಮಾರ್ಥ್ಯದ ನೀರು ಸಂಗ್ರಹಣಾ ಟ್ಯಾಂಕಿ ನಿರ್ಮಾಣ ನಡೆಯಲಿದೆ. ಇಲ್ಲಿಂದ ಕಿರು ನೀರು ಸಂಗ್ರಾಹಕಗಳಿಗೆ ವಿತರಿಸಿ, ಅಲ್ಲಿಂದ ಮನೆ ಮನೆಗೂ ನೀರು ಒದಗಿಸುವ ಯೋಜನೆ ಇದಾಗಿದೆ. ಕೊಳವೆ ಜೋಡಿಸುವ ಕಾಮಗಾರಿಯೂ ನಡೆಯಬೇಕಿದೆ. 7.37 ಕೋಟಿ ರೂಪಾಯಿಯ ಈ ಯೋಜನೆಯಂತೆ 15 ಶೇಕಡಾ ಖರ್ಚನ್ನು ಗ್ರಾಮ ಪಂಚಾಯತ್, 10 ಶೇಕಡಾ ಖರ್ಚನ್ನು ಫಲಾನುಭವಿಗಳು ಭರಿಸುತ್ತಿದ್ದಾರೆ.
ಕುಂಟಾರು ಪ್ರದೇಶದಲ್ಲಿ ಪಯಸ್ವಿನಿ ನದಿಗೆ ಹೊಂದಿಕೊಂಡು ಬೃಹತ್ ಪಂಪಿಂಗ್ ಕೇಂದ್ರ ತಯಾರಾಗಿದೆ. ಇದರಲ್ಲಿ ಅಗತ್ಯವಾದ ಯೋಜನೆಗೆ ನೀರು ಹಾಯಿಸುವ ಮೋಟಾರನ್ನು ಜೋಡಿಸಲಾಗಿದೆ. ವಿದ್ಯುತ್ತ್ ಸಂಪರ್ಕವೂ ಲಭಿಸಿದ ಹಿನ್ನೆಲೆಯಲ್ಲಿ ಪ್ರಾಯೋಗಿಕ ನೀರು ಹಾಯಿಸುವಿಕೆಯೂ ನಡೆಯುತ್ತಿದೆ. ಈ ಯೋಜನೆಯ ಕಾಮಗಾರಿಯನ್ನು 2014, ಎಪ್ರಿಲ್ ತಿಂಗಳಲ್ಲಿಯೇ ಆರಂಭಿಸಲಾಗಿತ್ತು. ಕುಂಟಾರಿನ ಜನರ ವಿರೋಧದ ಕಾರಣದಿಂದಾಗಿ ಬಾವಿಕೊರೆಯುವ ಕಾಮಗಾರಿಯನ್ನು ನಿಲ್ಲಿಸಬೇಕಾಯಿತು. ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಅಧಿಕೃತರು ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದ್ದರು. ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ನಬಾರ್ಡ್ ನೇತೃತ್ವದಲ್ಲಿ ಚೆಕ್ ಡ್ಯಾಮ್ ನಿರ್ಮಿಸಲು ನಿರ್ಧರಿಸಿದರ ಪರಿಣಾಮವೇ ಈ ಆಣೆಕಟ್ಟು. ಮಳೆಗಾಲ ಪ್ರಾರಂಭವಾಗುವುದರೊಂದಿಗೆ ಕಾಮಗಾರಿ ಪೂರ್ತಿಯಾಗಿ ಮುಂದಿನ ದಿನಗಳಲ್ಲಿ ಜನರ ಬಹುದೊಡ್ಡ ಸಮಸ್ಯೆಗೆ ಇದು ಪರಿಹಾರ ನೀಡಬಹುದೆಂಬ ನಿರೀಕ್ಷೆ ಇಲ್ಲಿನ ಜನರ ಕಣ್ಣಲ್ಲಿ ಕಾಣಬಹುದಾಗಿದೆ.