Advertisement

ಉತ್ಪನ್ನ ಖರೀದಿಗೂ ಮುನ್ನ ಪರಿಶೀಲಿಸಿ, ಪ್ರಶ್ನಿಸಿ

07:43 AM Mar 17, 2019 | Team Udayavani |

ಸಂತೆಮರಹಳ್ಳಿ: ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಇದಕ್ಕೆ ನಾವು ಉತ್ಪನ್ನ ಖರೀದಿಗೆ ಮುನ್ನ ಪರಿಶೀಲಿಸಿ, ಪ್ರಶ್ನಿಸುವುದನ್ನು ಕಲಿಯಬೇಕು ಎಂದು ಸಿವಿಲ್‌ ನ್ಯಾಯಾಧೀಶ ಎನ್‌.ಶರತ್‌ಚಂದ್ರ ಸಲಹೆ ನೀಡಿದರು.

Advertisement

ಪಟ್ಟಣದ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಪೊಲೀಸ್‌ ದೂರು ಪ್ರಾಧಿಕಾರದ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಗ್ರಾಹಕರ ಹಗಲುದರೋಡೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಗ್ರಾಹಕನೂ ಖರೀದಿಯಲ್ಲಿ ಪ್ರಚಾರದ ಭರಾಟೆಗೆ ಜೋತು ಬೀಳದೆ ಗುಣಮಟ್ಟ ಹಾಗೂ ಸರಿಯಾದ ಬೆಲೆಯನ್ನು ಅರಿತುಕೊಳ್ಳಬೇಕು. ಒಂದು ವೇಳೆ ಅವನಿಗೆ ತೊಂದರೆಯಾದಲ್ಲಿ ಗ್ರಾಹಕರ ವ್ಯಾಜ್ಯ ಪರಿಹಾರ ಕೇಂದ್ರದಕ್ಕೆ ನೇರವಾಗಿ ದೂರು ನೀಡಿ ನ್ಯಾಯ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. 

ಪೊಲೀಸ್‌ ಇಲಾಖೆಯಲ್ಲಿ ದೂರುದಾರನಿಗೆ ಇಲಾಖೆಯ ಸಿಬ್ಬಂದಿಯಿಂದಲೇ ಅನೇಕ ಬಾರಿ ಮೋಸ ಮಾಡುವ ಸಂಭವವಿರುತ್ತದೆ. ಅಂತಹ ನೊಂದ ವ್ಯಕ್ತಿಯು ನೇರವಾಗಿ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರನ್ನು ಸಲ್ಲಿಸಬಹುದು. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವಿನ ಕೊರತೆ ಹೆಚ್ಚಾಗಿದೆ. ಈ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು. ಆದರೆ, ವಿನಾ ಕಾರಣ ವೈಯಕ್ತಿಕ ಕಾರಣಗಳಿಗೆ ಇದರ ದುರುಪಯೋಗ ಮಾಡಿಕೊಳ್ಳಬಾರದು ಎಂದರು.

ವಿತರಕ ಹಾಗೂ ವರ್ತಕರಿಂದ ಮೋಸ: ವಕೀಲ ಬಿ.ಎಂ.ಮಹದೇವಸ್ವಾಮಿ ಮಾತನಾಡಿ, ದೇಶದಲ್ಲಿ ಶೇ.70 ರೈತರೇ ಇದ್ದಾರೆ. ಇಲ್ಲಿ ಇವರೇ ಉತ್ಪಾದಕರಾಗಿದ್ದಾರೆ. ಇವರು ಉತ್ಪಾದಿಸಿ ವಸ್ತುಗಳನ್ನು ಬಳಕೆದಾರ ಖರೀದಿ ಮಾಡಿ ವಸ್ತುಗಳನ್ನು ಉತ್ಪಾದಿಸುತ್ತಾನೆ. ಇವನ ಉತ್ಪನ್ನವನ್ನು ವಿತರಕನು ವರ್ತಕನ ಮೂಲಕ ಮಾರಾಟ ಮಾಡುತ್ತಾನೆ.

Advertisement

ಆದರೆ, ಇವರಿಬ್ಬರಿಂದಲೇ ಗ್ರಾಹಕರಿಗೆ ಹೆಚ್ಚು ಮೋಸವಾಗುತ್ತದೆ. ಹಾಗಾಗಿ ಗ್ರಾಹಕ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ವಿವರಿಸಿದರು. ಗರಿಷ್ಠ ಮಾರಾಟ ಬೆಲೆಯಲ್ಲೂ ಚೌಕಾಸಿ ಮಾಡುವುದನ್ನು ಕಲಿಯಬೇಕು. ಯಾವುದೇ ಕಾರಣಕ್ಕೂ ರಸೀದಿ ಇಲ್ಲದೆ ವಸ್ತುಗಳನ್ನು ಖರೀದಿಸಬಾರದು.

ಅವನಿಗೆ ಮೋಸವಾದಲ್ಲಿ 5 ಲಕ್ಷ ರೂ. ಒಳಗಿನ ವ್ಯಾಜ್ಯವನ್ನು ಜಿಲ್ಲಾ ಗ್ರಾಹಕರ ವೇದಿಕೆ, 5 ಲಕ್ಷ ರೂ.ಗೂ ಹೆಚ್ಚು 20 ಲಕ್ಷ ರೂ.ಗಳಿಗಿಂತ ಕಡಿಮೆ ಮೊತ್ತದ ವ್ಯಾಜ್ಯಗಳನ್ನು ರಾಜ್ಯ ಗ್ರಾಹಕರ ವೇದಿಕೆ ಹಾಗೂ 20 ಲಕ್ಷ ರೂ. ಗಳಿಗಿಂತ ಹೆಚ್ಚಿನ ಮೊತ್ತದ ಹಣದ ಪರಿಹಾರಕ್ಕಾಗಿ ರಾಷ್ಟ್ರೀಯ ಗ್ರಾಹಕರ ಆಯೋಗದ ಮೂಲಕ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ. ಇದರಲ್ಲಿ ನೇರವಾಗಿ ಗ್ರಾಹಕನೇ ದೂರು ಸಲ್ಲಿಸುವ ವಿಶೇಷ ಅವಕಾಶವಿದೆ.

ಇಲ್ಲಿ ಹೆಚ್ಚು ವಿಳಂಬಲ್ಲದೆ ನ್ಯಾಯ ಲಭಿಸುತ್ತದೆ. ಹಾಗಾಗಿ ನಾವು ಖರೀದಿ ಮಾಡುವ ಪ್ರತಿಯೊಂದು ವಸ್ತುಗಳಿಗೂ ನಿಗದಿತ ದಾಖಲೆಗಳನ್ನು ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು. ವಕೀಲ ಸಂಘದ ಅಧ್ಯಕ್ಷ ಕೆ.ಬಿ.ಶಶಿಧರ್‌, ವಕೀಲ ಎಂ.ಮಾದೇಶ್‌ ಮಾತನಾಡಿದರು. ವಕೀಲ ಸಂಘದ ಪ್ರತಿಮಾದೇವಿ, ಕಾಂತರಾಜು, ಎಂ.ನಾಗರಾಜು, ಸಂಪತ್ತು, ಕುಮಾರಸ್ವಾಮಿ, ಮಂಜುಳಾ, ವಿನಾಯಕ, ರಾಜೇಶ್‌, ಹರಿಶ್ಚಂದ್ರ, ಗುರು, ರಂಗಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next