ಉಪ್ಪಿನಂಗಡಿ: ಹಿಂದೂ ಎಂದು ನಂಬಿಸಿ ಫೇಸ್‌ಬುಕ್‌ನಲ್ಲಿ ಯುವತಿಯ ಸ್ನೇಹ ಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ ಅಲ್ಲಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅನ್ಯಕೋಮಿನ ಯುವಕನೋರ್ವನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ಬಂಟ್ರ ಗ್ರಾಮದ ಮರ್ಧಾಳ ಪಾಲತ್ತಡ್ಕ ನಿವಾಸಿ ಅಬ್ದುಲ್ ರಜಾಕ್ (25) ವಂಚನೆ ನಡೆಸಿದ ಆರೋಪಿ. ಆತ ತನ್ನ ಹೆಸರನ್ನು ಖುಷಿಕ್ ಯಾನೆ ಸಂಜು ಎಂದು ಪರಿಚಯಿಸಿ ತಾನು ಹಿಂದೂ ಧರ್ಮಾನುಯಾಯಿಯಾಗಿದ್ದು, ತನಗೆ ಹೆತ್ತವರಿಲ್ಲ. ತಾನು ಉತ್ತಮ ಸ್ನೇಹಿತರನ್ನು ಹೊಂದಲು ಬಯಸುವವನೆಂದು ತಿಳಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೌಕ್ರಾಡಿ ಗ್ರಾಮದ ಯುವತಿಯ ಸ್ನೇಹ ಸಂಪಾದಿಸಿದ್ದ.
ಯುವಕನ ಮಾತಿಗೆ ಮರುಳಾದ ಯುವತಿ ಸ್ನೇಹದ ಕೋರಿಕೆಯನ್ನು ಮನ್ನಿಸಿ ಬಳಿಕ ವಾಟ್ಸ್ ಆ್ಯಪ್ ನಂಬರ್ ಅನ್ನು ಆತನಿಗೆ ನೀಡಿದ್ದು, ಅನಂತರ ಅವರಿಬ್ಬರೂ ನಿರಂತರ ಸಂಪರ್ಕದಲ್ಲಿದ್ದರು.
ಇದನ್ನೂ ಓದಿ:ಗ್ರಾಮಪಂಚಾಯತಿ ಚುನಾವಣೆಗೆ ಅಸ್ತು ಎಂದ ಹೈಕೋರ್ಟ್: 3 ವಾರದಲ್ಲಿ ವೇಳಾಪಟ್ಟಿ ಪ್ರಕಟಿಸಲು ಸೂಚನೆ
ಯುವತಿಯು ಮನೆಯವರ ಒಪ್ಪಿಗೆ ಪಡೆದು ನ. 1ರಂದು ಆತನೊಂದಿಗೆ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದಳು. ಈ ವೇಳೆ ತಾನೊಬ್ಬ ಹಿಂದೂ ಎಂದು ಬಿಂಬಿಸುವ ಸಲುವಾಗಿ ಯುವಕ ದೇವರ ಪ್ರಸಾದವನ್ನು ಹಣೆಯ ತುಂಬಾ ಬಳಿದುಕೊಂಡಿದ್ದ. ಆತ ಅಲ್ಲಿ ಯುವತಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದ. ಧರ್ಮಸ್ಥಳದಲ್ಲಿ ತೆಗೆದ ಫೋಟೋವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಯುವತಿಯ ತೇಜೋವಧೆಗೆ ಯತ್ನಿಸಿದ್ದ. ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ನಡೆಯುತ್ತಿದೆ.