ಬೆಂಗಳೂರು: ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಎಚ್‌ಒ) ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ರಾಮಯ್ಯ ಹೆಸರಿನಲ್ಲಿ ಕರೆ ಮಾಡಿ 7 ಲಕ್ಷ ರೂ. ವಂಚಿಸಿರುವ ಆರೋಪದಡಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸುರೇಶ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಾಗಲಕೋಟೆ ಡಿಎಚ್‌ಒ ಆಗಿ ಇ.ಎಂ.ಜಯಶ್ರೀ 2022ರಿಂದ ಕಾರ್ಯ ನಿರ್ವಹಿಸುತ್ತಿದ್ದರು. 2023ರ ಆ.11ಕ್ಕೆ ಅದೇ ಹುದ್ದೆ ಗೆ ಡಾ| ರಾಜಕುಮಾರ್ ಯರಗಲ್ ಅವರನ್ನು ನಿಯೋಜಿಸಲಾಗಿತ್ತು.. ಜಯಶ್ರೀ ರಜೆಯಲ್ಲಿದ್ದ ವೇಳೆ ಅದೇ ತಿಂಗಳ 14ರಂದು ರಾಜಕುಮಾರ್ ಬಂದು ವರದಿ ಮಾಡಿಕೊಂಡಿದ್ದರು. ರಜೆಯಿಂದ ಮರಳಿ ಬಂದಿದ್ದ ಜಯಶ್ರೀಗೆ ಅಧಿಕಾರ ಹಸ್ತಾಂತರಿಸದೇ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಡಿಎಚ್‌ಒ ಹುದ್ದೆಯಲ್ಲಿ ಜಯಶ್ರೀ ಅವರೇ ಮುಂದುವರಿಯುವಂತೆ ಕೆಎಟಿ ಆ.17ರಂದು ಆದೇಶಿಸಿತ್ತು. ಈ ನಡುವೆ ಜಯಶ್ರೀ ಅವರಿಗೆ ಅಪರಿಚಿತ ನಂಬರ್‌ನಿಂದ ಕರೆ ಮಾಡಿದ್ದ ಸುರೇಶ್ ತನ್ನನ್ನು ರಾಮಯ್ಯ ಎಂದು ಪರಿಚಯಿಸಿಕೊಂಡಿದ್ದ. ತಾನು ನಿವೃತ್ತ ಕೆಎಎಸ್ ಅಧಿಕಾರಿ ಆಗಿದ್ದು, ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಎಂದು ಹೇಳಿದ್ದ. ನಿಮಗೆ ಬೇಕಾದಲ್ಲಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ದುಡ್ಡಿಗೆ ಬೇಡಿಕೆಯಿಟ್ಟಿದ್ದ. ಜಯಶ್ರೀ ಹಂತ-ಹಂತವಾಗಿ 7 ಲಕ್ಷ ರೂ. ವನ್ನು ಫೋನ್ ಪೇ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿದ್ದರು. ಕೆಲವು ದಿನಗಳ ಬಳಿಕ ಜಯಶ್ರೀ ಅವರು ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಾಗಲಕೋಟೆ ಡಿಹೆಚ್‌ಓ ಡಾ| ಜಯಶ್ರೀ ವರ್ಗಾವಣೆ ಮಾಡಿಸುವುದಾಗಿ ಹೇಳಿ ವಂಚಿಸಿದ್ದ ಸುರೇಶ್ ಈ ಹಿಂದೆ ಉದ್ಯಮಿಯೊಬ್ಬರಿಂದಲೂ ಹಣ ಪಡೆಯಲು ಯತ್ನಿಸಿದ್ದ ಎನ್ನಲಾಗಿದೆ.