Advertisement

ವಿವಾಹವಾಗುವುದಾಗಿ ವಂಚನೆ; ಯುವತಿ ಆತ್ಮಹತ್ಯೆ ಯತ್ನ

06:41 AM Feb 06, 2019 | Team Udayavani |

ಬೆಂಗಳೂರು: ಪ್ರೀತಿಸಿ ವಂಚನೆಗೊಳಗಾದ ವಿಚಾರ ಕುರಿತು ಆಪ್ತಸಮಾಲೋಚನೆಗೆ ಬಂದಿದ್ದ ಯುವತಿಯೊಬ್ಬಳು ಕೈಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ಬೆಂಗಳೂರಿನ ಹಲಸೂರು ನಿವಾಸಿ ಸಂಗೀತಾ(25)(ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಸಂತ್ರಸ್ತೆಗೆ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರು ಮೂಲದ ಪ್ರದೀಪ್‌(ಹೆಸರು ಬದಲಾಯಿಸಲಾಗಿದೆ) ವಂಚನೆ ಮಾಡಿದವನು.

ಮೈಸೂರು ಮೂಲದ ಪ್ರದೀಪ್‌ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಕ್ಯಾಬ್‌ ಚಾಲಕನಾಗಿದ್ದು, ಇಲ್ಲಿಯೇ ವಾಸವಾಗಿದ್ದಾನೆ. ಈ ವೇಳೆ ತನ್ನ ಸ್ನೇಹಿತರ ಮೂಲಕ ಹಲಸೂರು ನಿವಾಸಿ ಸಂಗೀತಾ ಅವರನ್ನು ಪರಿಚಯಿಸಿಕೊಂಡಿದ್ದಾನೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಕಳೆದ 10 ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಪ್ರದೀಪ್‌ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಆಕೆಯ ಜತೆ ಸಲುಗೆಯಿಂದಿದ್ದ.

ಇದೀಗ ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿ. ಆದರೆ, ಕೆಲ ತಿಂಗಳಿಂದ ಪ್ರದೀಪ್‌ ಸಂತ್ರಸ್ತೆಯ ಸಂಪರ್ಕಕ್ಕೆ ಸಿಗದೆ, ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದ. ಇದರಿಂದ ಆತಂಕಗೊಂಡ ಸಂತ್ರಸ್ತೆ ಒಂದು ತಿಂಗಳ ಹಿಂದೆ ನಗರ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿರುವ ವನಿತಾ ಸಹಾಯವಾಣಿ ಕೇಂದ್ರದಲ್ಲಿ ದೂರು ನೀಡಿದ್ದರು ಎಂದು ಕೇಂದ್ರದ ಅಧಿಕಾರಿಗಳು ಹೇಳಿದರು.

ಮದುವೆಗೆ ನಿರಾಕರಣೆ: ಸಂತ್ರಸ್ತೆಯ ದೂರಿನ ಸಂಬಂಧ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಇಬ್ಬರನ್ನು ಎರಡು ಬಾರಿ ಆಪ್ತಸಮಾಲೋಚನೆ ಮಾಡಿದ್ದಾರೆ. ಈ ವೇಳೆ ಕೆಲ ಷರತ್ತುಗಳನ್ನು ಒಪ್ಪಿಕೊಂಡರೆ, ಆಕೆಯನ್ನು ವಿವಾಹ ಮಾಡಿಕೊಳ್ಳುವುದಾಗಿ ಪ್ರದೀಪ್‌ ಹೇಳಿಕೆ ನೀಡಿದ್ದ. ಆತನ ಷರತ್ತುಗಳಿಗೆ ಸಂತ್ರಸ್ತೆ ಕೂಡ ಸಮ್ಮತಿ ಸೂಚಿಸಿದ್ದರು.

Advertisement

ಹೀಗಾಗಿ ಫೆ.5ರಂದು ಮತ್ತೂಮ್ಮೆ ಕೌನ್ಸೆಲಿಂಗ್‌ಗೆ ಬರುವಂತೆ ಕೇಂದ್ರದ ಅಧಿಕಾರಿಗಳೂ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಕೌನ್ಸೆಲಿಂಗ್‌ಗೆ ಬಂದ ಪ್ರದೀಪ್‌, ಸಂಗೀತಾರನ್ನು ಮದುವೆ ಮಾಡಿಕೊಳ್ಳಲು ಕಾಲವಕಾಶ ಬೇಕಿದೆ ಎಂದು ನುಣುಕಿಕೊಳ್ಳಲು ಯತ್ನಿಸಿದ್ದಾನೆ.

ಶೌಚಾಲಯದಲ್ಲಿ ಆತ್ಮಹತ್ಯೆಗೆ ಯತ್ನ: ಪ್ರಿಯಕರನ ಮಾತು ಕೇಳಿದ ಸಂತ್ರಸ್ತೆ ಆತಂಕಗೊಂಡು ಸಹಾಯವಾಣಿ ಕೇಂದ್ರದಿಂದ ಹೊರಬಂದು ಶೌಚಾಲಯಕ್ಕೆ ಹೋಗಿದ್ದಾರೆ. ಅನುಮಾನಗೊಂಡ ಪೋಷಕರು ಆಕೆಯ ಹಿಂದೆಯೇ ಹೋಗಿದ್ದಾರೆ. ಬಳಿಕ ಶೌಚಾಲಯದ ಬಾಗಿಲು ಹಾಕಿಕೊಂಡ ಸಂತ್ರಸ್ತೆ, ಗಾಜಿನ ಬಳೆಯ ಮೂಲಕ ಎಡಗೈ ಕೊಯ್ದುಕೊಂಡಿದ್ದಾರೆ.

ಇದನ್ನು ಗಮನಿಸಿದ ಆಕೆಯ ಸಂಬಂಧಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ನೆರವಿಗೆ ಧಾವಿಸಿದ ಕಚೇರಿಯ ಸಿಬ್ಬಂದಿ ಶೌಚಾಲಯದಿಂದ ಆಕೆಯನ್ನು ಹೊರ ಕರೆತಂದು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವನಿತಾ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಹೇಳಿದರು.

ಆತ್ಮಹತ್ಯೆಗೆ ಯತ್ನಿಸಿದ ಯುವತಿ ಮದುವೆಯಾಗಿಲ್ಲ. 10 ತಿಂಗಳ ಹಿಂದೆ ಯವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಮಂಗಳವಾರ ಕೌನ್ಸೆಲಿಂಗ್‌ ವೇಳೆ ಆತ ಮದುವೆಗೆ ಕಾಲವಕಾಶ ಕೇಳಿದ್ದ. ಇದರಿಂದ ಆತಂಕಗೊಂಡ ಸಂತ್ರಸ್ತೆ ಶೌಚಾಲಯದಲ್ಲಿ ಕೈ ಕೊಯ್ದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಯುವಕ ಮದುವೆಗೆ ನಿರಾಕರಿಸಿದರೆ, ಪೊಲೀಸರಿಗೆ ದೂರು ನೀಡಲಾಗುವುದು.
-ರಾಣಿ ಶೆಟ್ಟಿ, ವನಿತಾ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next