ಹುಬ್ಬಳ್ಳಿ: ಕಂತುಗಳ ಪಾವತಿಯಲ್ಲಿ ನಿವೇಶನ, ಮನೆ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಗೆ ಮಕ್ಮಲ್ ಟೋಪಿ ಹಾಕಿ ಪರಾರಿಯಾಗಿದ್ದ ವಂಚಕನನ್ನು ಇಲ್ಲಿನ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸಾತಿಹಾಳದ ರಾಮಯ್ಯ ಗಂಗಯ್ಯ ಹಿರೇಮಠನನ್ನು ಬಂಧಿಸಲಾಗಿದೆ.
ರಾಜಸ್ಥಾನ ಮೂಲದ ಗರೀಮಾ ಹೋಮ್ಸ್ ಮತ್ತು ಫಾರ್ಮ್ ಹೌಸ್ ಹೆಸರಲ್ಲಿ ವಂಚನೆ ಮಾಡಲಾಗಿದೆ. ಇಲ್ಲಿನ ದೇಶಪಾಂಡೆ ನಗರದಲ್ಲಿ ಸಂಸ್ಥೆಯ ಕಚೇರಿ ಆರಂಭಿಸಲಾಗಿತ್ತು. ಕಂತುಗಳಲ್ಲಿ ಹಣ ನೀಡಿ ನಿವೇಶನ, ಮನೆಯ ಮಾಲಿಕರಾಗಿ ಎಂದು ನಂಬಿಸಲಾಗುತಿತ್ತು. ಜತೆಗೆ ಹೂಡಿಕೆ ಹಣ ದುಪ್ಪಟ್ಟು ಹಾಗೂ ಹೆಚ್ಚು ಹೂಡಿಕೆ ಮಾಡಿದವರಿಗೆ ಕಮಿಷನ್ ರೂಪದಲ್ಲಿ ಬೈಕ್, ಕಾರು ಇತರೆ ವಸ್ತುಗಳ ಕೊಡುಗೆ ಆಮಿಷ ತೋರಿಸಲಾಗುತಿತ್ತು.
ಇದನ್ನೂ ಓದಿ:ತಾಯಿ ‘ಇವರೇ ನಿಮ್ಮ ತಂದೆ’ ಎಂದರೆ ಸಾಕ್ಷಿ ಕೇಳಲ್ಲ: ಸಿದ್ದರಾಮಯ್ಯಗೆ ಸಿ.ಟಿ.ರವಿ ಟಾಂಗ್
ಹುಬ್ಬಳ್ಳಿ-ಧಾರವಾಡದಲ್ಲೇ ಅಂದಾಜು 40-60 ಕೋಟಿ ರೂ.ಸೇರಿದಂತೆ ರಾಯಚೂರು ಜಿಲ್ಲೆಯ ಲಿಂಗಸೂಗೂರು, ಉತ್ತರ ಕನ್ನಡ ಜಿಲ್ಲೆಯ ದಾಡೇಲಿ, ಬೆಳಗಾವಿ ಸೇರಿದಂತೆ ಅಂದಾಜು 100-120 ಕೋಟಿ ರೂ.ವಂಚಿಸಲಾಗಿದೆ ಎಂದುಆರೋಪಿಸಲಾಗಿದೆ.
ವಿಶೇಷವಾಗಿ ಮಹಿಳೆಯರನ್ನು ನಂಬಿಸುವ ಮೂಲಕ ಹಣ ಹೂಡಿಕೆ ಮಾಡುವಂತೆ ಮಾಡಲಾಗುತ್ತಿತ್ತು. ಎರಡು ವರ್ಷಗಳಿಂದ ಹುಬ್ಬಳ್ಳಿ ಕಚೇರಿಗೆ ಬೀಗ ಹಾಕಲಾಗಿತ್ತು. ಇದರಿಂದ ಆತಂಕಗೊಂಡ ಹೂಡಿಕೆದಾರರು ಹಾಗೂ ಏಜೆಂಟರು ದೂರು ದಾಖಲಿಸಿದ್ದರು.
ಪ್ರಕರಣ ಕುರಿತು ಮಾತನಾಡಿದ ದೂರುದಾರರಲ್ಲಿ ಒಬ್ಬರಾದ ಕಿಶೋರ ಶೆಟ್ಟಿ, ತಮ್ಮ ಪತ್ನಿ ಅಂದಾಜು 9 ಲಕ್ಷ ರೂ.ನಷ್ಟು ಹೂಡಿಕೆ ಮಾಡಿದ್ದಾರೆ. ಇದರಂತೆ ಅನೇಕರು ವಂಚನೆಗೆ ಒಳಗಾಗಿದ್ದಾರೆ. ಎರಡು ವರ್ಷಗಳಿಂದ ಹುಡುಕುತ್ತಿದ್ದರೂ ವಂಚಕ ದೊರಕಿರಲಿಲ್ಲ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಸಂಸ್ಥೆ ರಾಜಸ್ಥಾನ ದ ಡೋಲ್ ಪುರದ್ದಾಗಿದ್ದು, ಅಲ್ಲಿನ ಬಿಜೆಪಿ ಶಾಸಕಿಯಿಬ್ಬರಿಗೆ ಸೇರಿದ್ದಾಗಿದೆ ಎಂದು ಅವರು ತಿಳಿಸಿದರು.
ಉಪನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ