ಹಾವೇರಿ: ರೈತರಿಂದ ಹೂವು ಖರೀದಿಸುವಾಗ ನಗರದ ಹೂವಿನ ವ್ಯಾಪಾರಸ್ಥರು ತೂಕದಲ್ಲಿ ಭಾರಿ ವಂಚನೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿದೆ.
ರೈತರು ಕಷ್ಟಪಟ್ಟು ಹೂವು ಬೆಳೆದು ಮಾರುಕಟ್ಟೆಗೆ ತಂದರೆ, ವ್ಯಾಪಾರಸ್ಥರು ಎಲೆಕ್ಟ್ರಾನಿಕ್ ತೂಕದ ಯಂತ್ರ ಬಳಸದೇ ಕೈತೂಕ ಬಳಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ತೂಕದಲ್ಲಿ ಮೋಸ ಮಾಡದಂತೆ ಈ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ವ್ಯಾಪಾರಸ್ಥರು ತಮ್ಮ ಹಳೆ ಚಾಳಿ ಮುಂದುವರಿಸಿಕೊಂಡು ಬಂದಿರುವುದು ಹೂ ಬೆಳೆಗಾರರ ಆಕ್ರೋಶಕ್ಕೆ ಗುರಿಯಾಗಿದೆ.
ನಗರದ ಜಿಲ್ಲಾಸ್ಪತ್ರೆ ಎದುರಿಗಿರುವ ಹೂವಿನ ವ್ಯಾಪಾರಿಗಳು ವಿದ್ಯುನ್ಮಾನ ತೂಕದ ಯಂತ್ರ ಹಾಗೂ ಕಲ್ಲಿನ ತೂಕದ ತಕ್ಕಡಿ ಎರಡನ್ನೂ ಹೊಂದಿದ್ದಾರೆ. ಎಪಿಎಂಸಿ ಅಕಾರಿಗಳು ಭೇಟಿ ನೀಡಿದಾಗೊಮ್ಮೆ ವಿದ್ಯುನ್ಮಾನ ಯಂತ್ರ ಬಳಸುವ ವ್ಯಾಪಾರಸ್ಥರು, ನಿತ್ಯ ಕಲ್ಲಿನ ತಕ್ಕಡಿ ಬಳಸುತ್ತಾರೆ. ರೈತರು ಹೊಲದಲ್ಲಿ ಕಟಾವು ಮಾಡಿ ವಿದ್ಯುನ್ಮಾನ ಯಂತ್ರದಲ್ಲಿ ತೂಗಿ ನೋಡಿದಾಗ 20 ಕೆಜಿ. ಇದ್ದ ಹೂವು ವ್ಯಾಪಾರಸ್ಥರ ಕಲ್ಲಿನ ತೂಕಕ್ಕೆ ಹಾಕಿದಾಗ 12-15 ಕೆ.ಜಿ. ತೂಗುತ್ತದೆ. ಪ್ರತಿ ತೂಕದಲ್ಲಿ ಐದರಿಂದ ಎಂಟು ಕೆಜಿ ವ್ಯತ್ಯಾಸವಾಗುವ ಮೂಲಕ ರೈತರಿಗೆ ಅನ್ಯಾಯವಾಗುತ್ತಿದೆ ಎಂಬುದು ರೈತರ ಆರೋಪ.
ಹೂವು ಖರೀದಿಸದ ಬೆದರಿಕೆ: ರೈತರಿಗೆ ಬಹಿರಂಗವಾಗಿಯೇ ಮೋಸ ನಡೆಯುತ್ತಿದ್ದರೂ ತೂಕ ಮಾಪನ ಇಲಾಖೆಯವರು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನು ಈ ಮೋಸದ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ವ್ಯಾಪಾರಸ್ಥರು ಅಂಥವರ ಹೂವು ಖರೀದಿ ಮಾಡುವುದಿಲ್ಲ ಎಂಬ ಬೆದರಿಕೆ ಹಾಕುತ್ತಾರೆ. ಕೆಲ ರೈತರು ಹೂವು ಮಾರಾಟವಾಗದಿದ್ದರೆ ಬಾಡಿ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಅವರು ತೂಗಿ ಹೇಳಿದಷ್ಟು ಹೂವಿನ ಹಣ ಪಡೆದು ಮರಳುತ್ತಾರೆ.
ಕೂಡಲೇ ಇಲ್ಲಿನ ಹೂವಿನ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿ ಅಲ್ಲಿ ಪಾರದರ್ಶಕವಾಗಿ ವ್ಯಾಪಾರ ನಡೆಯುವಂತೆ ಮಾಡಬೇಕು. ಇಲ್ಲವೇ ಇಲ್ಲಿಯೇ ಎಪಿಎಂಸಿಯ ಸಿಬ್ಬಂದಿ ನೇಮಕಗೊಳಿಸಿ ರೈತರಿಗೆ ಆಗುತ್ತಿರುವ ಮೋಸ ತಡೆಯಬೇಕು ಎಂಬುದು ರೈತರ ಆಗ್ರಹವಾಗಿದೆ.
ಅಧಿಕಾರಿಗಳು ಬಂದಾಗೊಮ್ಮೆ ಮೋಸ ಬಂದ್: ರೈತರ ದೂರು ಕೇಳಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಾಗಲೊಮ್ಮೆ ರೈತರಿಗೆ ತೂಕದಲ್ಲಿ ಮಾಡುವ ಮೋಸ ನಿಲ್ಲುತ್ತದೆ. ದಿನಗಳೆದಂತೆ ಮತ್ತೆ ಮೋಸದ ತೂಕ ತಲೆ ಎತ್ತಿಕೊಳ್ಳುತ್ತದೆ. ಅಧಿಕಾರಿಗಳು, ಎಪಿಎಂಸಿ ಅಧ್ಯಕ್ಷರು ಬಂದಾಗ ವಿದ್ಯುನ್ಮಾನ ಯಂತ್ರ ಬಳಕೆ ಮಾಡಿ ತೋರಿಸುವ ವ್ಯಾಪಾರಸ್ಥರು ಅವರು ಹೋದ ಬಳಿಕ ಮತ್ತೆ ಕೈ ತಕ್ಕಡಿ ಕೈಗೆ ಹಿಡಿಯುತ್ತಾರೆ.
ರೈತರ ದೂರಿನನ್ವಯ ಇತ್ತೀಚೆಗೆ ಮತ್ತೆ ಎಪಿಎಂಸಿ ಅಧಿಕಾರಿಗಳು ಹೂ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದ್ದು ವ್ಯಾಪಾರಸ್ಥರು ಅವರ ಆದೇಶ ಎಷ್ಟು ದಿನ ಪಾಲಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
•ಎಚ್.ಕೆ. ನಟರಾಜ