ಕಲಬುರಗಿ: ಜಿಲ್ಲೆಯ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಇಪಿಎಫ್, ಇಎಸ್‌ಐ ಹಣ ತುಂಬದೆ ಮೋಸ ಮಾಡಿದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ನೇರ ನೇಮಕಾತಿಯಿಂದ ಕೆಲಸ ಕಳೆದುಕೊಂಡ ಕಾರ್ಮಿಕರನ್ನು ಪುನಃ ಸೇವೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊಗುತ್ತಿಗೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಸೋಮವಾರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ನೌಕರರ ಇಪಿಎಫ್, ಇಎಸ್‌ಐ ಹಣ ತುಂಬುವುಕ್ಕೆ ಕೌಶಲ್ಯ ಮ್ಯಾನ್ ಪವರ್ ಏಜೆನ್ಸಿಗೆ ಟೆಂಡರ್ ನೀಡಲಾಗಿತ್ತು. ಆದರೆ, ಏಜೆನ್ಸಿಯವರು ಅಧಿಕಾರಿಗಳೊಂದಿಗೆ ಸೇರಿಕೊಂಡು ನೌಕರರ ಹಣ ಕಟ್ಟದೆ ವಂಚಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ನೇರ ನೇಮಕಾತಿಯಾಗಿ ವಸತಿ ಶಾಲೆಗಳ ನೌಕರರು ಮತ್ತು ಬಿಸಿಎಂ ಇಲಾಖೆ ನೌಕರರು ಕೆಲಸ ಕಳೆದುಕೊಂಡಿದ್ದು, ಮೂರು ತಿಂಗಳಿಂದ ಮತ್ತೆ ಸೇವೆಯಲ್ಲಿ ಮುಂದುವರಿಸುವಂತೆ ಮನವಿ ಮಾಡುತ್ತಿದ್ದಾರೆ. ನೌಕರರ ಬಗ್ಗೆ ಅಧಿಕಾರಿಗಳಳು ಕನಿಕರ ತೋರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದು
ಖಂಡನೀಯವಾಗಿದ್ದು, ಕೆಲಸ ಕಳೆದುಕೊಂಡ ನೌಕರರನ್ನು ಕೂಡಲೇ ಪುನಃ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೋಡ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ನಾಲ್ವರು ಮಹಿಳೆಯರ ಮೇಲೆ ಸುಳ್ಳು ಆರೋಪ ಹೊರಿಸಿ ಕೆಲಸದಿಂದ ತೆಗೆದು ಹಾಕಲಾಗಿದೆ. ಇದನ್ನು ಖಂಡಿಸಿ ಹೋರಾಟ ಮಾಡಿದಾಗ ಜಂಟಿ ನಿರ್ದೇಶಕರು, ತಾಲೂಕು ಅಧಿಕಾರಿಗಳು ಒಂದು ವಾರದಲ್ಲಿ ಅವರನ್ನು ಸೇವೆಯಲ್ಲಿ ಮುಂದುವರಿಸುವುದಾಗಿ ಭರವಸೆ ನೀಡಿದ್ದರು. ಆದರೂ, ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಜಿಒ ಕಾಲೋನಿ ಅಲ್ಪಸಂಖ್ಯಾತರ ಬಾಲಕಿಯರ ವಸತಿ ನಿಲಯದ ವಾರ್ಡನ್ ಹಣ ದುರುಪಯೋಗ ಪಡಿಸಿಕೊಂಡಿದ್ದು, ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಠಾರೆ, ಸುಭಾಷ ಬೆಡಸೂರ, ಸುರೇಶ ದೊಡ್ಡಮನಿ, ಪರಶುರಾಮ ಜೇವರ್ಗಿ, ರೇಣುಕಾ ಸಂಗೊಳಗಿ, ಫಾತಿಮಾ ಬೇಗಂ, ನಾಗರಾಜ ಕಾಳಗಿ, ಪರಮೇಶ್ವರ ಹೈಬತ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.