ಹಬ್ಬದ ಹಂಗಾಮು ಶುರುವಾದರೆ ಸಾಕು. ಎಲ್ಲೆಡೆಗೂ ಸೇಲ್ ಸೇಲ್ ಎನ್ನುವ ಬೋರ್ಡ್‌ಗಳೇ ರಾರಾಜಿಸುತ್ತವೆ. ಒಮ್ಮೆ ಏನಿದೆ ನೋಡೋಣ ಎಂದು ಒಳಗೆ ಕಾಲಿಟ್ಟ ನಂತರ, ನಾವು ಖರೀದಿಸಿದರೂ, ಬರಿಗೈಲೇ ವಾಪಸ್ ಬಂದರೂ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ.
ಜೀವನ ಚಕ್ರದ ಅಗತ್ಯಗಳನ್ನು ಅರಿಯುವುದು ಅಂದರೆ ನಮ್ಮ ಇಡೀ ಬದುಕಿಗೆ ಒಂದು ನಿರ್ದಿಷ್ಟ ಚೌಕಟ್ಟು ಹಾಕಿಕೊಂಡು ನೋಡಿದ ಹಾಗೆ. ಜೀವನದಲ್ಲಿ ಏನೇನು ಖರ್ಚುಗಳು ಬರುತ್ತವೆ ಎಂದು ಮೊದಲೇ ಗೊತ್ತಿರುತ್ತದೆ, ಅದಕ್ಕೆ ಸಿದ್ಧವಾದರೆ ಆಯಿತು. ಶಾಲೆ, ಕಾಲೇಜಿಗೆ ಹೋಗುವ ಪ್ರತಿ ವಿದ್ಯಾರ್ಥಿಗೂ ಪರೀಕ್ಷೆ ಇದೆ ಎಂದು ಗೊತ್ತು. ಆದರೂ ಪ್ರತಿಯೊಬ್ಬರೂ ಪರೀಕ್ಷೆ ಹತ್ತಿರ ಬಂದಾಗ. ಇನ್ನೇನು ನಾಳೆಯೇ ಪರೀಕ್ಷೆ ಇದೆ ಎಂದಾಗ ಇಡೀ ರಾತ್ರಿ ಓದುತ್ತಾರೆ. ಆದರೆ ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಮೊದಲಿನಿಂದಲೂ ಓದುತ್ತಿರುತ್ತಾರೆ. ಪರೀಕ್ಷೆಗೆ ಸರಿಯಾದ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅಂಥ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದುತ್ತಾರೆ. ನಾವು ಮಕ್ಕಳಿಗೆ ಮೊದಲಿನಿಂದ ಓದು, ಕೊನೇ ಕ್ಷಣದಲ್ಲಿ ಓದಬೇಡ, ಪರೀಕ್ಷೆಗೆ ಸಿದ್ಧತೆ ಮಾಡಿಕೋ. ಹೀಗಾದಾಗ ಪರೀಕ್ಷೆ ಬಂದಾಗ ಟೆನÒನ್ ಇರುವುದಿಲ್ಲ. ನಿರಾಳವಾಗಿ ಪರೀಕ್ಷೆ ಎದುರಿಸಬಹುದು ಎಂದೆಲ್ಲ ಹೇಳುತ್ತೇವೆ. ಆದರೆ ಜೀವನದಲ್ಲಿ ನಾವೂ ಇದೇ ರೀತಿಯ ಸಿದ್ದತೆ ಮಾಡಿಕೊಳ್ಳುವುದಕ್ಕೆ ಸೋಲುತ್ತೇವೆ. ನಮಗೆಲ್ಲರಿಗೂ ಬದುಕಿನಲ್ಲಿ ಎದುರಾಗುವ ನಿರೀಕ್ಷಿ$ತ ವೆಚ್ಚಗಳು ಏನೇನು ಎನ್ನುವುದು ಗೊತ್ತಿರುತ್ತದೆ. ಆದರೂ ಅದು ಬರುವವರೆಗೂ ನಮ್ಮ ಗಮನಕ್ಕೇ ಬರಲಿಲ್ಲ ಎನ್ನುವಂತೆ ಇರುತ್ತೇವೆ. ಉದಾಹರಣೆಗೆ ಮಕ್ಕಳ ಓದು, ನಮ್ಮ ನಿವೃತ್ತಿ, ವಯಸ್ಸಾದ ಕಾಲಕ್ಕೆ ಅನಾರೋಗ್ಯ ಹೀಗೆ ಇದನ್ನೆಲ್ಲ, ಮೊದಲೇ ನಿರೀಕ್ಷಿಸಿ ಅದಕ್ಕೆ ತಕ್ಕ ಹಾಗೆ ಯೋಜನೆ ರೂಪಿಸಿಸಿ ಕೊಂಡು ಬದುಕಿದಾಗ ಮಾತ್ರ ಎಂಥದೇ ಸಂಕಷ್ಟದ ಪರಿಸ್ಥಿತಿ ಎದುರಾದರೂ ಧೈರ್ಯದಿಂದ ಎದುರಿಸುವುದು ಸುಲಭ.
ನಮಗೇನೋ ಉಳಿಸಬೇಕು ಖರ್ಚು ಕಡಿಮೆ ಮಾಡಬೇಕು ಎನ್ನುವ ಆಸೆ ಇದೆ ಆದರೆ ಏನು ಮಾಡುವುದು ಹೊರಗೆ ಬರೀ ಸೇಲ್ ಗಳೇ ರಾರಾಜಿಸುತ್ತವೆ. ಒಂದು ಕೊಂಡರೆ ಎರಡು ಉಚಿತ ಎನ್ನುವಷ್ಟರ ಮಟ್ಟಿಗೆ ಕೊಡುಗೆಗಳು. ಇಂತಹ ಕೊಡುಗೆಗಳಿಗೆ ಮನಸ್ಸು ಟೆಂಪ್ಟ್ ಆಗುವುದು ಸಹಜ. ನನಗೇನೂ ಬೇಕಿರಲಿಲ್ಲ. ಹೇಗೂ ಬಂದಿದ್ದೇವೆ ಒಮ್ಮೆ ಹಣಕಿ ಹಾಕೋಣ ಅಂತಾ ಹೋದೆ. ತುಂಬಾ ಚೆನ್ನಾಗಿತ್ತು. ತಂದು ಬಿಟ್ಟೆ ಅದರಿಂದ ನನಗೆ ನಷ್ಟ ಆಗಲಿಲ್ಲ. ಮುಂದಿನ ವರ್ಷಕ್ಕೆ ಆಗತ್ತೆ, ನಮ್ಮ ಅಣ್ಣನ ಮಗನಿಗೆ ಹುಡುಗಿ ನೋಡುತ್ತಿದ್ದಾರೆ, ಮದುವೆ ಆದರೆ ಬೇಕಲ್ಲಾ… ಅಗತ್ಯವಿಲ್ಲದಿದ್ದರೂ ಒಂದು ವಸ್ತುವನ್ನೂ ಖರೀದಿಸಿದ ನಂತರ ಹಲವರು ಹೀಗೆಲ್ಲಾ ತಮ್ಮ ಖರೀದಯನ್ನೂ ಲಾಜಿಕ್ ಆಗಿ ಸಮರ್ಥಿಸಿಕೊಳ್ಳುತ್ತಾರೆ. ಇಷ್ಟು ಒಳ್ಳೇದು ಇಷ್ಟು ಅಗ್ಗಕ್ಕೆ ಎಲ್ಲಿ ಸಿಗತ್ತೆ ಹೇಳಿ.? ಸಿಕ್ಕಾಗ ತಂದುಕೊಳ್ಳಬೇಕು. ಆಮೇಲೆ ಮತ್ತೆ ಹುಡುಕುತ್ತ ಹೋಗುವುದು ತಪ್ಪತ್ತೆ. ಹೀಗೆಲ್ಲಾ ಅವರ ಮಾತಿನ ವರಸೆ ಶುರುವಾಗುತ್ತದೆ.
ನಮಗೆ ಬೇಕೋ ಬೇಡವೋ ಎನ್ನುವುದನ್ನು ಅರಿಯದೇ ಕೊಳ್ಳುವುದಕ್ಕೆ ಮುಗಿ ಬೀಳುವುದು ನಮ್ಮ ದೌರ್ಬಲ್ಯ.. ಅಗ್ಗಕ್ಕೆ ಸಿಗತ್ತೆ ಎಂದು ಯಾರಾದರೂ ಆನೆ ಕೊಳ್ಳುತ್ತಾರಾ? ಆನೆ ಸಿಕ್ಕರೂ ಅದನ್ನು ನೋಡಿಕೊಳ್ಳಲು ಬೀಳುವ ವೆಚ್ಚದ ಬಗೆಗೆ ಯೋಚಿಸಬೇಕಲ್ಲಾ. ಬೇಕೋ ಬೇಡವೋ ಖರೀದಿಸುವುದು ಅಭ್ಯಾಸವಾದರೆ ಅದೇ ಅಭ್ಯಾಸ ನಮ್ಮ ಮಕ್ಕಳಿಗೂ ಆಗುತ್ತದೆ. ನಮಗೇ ಉಳಿತಾಯ ಮಾಡಬೇಕೆಂಬುದು ಅರಿವಿರದಿದ್ದರೆ ನಮ್ಮ ಮಕ್ಕಳು ಹೇಗೆ ಇದನ್ನು ಅನುಸರಿಸುತ್ತಾರೆ. ಹೀಗಾದಾಗ ನಮಗೆ ಕಷ್ಟ ಕಾಲದಲ್ಲಿ ಹಣ ನಮ್ಮ ಕೈಯ್ಯಲ್ಲಿ ಇರುವುದಿಲ್ಲ. ಹಣ ಉಳಿಸುವುದು ಎಂದರೆ ಕಂಜೂಸ್‌ಥರ ಬದುಕುವುದು ಎಂದು ಅಲ್ಲವೇ ಅಲ್ಲ. ಕಂಜೂಸ್ ತನಕ್ಕೂ ಉಳಿತಾಯಕ್ಕೂ ಅಂತರವಿದೆ.
ಯಾವುದು ವ್ಯರ್ಥವಾದ ಖರ್ಚು, ಯಾವುದು ಅಲ್ಲ ಎನ್ನುವ ವಿವೇಕಯುತವಾದ ತಿಳಿವಳಿಕೆ ಬಹಳ ಮುಖ್ಯ. ಕೇವಲ ಅರಿವಿದ್ದರೆ ಆಗಲಿಲ್ಲ. ಆಚರಣೆಗೂ ಬರಬೇಕು. ಹಲವರಿಗೆ ಗೊತ್ತು ನನಗೆ ಈ ವಸ್ತು ಬೇಡ ಎಂದು, ಆದರೂ ಎಲ್ಲರೂ ಕೊಳ್ಳುವಾಗ, ಅಂಗಡಿಯಲ್ಲಿ ನೋಡಿದಾಗ, ಖರೀದಿಸಬೇಕೆಂದು ಮುನ್ನುಗ್ಗುತ್ತಾರೆ. ಇದು ಒಂದು ಆರ್ಥಿಕ ಶಿಸ್ತು ಮಾತ್ರವಲ್ಲ. ಮಾನಸಿಕ ಶಿಸ್ತು ಕೂಡ. ಇಂತಹ ಮಾನಸಿಕ ಶಿಸ್ತು ಇರದಿದ್ದರೆ; ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮನಸ್ಸಿನ ಇಂತಹ ಶಿಸ್ತಿಗೆ ನಾವು ಸರಿ ತಪ್ಪುಗಳ ವಿವೇಚನೆ ಮಾಡಲೇ ಬೇಕು. ಸರಳವಾದ ಆಲೋಚನೆ, ಸರಳವಾದ ಜೀವನ ಇದ್ದಾಗ ಯಾವುದೇ ಒತ್ತಡವೂ ಇರುವುದಿಲ್ಲ. ಯಾವಾಗ ನಾವು ಇತರರೊಡನೆ ಸ್ಪರ್ಧೆಗೆ ಇಳಿದು, ಪೈಪೋಟಿ ನಡೆಸಿ ಬೇರೆಯವರನ್ನು ಮೆಚ್ಚಿಸಲು. ಅವರೊಂದಿಗೆ ಹೋಲಿಸಿಕೊಳ್ಳುವ ಮನೋಭಾವನೆಯಲ್ಲಿ ಇರುತ್ತೇವೋ ಆಗ ನಮಗೆ ನೆಮ್ಮದಿ ಇರುವುದಿಲ್ಲ. ನಾವು ಏನನ್ನೇ ಕೊಳ್ಳುವುದು ನಮ್ಮ ಅಗತ್ಯಕ್ಕಾಗಾಗಿ, ಬೇರೆಯವರಿಗಾಗಿ ಅಲ್ಲ, ಇದನ್ನು ಅರಿಯದಿದ್ದರೆ ನಾವು ಕೊಳ್ಳುಬಾಕರಾಗುತ್ತೇವೆ. ಈ ಕೊಳ್ಳುಬಾಕತನದಿಂದ ನಮ್ಮ ಸಂತೋಷವನ್ನು ಕಳೆದುಕೊಳ್ಳುತ್ತೇವೆ.
ಸುಧಾಶರ್ಮ ಚವತಿ