Advertisement

ಚೀಪ್‌ ಆ್ಯಂಡ್‌ ಬೆಸ್ಟ್‌ ಸುಧೀಂದ್ರ ಭವನ್‌

11:43 AM May 28, 2019 | Sriram |

ರೇಷ್ಮೆಯ ತವರು ಎಂದು ಹೆಸರಾದ ಊರು ಶಿಡ್ಲಘಟ್ಟ, ಇಲ್ಲಿರುವ ಹುರಿ ಮಿಷನ್‌ಗಳಲ್ಲಿ ವಿವಿಧ ಜಿಲ್ಲೆ, ರಾಜ್ಯಗಳ ಜನರು ಕೆಲಸ ಮಾಡುತ್ತಿದ್ದಾರೆ. ರೈತರನ್ನೇ ಪ್ರಧಾನ ಗ್ರಾಹಕರೆಂದು ನಂಬಿಕೊಂಡು ನಡೆಯುತ್ತಿರುವ ಹೋಟೆಲ್ಲೇ ಸುಧೀಂದ್ರ ಭವನ್‌.

Advertisement

40 ವರ್ಷಗಳ ಹಿಂದೆ ಎಚ್‌.ಎನ್‌.ವಿಜಯಕುಮಾರ್‌ ಈ ಹೋಟೆಲ್‌ ಪ್ರಾರಂಭಿಸಿದರು. ಮೂಲತಃ ತೀರ್ಥಹಳ್ಳಿ ತಾಲೂಕಿನ ಹಲಸಿನಹಳ್ಳಿಯವರಾದ ಇವರು, 10ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಆ ವೇಳೆಗೆ ಶಿಡ್ಲಘಟ್ಟಕ್ಕೆ ಬಂದು ನೆಲೆಸಿದ್ದ ದೊಡ್ಡಪ್ಪ, ಉಡುಪಿಯ ಉದ್ಯಾವರದ ಯು.ಬಿ.ಕೃಷ್ಣಮೂರ್ತಿರಾವ್‌, ವಿಜಯಕುಮಾರ್‌ ಅವರನ್ನು ಕರೆತಂದು ವಿರೂಪಾಕ್ಷಪ್ಪ ಶಾಲೆ (ಈಗಿನ ಸರ್ಕಾರಿ ಜ್ಯೂನಿಯರ್‌ ಕಾಲೇಜು)ಗೆ ಸೇರಿಸಿದ್ದರು. ದೊಡ್ಡಪ್ಪನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವಿಜಯ್‌ಕುಮಾರ್‌, ಎಸ್ಸೆಸ್ಸೆಲ್ಸಿ ಮುಗಿಸಿದ ನಂತರ ಹೋಟೆಲ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಮುಂದೆ ಉಡುಪಿಯವರೇ ಆದ ಮೀರಾ ಅವರನ್ನು ಮದುವೆಯಾದ ನಂತರ ಕೋಟೆ ಸರ್ಕಲ್‌ನಲ್ಲಿ ಬಾಡಿಗೆ ಕಟ್ಟಡದಲ್ಲಿ ಚಿಕ್ಕದಾಗಿ ವಿಘ್ನೇಶ್ವರ ಭವನ್‌ ಎಂಬ ಹೋಟೆಲ್‌ ಪ್ರಾರಂಭಿಸಿದರು. ಸ್ವಲ್ಪ ವರ್ಷಗಳ ನಂತರ, ಹಳೆ ರೇಷ್ಮೆ ಮಾರುಕಟ್ಟೆ ಬಳಿಯ ಬಾಡಿಗೆ ಕಟ್ಟಡದಲ್ಲಿ ಪುತ್ರಿ ಸೌಮ್ಯಾ ಹೆಸರಲ್ಲಿ ಹೋಟೆಲ್‌ ಪ್ರಾರಂಭಿಸಿದರು. ನಂತರ, ಖಾಲಿ ಇದ್ದ ಜಾಗವನ್ನೇ ಖರೀದಿಸಿ ಸ್ವಂತ ಕಟ್ಟಡ ಕಟ್ಟಿ ಅದಕ್ಕೆ “ಸುಧೀಂದ್ರ ಭವನ್‌ ಎಂದು ಹೆಸರಿಟ್ಟರು. 2011ರಲ್ಲಿ ವಿಜಯಕುಮಾರ್‌ ನಿಧನರಾದ ನಂತರ ಪುತ್ರ ಎಚ್‌.ವಿ.ನಾಗೇಂದ್ರ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. ಫಾರ್ಮಸಿ ಮಾಡಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಾಗೇಂದ್ರ, ತಮ್ಮ ತಂದೆ ಕಷ್ಟಪಟ್ಟು ಕಟ್ಟಿ ಬೆಳೆಸಿದ ಹೋಟೆಲ್‌ ಬಿಡಲಾಗದೇ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಈಗ 15 ಜನರಿಗೆ ಉದ್ಯೋಗ ಕೊಟ್ಟು ಹೋಟೆಲ್‌ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಹೋಟೆಲ್‌ನ ತಿಂಡಿ:
ಇಡ್ಲಿ (ಮೂರು)21 ರೂ., ರವೆ ಇಡ್ಲಿ (ಎರಡು) 30 ರೂ., ಪೂರಿ (ಮೂರು )30 ರೂ., ಚಪಾತಿ (ಎರಡಕ್ಕೆ) 24 ರೂ., ಮಸಾಲೆ ದೋಸೆ, ಖಾಲಿ ದೋಸೆ(ಎರಡು), ಚೌಚೌ ಬಾತ್‌ ತಲಾ 30 ರೂ., ರೈಸ್‌ ಯಾವುದೇ ತೆಗೆದುಕೊಂಡ್ರೂ ದರ 25 ರೂ..

ದಿನಕ್ಕೊಂದು ಬಗೆಯ ಬಾತ್‌:
ಸೋಮವಾರ, ಗುರುವಾರ, ಶನಿವಾರ ಬಿಸಿ ಬೇಳೆಬಾತ್‌, ಚಿತ್ರಾನ್ನ. ಬುಧವಾರ ಪೊಂಗಲ್‌, ಭಾನುವಾರ ಪಲಾವ್‌, ಮಂಗಳವಾರ, ಶುಕ್ರವಾರ ಪುಳಿಯೋಗರೆ, ಟೊಮೆಟೋ ರೈಸ್‌ ಬಾತ್‌, àರೈಸ್‌, ಪುದೀನ ರೈಸ್‌ ಬಾತ್‌ ಸಿಗುತ್ತದೆ. ಎಲ್ಲದರ ದರ 30 ರೂ. ಮಾತ್ರ.

ಪ್ಲೇಟ್‌ ಊಟ ಮಾತ್ರ:
ಮುದ್ದೆ, ಪೂರಿ, ಚಪಾತಿ ಜೊತೆಗೆ ಅನ್ನ, ಸಾಂಬಾರ್‌, ರಸಂ, ಮಜ್ಜಿಗೆ, ಪಲ್ಯ, ಉಪ್ಪಿನಕಾಯಿ, ಹಪ್ಪಳ ಇಷ್ಟಕ್ಕೆ ದರ 40 ರೂ., ಅನ್ನ ಸಾಂಬಾರ್‌ ತೆಗೆದುಕೊಂಡರೆ ರಸಂ, ಉಪ್ಪಿನಕಾಯಿ ಸೇರಿ 25 ರೂ., ರಾಗಿ ಮುದ್ದೆ 1ಕ್ಕೆ 15 ರೂ., ಭಾನುವಾರ ಮಾತ್ರ ಊಟ ಇರುವುದಿಲ್ಲ.

Advertisement

ಹೋಟೆಲ್‌ ವಿಳಾಸ:
ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಎದುರು. ಶಿಡ್ಲಘಟ್ಟ.

ಹೋಟೆಲ್‌ ಸಮಯ:
ಬೆಳಗ್ಗೆ 6 ರಿಂದ ಸಂಜೆ 5ರವರೆಗೆ. ಜನವರಿ 26, ಆಗಸ್ಟ್‌ 15 ಮತ್ತು ಬಂದ್‌ ಇದ್ರೆ ಮಾತ್ರ ರಜೆ.

ಭೋಗೇಶ್‌ ಎಂ.ಆರ್‌.
ಚಿತ್ರಗಳು- ತಮೀಮ್‌ಪಾಷ

Advertisement

Udayavani is now on Telegram. Click here to join our channel and stay updated with the latest news.

Next