Advertisement

ಛಾಯಾಕಿರಣ ಮಾಸಿಕದ 3ನೇ ವಾರ್ಷಿಕೋತ್ಸವ,ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ

05:19 PM Apr 11, 2017 | |

ಮುಂಬಯಿ: ರಾಷ್ಟ್ರೀಯ ಮಹತ್ವವಿರುವ ಸುದ್ದಿಗಳು ಇಂದು ಪತ್ರಿಕೆಯಿಂದ ದೂರ ಸರಿಯುತ್ತಿದ್ದು, ಅಪರಾಧ ಸುದ್ದಿಗಳು ಹೆಚ್ಚು ರಾರಾಜಿಸುತ್ತಿರುವುದು ವಿಷಾದನೀಯ. ಕಳೆದ 30 ವರ್ಷಗಳ ಹಿಂದಿನ ಸುದ್ದಿಮಾದ್ಯಮಗಳಲ್ಲಿ ದೊರೆಯುತ್ತಿರುವ ಸುದ್ದಿಗಳು ಇಂದಿನ ಪತ್ರಿಕೆಗಳಲ್ಲಿ ಸಿಗುತ್ತಿಲ್ಲ. ಈಗಿನ ಪತ್ರಿಕೆಗಳನ್ನು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಬೆಳೆಸುತ್ತಾರೆಯೇ ಹೊರತು ಸಮಾಜ ಸುಧಾರಣೆಗೆ ಒತ್ತುಕೊಡುತ್ತಿರುವುದು ಬಹಳ ಕಡಿಮೆ ಎಂದು ಉತ್ಛ ನ್ಯಾಯಾಲಯದ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್‌ ಎಲ್‌. ಶೆಟ್ಟಿ ಅವರು ನುಡಿದರು.

Advertisement

ಎ. 9ರಂದು ಕಲ್ಯಾಣ್‌ ಪಶ್ಚಿಮದ ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಜರಗಿದ ಛಾಯಾಕಿರಣ ಕನ್ನಡ ಮಾಸಿಕದ ಮೂರನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಪತ್ರಿಕೆಯ ಸಂಪಾದಕೀಯವು ಆ ಪತ್ರಿಕೆಯ ಸ್ಥಾನಮಾನವನ್ನು ಉಳಿಸುತ್ತದೆ ಹಾಗೂ ಬೆಳೆಸುತ್ತದೆ. ಸಂಪಾದಕೀಯವು ಸಮಾಜಕ್ಕೆ ಪೂರಕವಾದ ರೀತಿಯಿಂದ ಇರಬೇಕು. ಪತ್ರಕರ್ತ ಪ್ರಕಾಶ್‌ ಕುಂಠಿನಿಯವರು ಕಳೆದ ಮೂರು ವರ್ಷಗಳ ಪರಿಶ್ರಮದಿಂದ ಛಾಯಾಕಿರಣ ಮಾಸಿಕವನ್ನು ವ್ಯವಸ್ಥಿತ ರೀತಿಯಲ್ಲಿ ತುಳು-ಕನ್ನಡಿಗರಿಗೆ ಅದರ ಕಂಪನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಿರಲಿ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರನ್ನು ಗುರುತಿಸಿ ಮಾಧ್ಯಮಶ್ರೀ ಪ್ರಶಸ್ತಿಯನ್ನು ನೀಡಿರುವುದು ಅಭಿನಂದನೀಯ. ಅವರು ಈ ಪ್ರಶಸ್ತಿಗೆ ಅರ್ಹವಾದ ವ್ಯಕ್ತಿಯಾಗಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಛಾಯಾಕಿರಣ ಪತ್ರಿಕೆ ಸೇರಿದಂತೆ ಮಾಸಪತ್ರಿಕೆಗಳು ಸುದ್ದಿಗಿಂತ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇದು ಸುದ್ದಿಪತ್ರಿಕೆಯಲ್ಲಿ ಇಲ್ಲ. ಇಂತಹ ಪತ್ರಿಕೆಗಳು ಲೇಖಕರನ್ನು ಬೆಳೆಸುತ್ತದೆ. ಛಾಯಾಕಿರಣ ಪತ್ರಿಕೆಯು ಮುಂಬಯಿಯ ಉದಯೋನ್ಮುಖ ಸಾಹಿತಿಗಳ ಪರಿಚಯವನ್ನು ಮಾಡುತ್ತಿದೆ. ಪತ್ರಿಕೆ ಮತ್ತು ಓದುಗರ ನಡುವೆ  ಉತ್ತಮ ಸಂಬಂಧ ಬೆಳೆದಾಗ ಮಾತ್ರ ಆ ಪತ್ರಿಕೆಯು ಬೆಳೆಯಲು ಸಾಧ್ಯವಿದೆ. ಈ ಪತ್ರಿಕೆ ಈಗ ಮೂರು ವರ್ಷದ ಮಗುವಾಗಿದ್ದು, ಅದನ್ನು ಬೆಳೆಸಬೇಕಾದುದು ಓದುಗರ, ಲೇಖಕರ ಕರ್ತವ್ಯವವಾಗಿದೆ ಎಂದರು.

ಪತ್ರಿಕೆಯ ಗೌರವ ಸಂಪಾದಕ ಸಾಹಿತಿ ಬಿ. ಎಸ್‌. ಕುರ್ಕಾಲ್‌ ಅವರು ಮಾತನಾಡಿ, ಇದು ನಮ್ಮೆಲ್ಲರ ಪತ್ರಿಕೆ. ಇದನ್ನು ನಾವೆಲ್ಲರೂ ಸೇರಿ ಬೆಳೆಸಬೇಕು. ಮೂರು ವರ್ಷದ ಈ ಕೂಸು ನೂರು ವರ್ಷ ಸಾಗಲಿ. ಸಮಾಜಕ್ಕೆ ಇದರ ಪ್ರಯೋಜನ ನಿರಂತರ ದೊರೆಯಲಿ. ಪತ್ರಕರ್ತ ಪ್ರಕಾಶ್‌ ಕುಂಠಿನಿ ಅವರ ಈ ಕಾರ್ಯಕ್ಕೆ ನಾವೆಲ್ಲರೂ ಪ್ರೋತ್ಸಾಹಿಸೋಣ ಎಂದರು. ಸಮಾರಂಭದಲ್ಲಿ ಛಾಯಾಕಿರಣ ನೀಡುವ ಮಾಧ್ಯಮಶ್ರೀ ಪ್ರಶಸ್ತಿಯನ್ನು ಮುಂಬಯಿಯ ಹಿರಿಯ ಪತ್ರಕರ್ತ ಮುಂಬಯಿ ನ್ಯೂಸ್‌ ಇದರ  ಸುದ್ದಿ ಸಂಪಾದಕ  ಹೇಮರಾಜ್‌ ಕರ್ಕೇರ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು.

ಪತ್ರಿಕೆಯ ಸಂಪಾದಕ ಪ್ರಕಾಶ್‌ ಕುಂಠಿನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಅನಿರೀಕ್ಷಿತವಾಗಿ ಮಾಡಿದಂತಹ ಪತ್ರಿಕೆ ಇದಾಗಿದೆ. ಪತ್ರಿಕಾರಂಗದಲ್ಲಿ 25 ವರ್ಷಗಳ ಅನುಭವವಿದ್ದರೂ ನಾನೊಂದು ಪತ್ರಿಕೆಯನ್ನು ಆರಂಭಿಸುತ್ತೇನೆ ಎಂದು ಎಣಿಸಿರಲಿಲ್ಲ. ಆದರೆ ನನ್ನಲ್ಲಿ ಛಲವಿತ್ತು. ಆ ಛಲದ ಫಲಿತಾಂಶ ಇಂದು ಸಿಕ್ಕಿದೆ. ಪತ್ರಿಕೆಯ ಮೂರನೇ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಎಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಈ ಸಂದರ್ಭದಲ್ಲಿ ಓರ್ವ ಪತ್ರಕರ್ತನನ್ನು ಮಾಧ್ಯಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ನಿಶ್ಚಯಿಸಿದ್ದೆ. ಮಹಾನಗರದಲ್ಲಿ 25 ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ಮುಂಬಯಿ ನ್ಯೂಸ್‌ ಸುದ್ದಿ 

Advertisement

ಸಂಪಾದಕರಾಗಿ ಹೆಸರುವಾಸಿಯಾಗಿರುವ ಹೇಮರಾಜ್‌ ಕರ್ಕೇರ ಅವರನ್ನು ಗೌರವಿಸಲು ಅರ್ಹವಾದ ವ್ಯಕ್ತಿ ಎಂದು ತಿಳಿದು, ಆಯ್ಕೆಮಾಡಿ ಸಮ್ಮಾನಿಸಿದ್ದೇವೆ. ಮುಂದೆ ಪ್ರಶಸ್ತಿಯ ಮೊತ್ತವನ್ನು ದ್ವಿಗುಣಗೊಳಿಸಲಾಗುವುದು. ಪ್ರಶಸ್ತಿ ಪಡೆದ ಹೇಮರಾಜ್‌ ಕರ್ಕೇರ ಅವರ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ನುಡಿದು ಶುಭ ಹಾರೈಸಿದರು.

ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕೆಯ ಉಪಸಂಪಾದಕಿ ಜ್ಯೋತಿ ಪ್ರಕಾಶ್‌ ಕುಂಠಿನಿ ಅವರು ಕೃತಜ್ಞತಾ ಪತ್ರವನ್ನು ವಾಚಿಸಿ ವಂದಿಸಿದರು. ಪ್ರಾರಂಭದಲ್ಲಿ ಕವಿಗೋಷ್ಠಿ ನಡೆಯಿತು. ಪತ್ರಿಕೆಯ ಸಹಾಯಕ ಸಂಪಾದಕಿ ಶಾಲಿನಿ ಅಜೆಕಾರು ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು. 

ಇದೇ ಸಂದರ್ಭದಲ್ಲಿ ಪತ್ರಿಕೆಯ ಅಭಿವೃದ್ಧಿಗೆ ಸಹಕರಿಸಿದ ಉದ್ಯಮಿಗಳಾದ ಡಾ| ಸುರೇಂದ್ರ ವಿ. ಶೆಟ್ಟಿ, ಪ್ರಭಾಕರ ಜಿ. ಶೆಟ್ಟಿ, ಗುರುದೇವ್‌ ಭಾಸ್ಕರ್‌ ಶೆಟ್ಟಿ, ಟಿ. ಎಸ್‌. ಉಪಾಧ್ಯಾಯ, ಸತೀಶ್‌ ಎನ್‌. ಶೆಟ್ಟಿ, ನಗರ ಸೇವಕ ದಯಾಶಂಕರ್‌ ಪಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.  ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next