ಕಾಸರಗೋಡು, ಮೇ 9: ಜನಜಾಗೃತಿ ಮೂಡಿಸುವಲ್ಲಿ ವಿಭಿನ್ನ ಹಾದಿಯನ್ನು ಸ್ವೀಕರಿಸಿದ ಚೆರುವತ್ತೂರು ಗ್ರಾಮದ ಜನತೆಯದ್ದು ವಿಭಿನ್ನ ಶೈಲಿ. ಸ್ಥಳೀಯ ಗ್ರಾ. ಪಂ. ಮತ್ತು ಆರೋಗ್ಯ ಇಲಾಖೆಗಳು ಈ ಯತ್ನಕ್ಕೆ ಹೆಗಲು ನೀಡಿವೆ.
ಮಣ್ಣು, ಜಲ, ವಾಯು ಮತ್ತು ಮನುಷ್ಯನನ್ನು ರೋಗ ಮುಕ್ತವಾಗಿಸುವಲ್ಲಿ ಗಂಭೀರ ಚಿಂತನೆ ನಡೆಸುವ ನಿಟ್ಟಿನಲ್ಲಿ ವಾರಕ್ಕೊಮ್ಮೆ ಈ ಗ್ರಾಮ ಪಂಚಾಯತ್‌ನ ಯಾವುದಾದರೂ ಒಂದು ಮನೆಯಲ್ಲಿ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಲಾಗುತ್ತಿದೆ. ಇದನ್ನು ‘ಕೋಲಾಯ ಕೂಟ್ಟಂ’ (ಚಾವಡಿ ಕೂಟ) ಎಂದು ಕರೆಯಲಾಗುತ್ತಿದೆ.
ಮನೆಯಂಗಳವೊಂದನ್ನು ಆರೋಗ್ಯ ಸಂರಕ್ಷಣೆಗಿರುವ ವೇದಿಕೆಯಾಗಿಸುವುದೇ ಕೋಲಾಯ ಕೂಟ್ಟದ ಉದ್ದೇಶ. ಪುರಾತನ ಕಾಲಗಳಲ್ಲಿ ಯಾವುದಾದರೂ ಒಂದು ಮನೆಯ ಅಂಗಳದಲ್ಲಿ ಜನ ಸೇರಿ ವಿಚಾರವೊಂದರ ಚರ್ಚೆ ನಡೆಸುತ್ತಿದ್ದ ಸಕಾರಾತ್ಮಕ ಕ್ರಮವನ್ನು ಇಲ್ಲಿ ಪುನರಾವರ್ತಿಸಲಾಗುತ್ತಿದೆ.
ಕುಡಿಯುವ ನೀರಿನ ಬರ, ತ್ಯಾಜ್ಯ ಸಮಸ್ಯೆ, ಆರೋಗ್ಯ ಸಮಸ್ಯೆ ಇತ್ಯಾದಿಗಳ ಕುರಿತು ವೈದ್ಯಾಧಿಕಾರಿಗಳು, ಆರೋಗ್ಯ ಇನ್‌ಸ್ಪೆಕ್ಟರ್‌ಗಳು, ಜನಪ್ರತಿನಿಧಿಗಳು ಮೊದಲಾದವರ ಸಮಕ್ಷದಲ್ಲಿ ಸಂವಾದ ನಡೆಸಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಶುಚಿತ್ವದ ಮಹತ್ವ, ತ್ಯಾಜ್ಯ ವಿಮುಕ್ತಿಯಿಂದ ರೋಗ ನಿಯಂತ್ರಣ, ಸೊಳ್ಳೆ ನಿಯಂತ್ರಣ ಮಾರ್ಗಗಳು ಇತ್ಯಾದಿ ವಿಚಾರಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ.
ಈ ಚರ್ಚೆಗಳಲ್ಲಿ ಭಾಗಿಗಳಾಗುತ್ತಿರು ವವರಿಗೆ ಪ್ರಾಚೀನ ತಿನಿಸಾದ ಬೇಯಿಸಿದ ಗೆಣಸು, ಹಾಲು ಬೆರೆಸದ ಚಹಾ ಇತ್ಯಾದಿ ವಿತರಿಸಲಾಗುತ್ತಿರುವುದೂ ಪ್ರಾಚೀನ ಸಂಸ್ಕೃತಿಗೆ ನೀಡುವ ಮಹತ್ವಿಕೆಯನ್ನು ತೋರುತ್ತದೆ. ರಾತ್ರಿಕಾಲದಲ್ಲಿ ನಡೆಯುವ ಸಭೆಗೆ ದೊಂದಿ ಬೆಳಕಿನ ಹಿಮ್ಮೇಳವೂ ಇದೆ. ಉತ್ತಮ ನಾಳೆಗಾಗಿ ಜನ ಒಗ್ಗೂಡಿ ತೀರ್ಮಾನ ಕೈಗೊಳ್ಳುವ ಈ ಪರಿಸರ ಪೂರಕ ವಿಧಾನ ನೂತನ ನಿರೀಕ್ಷೆಗಳಿಗೆ ಕಾರಣವಾಗಿದೆ.