ಹಂಪನಕಟ್ಟೆ: ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ನಿಭಾಯಿಸಿ ಬದುಕು ರೂಪಿಸಿಕೊಳ್ಳಬೇಕಾದುದು ಪ್ರತಿಯೊಬ್ಬರ ಹೊಣೆಗಾರಿಕೆ. ಯಾವುದೇ ಅಡ್ಡದಾರಿ ಹಿಡಿಯದೆ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ. ಎಸ್. ಬೀಳಗಿ ಅವರು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ ಪುರಭವನದಲ್ಲಿ ಜರಗಿದ ಕಾನೂನು, ನ್ಯಾಯ, ಲೇಖನಿ ಮತ್ತು ಮನಃಶಾಸ್ತ್ರದ ಜತೆ ವಿದ್ಯಾರ್ಥಿಗಳ ಮುಖಾಮುಖೀ’ ಚತುರ್ಮುಖ’ ಯುವ ಮನಸುಗಳ ಸಂವಾದ ಕಾರ್ಯಕ್ರಮವನ್ನು ಅವರು ಬುಧವಾರ ಉದ್ಘಾಟಿಸಿದರು.
ವೃತ್ತಿ ಜೀವನ ನಿರ್ವಹಣೆಯು ಉಪ ಜೀವನವಾಗಿರುತ್ತದೆ. ಜೀವನ ನಿರೂಪಿಸಿ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅದಕ್ಕಿಂತ ಮಿಗಿಲಾಗಿದೆ. ಸುಳ್ಳಿಗಾಗಿ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬೇಡಿ. ಅದರಿಂದ ಕ್ಷಣಿಕ ಲಾಭ ಸಿಕ್ಕಿದರೂ, ಜೀವನ ಪರ್ಯಂತ ತೊಂದರೆ ಅನುಭವಿಸಬೇಕಾಗುತ್ತದೆ. ಬದುಕು ರೂಪಿಸುವಾಗ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಟ್ಟರೆ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.
ಯುವವಾಹಿನಿ ಪ್ರ.ಕಾರ್ಯದರ್ಶಿ ರಾಜೇಶ್ ಸುವರ್ಣ, ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಮತ್ತಿತರರಿದ್ದರು. ಅಧ್ಯಕ್ಷ ಯಶವಂತ ಪೂಜಾರಿ ಸ್ವಾಗತಿಸಿ, ಉಪಾಧ್ಯಕ್ಷ ಜಯಂತ್ ವಂದಿಸಿದರು.
ನ್ಯಾಯವಾದಿ ಟಿ. ನಾರಾಯಣ ಪೂಜಾರಿ ಮತ್ತು ಲೋಕಾಯುಕ್ತ ಪ್ರಾಸಿ ಕ್ಯೂಟರ್ ರಾಜೇಶ್ ಕೆ. ಎಸ್. ಎನ್., ಮನಸ್ವಿನಿ ಸಂಸ್ಥೆಯ ಮನೋವೈದ್ಯ ಡಾ| ರವೀಶ್ ತುಂಗಾ, ಫಾದರ್ ಮುಲ್ಲರ್ ಆಸ್ಪತ್ರೆಯ ಮನೋವೈದ್ಯ ಡಾ| ಅರುಣಾ ಯಡಿಯಾಳ್, ಪಿಎಸ್‌ಐಗಳಾದ ಮಂಜುನಾಥ್, ರವೀಶ್, ಪತ್ರಕರ್ತರಾದ ಬಾಲಕೃಷ್ಣ ಪುತ್ತಿಗೆ ಮತ್ತು ಪಿ. ಬಿ. ಹರೀಶ್ ರೈ ಅವರೊಂದಿಗೆ ಸಂವಾದ ನಡೆಯಿತು.